Advertisement

ಹನುಮ ಮಾಲೆ ಸತ್ಕಾರ್ಯಗಳಿಗೆ ಪ್ರೇರಣೆ

10:06 AM Dec 04, 2022 | Team Udayavani |

ಚಿಕ್ಕೋಡಿ: ಈ ಹನುಮಮಾಲಾ ಕಾರ್ಯಕ್ರಮ ಯುವಕರಿಗೆ ಸತ್ಕಾರ್ಯ ಮಾಡಲು ಪ್ರೇರಣೆಯಾಗಲಿದೆ. ಸುಮಾರು 2500 ಜನ ಹನುಮ ಮಾಲಾಧಾರಿಗಳು ಸುಕ್ಷೇತ್ರ ಅಂಜನಾದ್ರಿಗೆ ಹೋಗಲಿದ್ದಾರೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಿಪ್ಪಾಣಿ ನಗರದ ಶ್ರೀ ವಿರುಪಾಕ್ಷಲಿಂಗ ಸಮಾಧಿ ಮಠದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ವತಿಯಿಂದ ಆಯೋಜಿಸಿದ್ದ ಹನುಮಮಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸಾರಥ್ಯದಲ್ಲಿ ಇಂತಹ ಒಂದು ಒಳ್ಳೆಯ ಕಾರ್ಯಕ್ರಮ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವುದು ನನಗೆ ನಿಜಕ್ಕೂ ಹೆಮ್ಮೆ ಇದೆ ಎಂದರು.

ಮುಖ್ಯ ವಕ್ತಾರರಾಗಿ ಭಾಗವಹಿಸಿದ್ದ ವಿಶ್ವಹಿಂದೂ ಪರಿಷತ್‌ ಮುಂಬಯಿ ಪ್ರಾಂತ ಪ್ರಮುಖ ಶಂಕರ ಗಾಯಕರ ಮಾತನಾಡಿ, ಯಾವುದು ನಾಶವಾಗುವುದಿಲ್ಲವೋ ಅದು ಸನಾತನ. ಇದುವೇ ಹಿಂದೂತ್ವ. ವಿಶ್ವದ ಯಾವುದೇ ಶಕ್ತಿ ಹಿಂದೂತ್ವವನ್ನು ಮುಗಿಸಲು ಸಾಧ್ಯವಿಲ್ಲ. ಬ್ರಿಟಿಷರು ನಮ್ಮ ದೇಶವನ್ನು ಇಬ್ಭಾಗಗೊಳಿಸಿಲ್ಲ. ದೇಶದ ಮೊದಲ ಪ್ರಧಾನಿ ದೇಶವನ್ನು ಇಬ್ಭಾಗಗೊಳಿಸಿದ್ದಾರೆ. ಇದು ಆತಂಕವಾದಕ್ಕೆ ಕಾರಣವಾಗಿದೆ. ನಾವು ಈ ಆತಂಕವಾದವನ್ನು ಹತ್ತಿಕ್ಕಬೇಕಾಗಿದೆ ಎಂದರು.

ದೇಶದ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜ, ಭಗತಸಿಂಗ್‌, ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪಿ ಇವರಂತಹ ಮಹಾನ್‌ ವ್ಯಕ್ತಿಗಳು ಪ್ರತಿಯೊಂದು ಮನೆಯಲ್ಲಿ ಜನ್ಮಕ್ಕೆ ಬರಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕನೇರಿ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರಾಷ್ಟ್ರ ನಿರ್ಮಾಣ ಕಾರ್ಯವನ್ನು ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗದಳ ಮಾಡುತ್ತಿದೆ. ಯುವಕರಿಗೆ ಸನ್ಮಾರ್ಗ ತೋರಿಸಿದ ಹನುಮಂತ ಪುರಾತನ ಕಾಲದಿಂದಲೂ ನಮ್ಮ ಆದರ್ಶ. ಗುರುಕುಲದಲ್ಲಿ ನಾವು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತೇವೆ, ರಾಷ್ಟ್ರಕ್ಕಾಗಿ ಒಳ್ಳೆಯ ಪ್ರಜೆಯನ್ನಾಯಾಗಿಸುತ್ತೇವೆ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ನಮ್ಮ ತಲೆಮಾರು ಸುರಕ್ಷಿತವಾಗಿರಬೇಕು. ಅದಕ್ಕಾಗಿ ಹನುಮ ಮಾಲಾ. ಮಾಲೆ ಧಾರಣೆ ಮಾಡಿದ ನಂತರ ನಮ್ಮ ಅಂತರ್‌ ಮನ ಶುದ್ಧ ಮಾಡುತ್ತದೆ. ಯುವಕರಲ್ಲಿ ಆದರ್ಶಗಳ ಪರಿಪಾಲನೆಗೆ ಪ್ರೇರೇಪಿಸುತ್ತದೆ. ನಿರ್ವ್ಯಸನಿಯಾಗಿ, ಬಲಶಾಲಿಯಾಗಿ ಬದುಕಿ. ನಮ್ಮ ದೇಶವನ್ನು ನಾವೇ ಸುರಕ್ಷಿತವಾಗಿಡಬೇಕು ಎಂದರು.

Advertisement

ಜೊಲ್ಲೆ ಗ್ರೂಪ್‌ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಬೆಳಿಗ್ಗೆ 6 ಗಂಟೆಗೆ ಹನುಮಮಾಲಾ ಧಾರಣೆ ಹಾಗೂ ಪವಮಾನ ಹೋಮ ಜರುಗಿತು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಶಿರೋಳದ ಶಂಕರಾರೂಢ ಸ್ವಾಮೀಜಿ, ವಿರುಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶೈಲೇಂದ್ರ ಪಾರೀಖ, ಸಂಜಯ ಅಡಕೆ, ಸುಚಿತ್ರಾ ಕುಲಕರ್ಣಿ, ಜ್ಯೋತಿಪ್ರಸಾದ ಜೊಲ್ಲೆ, ರಾಜು ಬದರಗಡೆ, ಹಾಲಸಿದ್ದನಾಥ ಕಾರ್ಖಾನೆಯ ಉಪಾಧ್ಯಕ್ಷ ಎಮ್‌. ಪಿ. ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡಾ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ, ನಗರಸಭೆ ಅಧ್ಯಕ್ಷ ಜಯಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್‌ ರಾಜೇಂದ್ರ ಗುಂಡೆಶಾ ಉಪಸ್ಥಿತರಿದ್ದರು.

ವಿಜಯ ರಾವುತ ವಂದಿಸಿದರು. ರಮೇಶ ಪಾಟೀಲ ನಿರೂಪಿಸಿದರು.ಏಕತೆಯಲ್ಲಿ ಬಲವಿದೆ. ಹಾಗಾಗಿ ಎಲ್ಲ ಹಿಂದೂಗಳು ಒಗ್ಗೂಡಬೇಕು. ಜೊಲ್ಲೆ ದಂಪತಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಕಟ ಕಾಲದಲ್ಲಿ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next