Advertisement

ಪಾಸ್‌ ಇದ್ದರೂ ನೇತಾಡುವ ಸ್ಥಿತಿ

10:51 AM Dec 14, 2018 | Team Udayavani |

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿವರ್ಷ ಸುಮಾರು 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪಾಸ್‌ಗಳನ್ನು ನೀಡಲಾಗುತ್ತಿದೆ. ಆದರೆ ಶಾಲಾ ವಿದ್ಯಾರ್ಥಿಗಳು ಪಾಸ್‌ ಸೌಲಭ್ಯವನ್ನು ಪಡೆದುಕೊಂಡು ಬಸ್‌ನ ಬಾಗಿಲಿನಲ್ಲೇ ನೇತಾಡಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

Advertisement

ದಿನನಿತ್ಯ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ವಿದ್ಯಾರ್ಥಿಗಳು ಸರಕಾರಿ ಬಸ್‌ಗಳನ್ನೇ ಅವಲಂಬಿಸಿಕೊಂಡು ವಿವಿಧ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಸಮಯಕ್ಕೆ ಸರಿಯಾಗಿ ಆವಶ್ಯಕತೆಯಷ್ಟು ಬಸ್‌ಗಳ ಸೌಲಭ್ಯವಿಲ್ಲದೆ ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ವೇಳೆ ವಿದ್ಯಾರ್ಥಿಗಳು ಬಸ್‌ನ ಮೆಟ್ಟಿಲಲ್ಲೇ ನೇತಾಡಿಕೊಂಡು ಹೋಗುವ ಪರಿಸ್ಥಿತಿಯಿದ್ದು, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯ ಸ್ಪಂದನೆ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಸೇರಬೇಕಾದರೆ ಬೆಳಗ್ಗಿನ ನಿಗದಿತ ಸಮಯದ ಒಂದೋ ಎರಡೋ ಬಸ್‌ ಗಳನ್ನು ಏರಬೇಕು. ಸಂಜೆಯೂ ಇದೇ ಪಾಡು. ಒಂದು ಬಸ್‌ ಬಿಟ್ಟು ಬೇರೊಂದರಲ್ಲಿ ಹೋಗೋಣ ಎಂದುಕೊಂಡರೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗಲು ಆಗುವುದಿಲ್ಲ. ಹೀಗೆ ದಿನನಿತ್ಯ ವಿದ್ಯಾರ್ಥಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ.

ಸಾಮರ್ಥಯಕ್ಕಿಂತ ಹೆಚ್ಚು ಮಂದಿ
ವಾರ್ಷಿಕ ಪಾಸ್‌ ಪಡೆದುಕೊಂಡು ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮಾತ್ರ ಸಮಯಕ್ಕೆ ಸರಿಯಾಗಿ ಅಗತ್ಯಕ್ಕೆ ತಕ್ಕಂತೆ ಬಸ್‌ ಸಂಚಾರವಿಲ್ಲದೆ ಒಂದೇ ಬಸ್‌ನಲ್ಲಿ ಅದರ ಸಾಮರ್ಥಯಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬೆರಳೆಣಿಕೆಯ ಬಸ್‌ ಗಳಲ್ಲಿ ಸಮರ್ಪಕವಾದ ಬಾಗಿಲಿನ ವ್ಯವಸ್ಥೆಯಾಗಲಿ, ಕಿಟಕಿಗಳ ಗಾಜುಗಳ ವ್ಯವಸ್ಥೆಯಾಗಲಿ ಸರಿಯಿಲ್ಲ ಎನ್ನುವ ದೂರು ಇದೆ. ಕೇವಲ ವಿದ್ಯಾರ್ಥಿಗಳು ಮಾತ್ರ ಸಂಚರಿಸುವುದಲ್ಲದೆ ಮಾಸಿಕ ಪಾಸ್‌ ಪಡೆದ ಎಷ್ಟೋ ಮಂದಿ ನೌಕರರು ಕೂಡ ಸರಕಾರಿ ಬಸ್ಸನ್ನೇ ಅವಲಂಬಿಸಿದ್ದು ಅವರ ಕಷ್ಟವೂ ದೇವರಿಗೆ ಪ್ರೀತಿ.

ಕ್ರಮಕ್ಕೆ ಅವಕಾಶವಿದೆ
ಬಸ್‌ಗಳಲ್ಲಿ ನೇತಾಡಿಕೊಂಡು ಹೋದರೆ ಅದಕ್ಕೆ ಕ್ರಮಕೈಗೊಳ್ಳುವ ಅವಕಾಶವಿದೆ. ಆದರೆ ಸದ್ಯಕ್ಕೆ ನಾನು ಬೆಳಗಾವಿ ಅಧಿವೇಶನದ ಕರ್ತವ್ಯದಲ್ಲಿದ್ದೇನೆ.
– ಓಡಿಯಪ್ಪ ಗೌಡ,
ಸಬ್‌ ಇನ್‌ಸ್ಪೆಕ್ಟರ್‌ ಬೆಳ್ತಂಗಡಿ ಸಂಚಾರಿ ಠಾಣೆ 

ಅಪಾಯ ತಪ್ಪಿಸಿ
ಶಾಲಾ ವಾಹನಗಳಿಗೆ ಇರುವ ಕಟ್ಟುನಿಟ್ಟಿನ ನೀತಿಯನ್ನು ಬಸ್‌ಗಳಿಗೂ ಅನ್ವಯಿಸುವಂತೆ ಮಾಡಿದರೆ ಆವಶ್ಯಕತೆಯಷ್ಟು ಬಸ್‌ಗಳ ಸೌಲಭ್ಯ ಲಭಿಸಬಹುದು. ಶಾಲಾ ಕಾಲೇಜಿನ ಮಕ್ಕಳಿಗೆ ನೀಡಿದ ಪಾಸ್‌ಗಳ ಆಧಾರದಲ್ಲಿ ಹೆಚ್ಚುವರಿ ಬಸ್‌ಗಳನ್ನು ನೀಡಬೇಕಾಗಿರುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ. ಜತೆಗೆ ಇತರ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎನ್ನುವ ಮಾತು ಪ್ರಯಾಣಿಕರದ್ದು. ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮಕೈಗೊಂಡು ಹೆಚ್ಚುವರಿ ಬಸ್‌ ಸೌಲಭ್ಯವನ್ನು ಒದಗಿಸಿ ಅಪಾಯವನ್ನು ತಪ್ಪಿಸಬೇಕಾಗಿದೆ.

Advertisement

ಬಸ್‌ ಟ್ರಿಪ್‌ ಹೆಚ್ಚಿಸಲಾಗಿದೆ
ಧರ್ಮಸ್ಥಳ – ಮಂಗಳೂರು ಮಾರ್ಗವಾಗಿ ಮಂಗಳೂರು ವಿಭಾಗದ ಬಸ್‌ಗಳು ಓಡುತ್ತಿರುವುದರಿಂದ ಪುತ್ತೂರು ವಿಭಾಗದ ಬಸ್‌ಗಳನ್ನು ಹಾಕುವಂತಿಲ್ಲ. ಕಳೆದ ವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿದ ಸೂಚನೆಯಂತೆ ಈಗಾಗಲೇ ಬಸ್‌ಗಳ ಟ್ರಿಪ್‌ಗ್ಳನ್ನು ಹೆಚ್ಚಿಸಲಾಗಿದೆ. ಜತೆಗೆ ನಿಲುಗಡೆಯ ಬದಲಾವಣೆ ಕೂಡ ನಡೆದಿದೆ. ಮುಂದೆ ಇನ್ನಷ್ಟು ಬೇಡಿಕೆಗಳು ಇದ್ದಲ್ಲಿ ಮಂಗಳೂರು ವಿಭಾಗದವರೇ ನೀಡಬೇಕು.
ಶಿವರಾಮ್‌ ನಾಯ್ಕ,
 ಡಿಪೊ ಮೆನೇಜರ್‌, ಧರ್ಮಸ್ಥಳ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next