Advertisement

ನಿರ್ವಹಣೆ ಇಲ್ಲದೆ ಸೊರಗುತ್ತಿವೆ ಪಡುಕುದ್ರು -ತಿಮ್ಮಣ್ಣಕುದ್ರು ತೂಗು ಸೇತುವೆ

08:47 PM Sep 29, 2021 | Team Udayavani |

ಮಲ್ಪೆ: ಉಡುಪಿ ತಾಲೂಕಿನ ತೋನ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿಗೆ ಸಂಪರ್ಕ ಕಲ್ಪಿಸುವ, ಪ್ರವಾಸೋದ್ಯಮಕ್ಕೆ ಮೆರುಗನ್ನು ನೀಡುತ್ತಿದ್ದ ತೂಗು ಸೇತುವೆ ಇದೀಗ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

Advertisement

ಪ್ರವಾಸಿಗರ ಆಕರ್ಷಣೀಯ ಕೇಂದ್ರ
1991ರಲ್ಲಿ ಈ ತೂಗು ಸೇತುವೆ ನಿರ್ಮಾಣ ಗೊಂಡಿತ್ತು. ತೂಗು ಸೇತುವೆಯ ಸರದಾರ ಸುಳ್ಯದ ಗಿರೀಶ್‌ ಭಾರಧ್ವಜ್‌ ಅವರ ಮಾರ್ಗದರ್ಶ ನದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಸುವರ್ಣ ನದಿಗೆ ಅಡ್ಡಲಾಗಿ ಕಟ್ಟಿದ ತೂಗು ಸೇತುವೆ ಸಾಕಷ್ಟು ಪ್ರಸಿದ್ಧಿಗೂ ಪಾತ್ರ ವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ಎಲ್ಲರನ್ನೂ ಆಕರ್ಷಿಸುವ ಈ ಸೇತುವೆ ನೋಡಲೆಂದೇ ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕೆಮ್ಮಣ್ಣುವಿನಿಂದ ಸುಮಾರು 2 ಕಿ.ಮೀ. ದೂರ. ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಗಳನ್ನು ನೋಡಲು ಜನ ಸಾಗರೋಪಾದಿಯಲ್ಲಿ ಅಗಮಿಸುತ್ತಿದ್ದಾರೆ. ಜೋಲಾಡುತ್ತಿರುವ ತೂಗು ಸೇತುವೆಯಲ್ಲಿ ಸಂಚರಿಸಿ ಸಂಭ್ರಮಿಸುತ್ತಿದ್ದಾರೆ. ಜತೆಗೆ ಇದೀಗ ಆರಂಭವಾಗಿರುವ ಬೋಟಿಂಗ್‌ನ ಆನಂದವನ್ನು ಸವಿಯುತ್ತಿದ್ದಾರೆ.

ತುಂಡಾಗಿರುವ ತಡೆಗೋಡೆ,
ಬಿರುಕು ಬಿಟ್ಟ ಹಲಗೆ
ಸುಮಾರು 280 ಅಡಿಗಳಷ್ಟು ಉದ್ದವಾಗಿರುವ ಈ ಸೇತುವೆಯಲ್ಲಿ 142 ಸಿಮೆಂಟ್‌ ಹಲಗೆಗಳನ್ನು ಅಳವಡಿಸಲಾಗಿದೆ. ಆರಂಭದ ಕೆಲವು ವರ್ಷ ಸೇತುವೆ ಮೇಲೆ ಮರದ ಹಲಗೆಯನ್ನು ನಿರ್ಮಿಸಲಾಗಿತ್ತು. ಆ ಬಳಿಕ ಸಿಮೆಂಟ್‌ ಹಲಗೆ ಅಳವಡಿಸಲಾಗಿದೆ. ಇದೀಗ ಸರಿಯಾದ ನಿರ್ವಹಣೆ ಆಗದೆ ಸೇತುವೆ ಮೇಲೆ ಅಳವಡಿಸಲಾಗಿರುವ ಕಾಂಕ್ರೀಟ್‌ ಹಲಗೆಗಳಲ್ಲಿ ಮಧ್ಯೆ ಒಂದೆರಡು ಹಲಗೆಗಳು ಒಡೆದಿದ್ದು, ಈ ಭಾಗದಲ್ಲಿ ಎಚ್ಚರ ತಪ್ಪಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಸೇತುವೆಯ ಎರಡೂ ಬದಿಗೆ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ತಡೆಗೋಡೆ ಕೆಲವೆಡೆ ತುಂಡಾಗಿದೆ.

ಇದನ್ನೂ ಓದಿ:ನಾಯಿಯೆಂದು ಚಿರತೆಯನ್ನು ಬಾವಿಯಿಂದ ಮೇಲೆತ್ತಿದರು…!

ಸೇತುವೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ವೈಯರ್‌ ರೋಪ್‌ಗ್ಳಿಗೆ ಗ್ರೀಸಿಂಗ್‌ ಮಾಡದೆ ಐದಾರು ವರ್ಷಗಳು ಕಳೆದಿವೆ ಎನ್ನಲಾಗುತ್ತಿದೆ. ಎಲ್ಲ ನಟ್‌ ಬೋಲ್ಟ್‌ಗಳು ಕೆಲವೆಡೆ ತುಕ್ಕು ಹಿಡಿದು ಹಾಳಾಗುತ್ತಿದೆ. ತೂಗು ಸೇತುವೆ ವೀಕ್ಷಿಸಲು ಅಗಮಿಸುವವರು ಎಚ್ಚರದಿಂದ ಇರಬೇಕಾಗಿರುವುದು ಅತೀ ಅಗತ್ಯ. ಕಳೆದ ವರ್ಷ ಈ ತೂಗು ಸೇತುವೆಯ ಎರಡು ಮೂರು ಹಲಗೆಗಳು ಒಡೆದು ಹೋಗಿತ್ತು. ಈ ಬಗ್ಗೆ ದುರಸ್ತಿಗೆ ಇಲಾಖೆಯಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಸ್ಥಳೀಯ ವಾಟರ್‌ ನ್ಪೋರ್ಟ್ಸ್ನ ಯುವಕರ ತಂಡ ದುರಸ್ತಿಪಡಿಸಿದ್ದಾರೆನ್ನಲಾಗುತ್ತಿದೆ.

Advertisement

ಬೆಂಗಳೂರು, ಮೈಸೂರಿನಿಂದ ಔಟ್‌ಡೋರ್‌ ವೆಡ್ಡಿಂಗ್‌ ಶೂಟಿಂಗ್‌, ಆಲ್ಬಂ ಸಾಂಗ್‌ ಇನ್ನಿತರ ಚಿತ್ರೀಕರಣಕ್ಕೆ ಜನ ಇಲ್ಲಿಗೆ ಬರುತ್ತಾರೆ. ಮೂರ್‍ನಾಲ್ಕು ಬೈಕ್‌ಗಳನ್ನು ಚಲಾಯಿಸಿಕೊಂಡು ಬರುವುದು, ಸೇತುವೆ ರಾಡ್‌ನ‌ಲ್ಲಿ ಐದಾರು ಮಂದಿ ನಿಂತು ನೇತಾಡುವ ಚಿತ್ರೀಕರಣ ನಡೆಸುತ್ತಾರೆ. ಇನ್ನು ಕೆಲವರು ಸೇತುವೆ ಮೇಲೆ ಕುಣಿಯುವುದು, ಕುಪ್ಪಳಿಸುವುದರಿಂದಲೂ ಸೇತುವೆ ಹಾನಿ ಗೊಳ್ಳುತ್ತಿದೆ ಎನ್ನುತ್ತಾರೆ ಸ್ಥಳೀಯರು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಹೇರುವ ಮೂಲಕ ಜಿಲ್ಲೆಯ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ರುವ ಈ ತೂಗು ಸೇತುವೆ ಸಂರಕ್ಷಣ ಕಾರ್ಯ ನಡೆಯಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಕಡಿವಾಣ ಹಾಕಲಿ
ಸೇತುವೆಯ ಮೇಲೆ, ಮನಬಂದಂತೆ ಯದ್ವಾತದ್ವವಾಗಿ ಶೂಟಿಂಗ್‌ ನಡೆಸುವುದು, ಬೈಕ್‌ ಚಲಾಯಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ಬೇಕಿದ್ದರೆ ಸೇತುವೆ ಕೆಳಭಾಗದಲ್ಲಿ ಚಿತ್ರೀಕರಣ ನಡೆಸಲಿ, ಬೈಕ್‌ ಸಂಚಾರಕ್ಕೂ ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಕಡಿವಾಣವನ್ನು ಹಾಕಬೇಕಾಗಿದೆ.
-ಹರೀಶ್‌ ಶೆಟ್ಟಿ ಕೆಮ್ಮಣ್ಣು, ಸ್ಥಳೀಯರು

ವರ್ಷದೊಳಗೆ ಯೋಜನೆ
ಬಿರುಕು ಬಿಟ್ಟ ಸಿಮೆಂಟ್‌ ಹಲಗೆ, ಮುರಿದ ಕಬ್ಬಿಣದ ರಾಡ್‌ಗಳನ್ನು ಪಂಚಾಯತ್‌ ವತಿಯಿಂದ ಸರಿಪಡಿಸಲಾಗುವುದು. ಮುಂದೆ ಸೇತುವೆ ಪ್ರವೇಶದ ಎರಡೂ ಭಾಗದಲ್ಲಿ ಮೆಟ್ಟಿಲುಗಳನ್ನು ಅಳವಡಿಸುವ ಮೂಲಕ ಬೈಕ್‌ ಸಂಚಾರವನ್ನು ನಿಷೇಧಿಸುವ ಮತ್ತು ತೂಗುಸೇತುವೆಯನ್ನು ಒಂದು ಪಿಕ್‌ನಿಕ್‌ ಸ್ಪಾಟ್‌ ಆಗಿ ಮಾಡುವ ಯೋಜನೆಯನ್ನು ಮುಂದಿನ ವರ್ಷದೊಳಗೆ ರೂಪಿಸಲಾಗುತ್ತದೆ.
– ದಿನಕರ್‌, ಕಾರ್ಯದರ್ಶಿ, ತೋನ್ಸೆ ಗ್ರಾಮ ಪಂಚಾಯತ್‌

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next