Advertisement

ಎರಡು ಕಾಲಿಲ್ಲದಿದ್ದರೂ ಕುರಿ ಸಾಕಿ ಲಕ್ಷ ಲಕ್ಷ ಎಣಿಸುವ ದಿವ್ಯಾಂಗ!

02:32 PM Nov 15, 2021 | Team Udayavani |

ಎಚ್‌.ಡಿ.ಕೋಟೆ: ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದ ಕೆಲಸವು ಮುಂದೆ.. ಮನಸ್ಸೊಂದಿದ್ದರೆ ಮಾರ್ಗವು… ದುಡಿಮೆಯ ನಂಬಿ ಬದುಕು…

Advertisement

ಡಾ|ರಾಜ್‌ ಅಭಿನಯದ “ಬಂಗಾರದ ಮನುಷ್ಯ’ ಚಿತ್ರದ ಜನಪ್ರಿಯ ಈ ಗೀತೆಯು ದಿವ್ಯಾಂಗ ರೈತ ರಾಯಪ್ಪನಿಗೆ ಅಕ್ಷರಶಃ ಅನ್ವಯಿಸುತ್ತದೆ. ಎರಡೂ ಕಾಲಗಳನ್ನು ಕಳೆದುಕೊಂಡಿದ್ದರೂ ಕೃಷಿಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂ. ಲಾಭಗಳಿಸಿ, ರೈತರಿಗೆ ಮಾದರಿಯಾಗಿದ್ದಾರೆ.

ಕೋಟೆ ತಾಲೂಕಿನ ನಾಗನಹಳ್ಳಿಯ ರಾಯಪ್ಪ (34) ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಂಕಷ್ಟಗಳ ಮಧ್ಯೆಯೂ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈತ ಓದಿರುವುದು 3ನೇ ತರಗತಿ ಮಾತ್ರ. ಆದರೂ ಅನಕ್ಷರಸ್ಥನಲ್ಲ, ಹೈನುಗಾರಿಕೆಯಲ್ಲಿ ತೊಡಗಿರುವ ರಾಯಪ್ಪ ತಂತ್ರಜ್ಞಾನ ಅಳವಡಿಸಿಕೊಂಡು, ದೇಶ ವಿದೇಶಗಳ ತಳಿ ಕುರಿ ಮೇಕೆಗಳ ಸಾಕಾಣಿಕೆ ಮಾಡಿ, ಕೈ ತುಂಬಾ ರೊಕ್ಕ ಎಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:- ಬಿಟ್ ಕಾಯಿನ್ ವಿಚಾರವನ್ನು ಕಾಂಗ್ರೆಸ್ ನವರು ಕೇವಲ ರಾಜಕೀಯಕ್ಕೆ ಬಳಸುತ್ತಿದ್ದಾರೆ: ಸಿಎಂ

ರಾಯಪ್ಪನ ಕೆಲಸಕ್ಕೆ ಆತನ ಪತ್ನಿ ಸವಿತಾ ಬೆನ್ನೆಲುಬಾಗಿ ನಿಂತಿದ್ದು, ಎಂಎ, ಬಿ.ಇಡ್‌ ಪದವೀಧರೆಯಾಗಿರುವ ಸವಿತಾಳನ್ನು ರಾಯಪ್ಪ ಪ್ರೀತಿಸಿ ಅಂತರ್‌ಜಾತಿ ವಿವಾಹವಾಗಿದ್ದು, ಈ ದಂಪತಿಗೆ ಓರ್ವ ಪುತ್ರನಿದ್ದಾನೆ. 7 ವರ್ಷಗಳ ಹಿಂದೆ ತೆಂಗಿನ ಮರವೇರಿದ್ದ ರಾಯಪ್ಪ ಆಕಸ್ಮಿಕವಾಗಿ ಕೆಳಗಿ ಬಿದ್ದ ಪರಿಣಾಮ ಬೆನ್ನು ಮೂಳೆಗೆ ಬಲವಾದ ಏಟು ಬಿದ್ದದ್ದರಿಂದ ಎರಡೂ ಕಾಲು ಸ್ವಾಧಿನ ಕಳೆದುಕೊಂಡಿದ್ದರು.

Advertisement

ಪತ್ನಿ ಬೆನ್ನೆಲುಬು: ಒಂದೆಡೆ ಕಾಲುಗಳನ್ನು ಕಳೆದು ಕೊಂಡು, ಮತ್ತೂಂದೆಡೆ ಬಡತನದಿಂದ ನೊಂದಿದ್ದ ರಾಯಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಪತ್ನಿಯ ಆತ್ಮಸ್ಥೈರ್ಯದ ಮಾತುಗಳಿಂದ ಪ್ರೇರೇಪಿತನಾದ ರಾಯಪ್ಪ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಗುರಿ ಯೊಂದಿಗೆ ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡರು. ಇದಕ್ಕೆ ಪತ್ನಿ ಸವಿತಾ ಒತ್ತಾಸೆಯಾಗಿ ನಿಂತರು.

210 ಕುರಿ ಮೇಕೆ ತಳಿ: ಆರಂಭದಲ್ಲಿ 3-4 ಕುರಿ ಮೇಕೆಗಳ ಪೋಷಣೆಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಈ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುತ್ತಾ ಹೋದರು. ಜೊತೆಗೆ ದೇಶಿಯ ಹಾಗೂ ವಿದೇಶಿ ತಳಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ದೊಡ್ಡ ಪ್ರಮಾಣ ದಲ್ಲಿ ಹೈನೋದ್ಯಮ ದಲ್ಲಿ ತೊಡಗಿದರು.

ಶರಾಯಿ, ಉಸ್ಮನಿಶಾರ್‌, ಸ್ಥಳೀಯ ಮೇಕೆಗಳು, ತುಮಕೂರು ತಳಿಯ ಮೇಕೆ ಹಾಗೂ ರ್‍ಯಾಂಬ್ಲೇಟ್‌ ಕ್ರಾಸ್‌, ರ್‍ಯಾಂಬ್ಲೇಟ್‌ ಫ್ಯೂರ್‌, ಮಂದೆ ಕುರಿಗಳು ಸೇರಿದಂತೆ ವಿವಿಧ ತಳಿಗಳ ಒಟ್ಟು 210 ವಿವಿಧ ಮೇಕೆ ಮತ್ತು ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕುರಿ, ಮೇಕೆಗಳಿಗೆ ಅತ್ಯುತ್ತಮ ಬೆಲೆ ಇರುವುದರಿಂದ ಲಾಭಗಳಿಸುತ್ತಲೇ ಹೋದರು.

 ಪ್ರತ್ಯೇಕ ಕೌಂಟರ್‌ಗಳು: ಒಂದೊಂದು ತಳಿಗಳ ಕುರಿ ಹಾಗೂ ಮೇಕೆಗಳಿಗೆ ಅನುಗುಣವಾಗಿ ಪ್ರತ್ಯೇಕ ಕೌಂಟರ್‌ ತೆರೆದಿದ್ದಾರೆ. ಗರ್ಭ ಧರಿಸಿದ ಮೇಕೆ ಕುರಿಗಳಿಗೂ ಪ್ರತ್ಯೇಕ ಕೌಂಟರ್‌ ತೆರೆದು ಜನಿಸಿ ಮರಿಗಳಿನ್ನು ಪ್ರತ್ಯೇಕವಾಗಿ ಇರಿಸಿ, ಪೋಷಿಸುತ್ತಿದ್ದಾರೆ.

ಹೆಚ್ಚು ತೂಕ ಹೊಂದಿರುವ ಕುರಿಗಳು: ಫ್ರಾನ್ಸ್‌ ತಳಿ ಕುರಿಗಳನ್ನು ಚಿಕ್ಕಬಳ್ಳಾಪುರದಿಂದ ಖರೀದಿಸುತ್ತಾರೆ. ಫ್ರಾನ್ಸ್‌ ಕುರಿ ತಳಿಗಳು 2 ವರ್ಷದಲ್ಲಿ 60ರಿಂದ 70 ಕೆ.ಜಿ. ತೂಕ ಹೊಂದುತ್ತವೆ. ಸ್ಥಳೀಯ ಕುರಿ ಮತ್ತು ಮೇಕೆಗಳು 2 ವರ್ಷದಲ್ಲಿ ಕೇವಲ 20ರಿಂದ 25 ಕೆ.ಜಿ. ತೂಕ ಹೊಂದುತ್ತವೆ.

ಫ್ರಾನ್ಸ್‌ ತಳಿಗಳಿಗೆ ಹೊರಗಡೆ ವಿಶೇಷವಾದ ಬೇಡಿಕೆ ಇದ್ದು, ಆರಂಭದಲ್ಲಿ ಇವುಗಳಿಗೆ 12ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದ ರಾಯಪ್ಪ ಇದೀಗ 3 ತಿಂಗಳಲ್ಲಿ 20 ಲಕ್ಷ ರೂ.ಗಳಿಸಿ, 8 ಲಕ್ಷ ರೂ. ನಿವ್ವಳ ಲಾಭ ಪಡೆದುಕೊಂಡಿದ್ದಾರೆ.

ಆಹಾರ ತಯಾರಿಕೆ: ಕುರಿ, ಮೇಕೆಗಳಿಗೆ ಸ್ಥಳೀಯವಾಗಿಯೇ ದೊರೆಯುವ ಮುಸುಕಿನ ಜೋಳ ಹಾಗೂ ಜೋಳದ ಕಡ್ಡಿಯನ್ನು ಬಳಸಿ ಪಶು ಆಹಾರ ತಯಾರಿಸುತ್ತಾರೆ. ಯಂತ್ರಗಳನ್ನು ಬಳಸಿಕೊಂಡು ಆಹಾರ ಉತ್ಪಾದಿಸುತ್ತಾರೆ. ಹೀಗಾಗಿ ಹೈನೋದ್ಯಮಕ್ಕೆ ಆಹಾರದ ಕೊರತೆ ಎದುರಾಗುವುದಿಲ್ಲ. ಪೌಷ್ಟಿಕ ಆಹಾರ ಸಿಗುವುದರಿಂದ ಕುರಿ ಮೇಕೆಗಳು ದಷ್ಟಪುಷ್ಟವಾಗಿ ಬೆಳೆಯಲು ಅನುಕೂಲವಾಗುತ್ತದೆ.

8-10 ಮಂದಿಗೆ ಉದ್ಯೋಗ: ಕುರಿ ಮೇಕೆಗಳ ಪೋಷನೆ, ನಿರ್ವಹಣೆ, ಆಹಾರ ತಯಾರಿಕೆಗಾಗಿ 8-10 ಕಾರ್ಮಿಕರಿಗೆ ಇಟ್ಟುಕೊಂಡು ಅವರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಮನೆಯಲ್ಲೇ ತಯಾರಿಸಿದ ಆಹಾರವನ್ನು ಸುಮಾರು ಒಂದೂವರೆ ತಿಂಗಳು ಕಾಲ ದಾಸ್ತಾನು ಮಾಡಬಹುದು. ಆಹಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗದಂತೆ ನಿಗಾವಹಿಸಿದ್ದಾರೆ.

ತಜ್ಞರು, ನುರಿತ ವೈದ್ಯರ ಸಲಹೆ ಪಡೆದುಕೊಂಡು ಹೈನೋದ್ಯಮದಲ್ಲಿ ತೊಡಗಿರುವ ರಾಯಪ್ಪ ಕೂಡ ನಾಟಿ ವೈದ್ಯನ ರೀತಿ ಪಳಗಿದ್ದಾರೆ. ಅಗತ್ಯಬಿದ್ದರೆ ಕುರಿಗಳಿಗೆ ತಗುಲುವ ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಯಪ್ಪನೇ ಚಿಕಿತ್ಸೆ ನೀಡುತ್ತಾರೆ. ಮೇಕೆ, ಕುರಿಗಳು ಆರೋಗ್ಯವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ಮನಸ್ಸಿದ್ದರೆ ಯಾವುದೇ ಸಾಧನೆ ಮಾಡಬಹುದು ಎಂಬುದಕ್ಕೆ ರಾಯಪ್ಪ ಉದಾಹರಣೆಯಾಗಿದ್ದಾರೆ. ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ ಛಲದಿಂದ ಹೈನೋದ್ಯಮದಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂ. ಲಾಭ ಪಡೆಯುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

“ಕುರಿ ಮೇಕೆ ಸಾಕಾಣಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿ ಕೊಂಡಿರುವುದರಿಂದ ನಿರ್ವಹಣೆ ಸುಲಭವಾಗಿದೆ. ನನ್ನ ಕಾಯಕಕ್ಕೆ ಪತ್ನಿ ಬೆನ್ನೆಲುಬಾಗಿದ್ದಾರೆ. ಪ್ರಾರಂಭದಲ್ಲಿ ನಿರುದ್ಯೋಗಿ ಆಗಿದ್ದ ನಾನು ಇದೀಗ 8-10 ಮಂದಿಗೆ ಉದ್ಯೋಗ ಕಲ್ಪಿಸಿದ್ದೇನೆ. ಶ್ರದ್ಧೆ, ಪರಿಶ್ರಮ ಪಟ್ಟರೆ ಯಾವುದರಲ್ಲೂ ನಷ್ಟ ಆಗುವುದಿಲ್ಲ. ಮತ್ತಷ್ಟು ದೊಡ್ಡ ಮಟ್ಟದಲ್ಲಿ ಹೈನೋದ್ಯಮದಲ್ಲಿತೊಡಗಿಸಿಕೊಂಡು ದೊಡ್ಡ ಉದ್ಯಮಿಯಾಗುವ ಗುರಿ ಹೊಂದಿದ್ದೇನೆ.” – ರಾಯಪ್ಪ, ದಿವ್ಯಾಂಗ ರೈತ

 – ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next