ಮಂಗಳೂರು: ವಿಮಾನವನ್ನು ಚಲಾಯಿಸಬೇಕೆಂಬ ಬಾಲ್ಯದ ಕನಸನ್ನು ತನ್ನ 21ನೇ ವಯಸ್ಸಿನಲ್ಲಿ ನನಸಾಗಿಸಿದ್ದಾರೆ ಮಂಗಳೂರಿನ ಪಾಂಡೇಶ್ವರದ ಯುವತಿ ಹನಿಯಾ ಹನೀಫ್.
ಪ್ರಸ್ತುತ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆದಿರುವ ಹನಿಯಾ ಮೂಲತಃ ಕಾಪುವಿನವರಾದ, ಪ್ರಸ್ತುತ ಪಾಂಡೇಶ್ವರದಲ್ಲಿ ನೆಲೆಸಿರುವ ಮುಹಮ್ಮದ್ ಹನೀಫ್ ಮತ್ತು ನಾಝಿಯಾ ದಂಪತಿಯ ಪುತ್ರಿ.
9ನೇ ತರಗತಿ ವರೆಗೆ ದುಬಾೖಯ “ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಕಲಿತು, ಬಳಿಕ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ 10ನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದು ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಶನ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದಿದ್ದಾರೆ. ಮೂರೂವರೆ ವರ್ಷದ ತರಬೇತಿ ಬಳಿಕ ಕಮರ್ಷಿಯಲ್ ಪೈಲಟ್ ಪರವಾನಿಗೆ ಪಡೆದಿರುವ ಹನಿಯಾ, 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
“ಹನಿಯಾಗೆ ಬಾಲ್ಯದಿಂದಲೇ ಪೈಲಟ್ ಆಗಬೇಕೆಂಬ ಆಸೆ. ಆದರೆ ಬೆಳೆಯುತ್ತಾ ಅದು ಬದಲಾಗಬಹುದು ಎಂಬುದು ನಮ್ಮ ಅನಿಸಿಕೆಯಾಗಿತ್ತು. ಆದರೆ ಪಿಯುಸಿ ಬಳಿಕ ಆಕೆ ಪೈಲಟ್ ಕಲಿಯಬೇಕೆಂದು ಹೇಳಿದಾಗ ಅವಳಿಚ್ಛೆಯಂತೆ ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಶನ್ ಅಕಾಡೆಮಿಗೆ ಸೇರಿಸಲಾಯಿತು. ಅವಳ ಕನಸನ್ನು ಅವಳು ಈಡೇರಿಸಿಕೊಂಡ ಬಗ್ಗೆ ನಮಗೂ ಹೆಮ್ಮೆ ಇದೆ” ಎನ್ನುತ್ತಾರೆ ಹನಿಯಾರ ತಾಯಿ ನಾಝಿಯಾ.