Advertisement

Channapatna Road Show; ಉಗ್ರರಿಗೆ ಕೈ ಬೆಂಬಲ: ಅಮಿತ್‌ ಶಾ

11:44 PM Apr 02, 2024 | Team Udayavani |

ರಾಮನಗರ: “ಕಾಂಗ್ರೆಸ್‌ ಪಕ್ಷವು ಎಸ್‌ಡಿಪಿಐ ಸಂಘಟನೆಗೆ ಬೆಂಬಲ ನೀಡುವ ಮೂಲಕ ಭಯೋತ್ಪಾದಕ ಚಟುವಟಿಕೆಗೆ ಸಹಕಾರ ನೀಡುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗಂಭೀರ ಆರೋಪ ಮಾಡಿದರು.

Advertisement

ಚನ್ನಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್‌ ಶೋ ನಡೆಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತ ನಾಡಿದ ಅವರು, “ಎಸ್‌ಡಿಪಿಐ ರಾಜ್ಯದಲ್ಲಿ ಬಾಂಬ್‌ ಸ್ಫೋಟ ನಡೆಸುತ್ತಿದೆ. ಕಾಂಗ್ರೆಸ್‌ನವರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥವ ರಿಂದ ರಾಜ್ಯದ ಜನತೆ ಸುರಕ್ಷಿತವಾಗಿ ಇರಲು ಸಾಧ್ಯವೇ ಎಂದು ಯೋಚಿಸಬೇಕಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

10 ವರ್ಷಗಳಲ್ಲಿ ದೇಶ ಅಭಿವೃದ್ಧಿ ಹೊಂದಿದೆ ಎಂದ ಶಾಕಳೆದ 10 ವರ್ಷಗಳ ಅವಧಿಯ ಆಡಳಿತ ದಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಈಗ 5ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೆ ತರಲು ಮೋದಿ ಅವರು ಉದ್ದೇಶಿಸಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಸುರಕ್ಷೆಯ ದೃಷ್ಟಿಯಿಂದ ದೇಶದ ಜನತೆ 400ಕ್ಕೂ ಹೆಚ್ಚು ಸ್ಥಾನವನ್ನು ಎನ್‌ಡಿಎಗೆ ನೀಡಬೇಕು ಎಂದು ಮನವಿ ಮಾಡಿದರು.

ಮೋದಿಗೆ ಮತ ಹಾಕಿದಂತೆ
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ. ನೀವು ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೂ ಜೆಡಿಎಸ್‌ಗೆ ಮತ ಹಾಕಿದರೂ ಅದು ಮೋದಿಯವರಿಗೆ ಮತ ಹಾಕಿದಂತೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಜ್ಜನ ಡಾ| ಮಂಜುನಾಥ್‌ ಅವರನ್ನು 5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದರು.

Advertisement

ಇದು ಧರ್ಮಯುದ್ಧ
ರ್ಯಾಲಿಯಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, “ರಾಜ್ಯದಲ್ಲಿ ಜೆಡಿಎಸ್‌ ಸತ್ತಿದೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸಿಗರಿಗೆ ನನ್ನ ಕಾರ್ಯಕರ್ತರು ಈ ಕಾರ್ಯಕ್ರಮದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಧರ್ಮಯುದ್ಧ ನಡೆಯುತ್ತಿದೆ. ನಿಮ್ಮೆಲ್ಲರ ಬೆಂಬಲ ನೋಡಿದರೆ ಈ ಯುದ್ಧದಲ್ಲಿ ಡಾ| ಮಂಜುನಾಥ್‌ ಗೆಲುವು ನಿಶ್ಚಿತ. ನನ್ನ ಹಾಗೂ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ ಮುಖಂಡರಿಗೆ ಎ. 4ರಂದು ನಾಮಪತ್ರ ಸಲ್ಲಿಸಿ, ಬಂದು ಉತ್ತರ ನೀಡುತ್ತೇನೆ’ ಎಂದರು.
ಕಾಂಗ್ರೆಸ್‌ನವರು ಹಣ, ಕುಕ್ಕರ್‌, ಸೀರೆ ಹಂಚಿಕೆ ಮಾಡಿ ಮತದಾರರನ್ನು ಮರುಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕ್ಷೇತ್ರದ ಪ್ರಾಮಾಣಿಕ ಮತದಾರರು ಇದಕ್ಕೆ ಮರುಳಾಗದೆ ಪ್ರಾಮಾಣಿಕರಾದ ಡಾ| ಮಂಜುನಾಥ್‌ ಅವರನ್ನು ಗೆಲ್ಲಿಸಿ. ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ನಾವು ಡಾ| ಮಂಜುನಾಥ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಎಂದು ತಿಳಿಸಿದರು.

ನನ್ನ ಹೃದಯ ಇಲ್ಲೇ ಇದೆ
ನಾನು ಹಾಸನದಲ್ಲಿ ಹುಟ್ಟಿದ್ದರೂ ನನ್ನ ಕರ್ಮಭೂಮಿ ರಾಮನಗರ. ರಾಜ್ಯದ 28 ಕ್ಷೇತ್ರಗಳಲ್ಲಿ ನನ್ನ ದೇಹವಿದ್ದರೂ ಹೃದಯ ಮಾತ್ರ ರಾಮನಗರ ಜಿಲ್ಲೆಯಲ್ಲೇ ಇರುತ್ತದೆ. ನಾನು ಪ್ರಚಾರಕ್ಕೆ ಬಾರದಿದ್ದರೂ ಎರಡು ಬಾರಿ ಗೆಲ್ಲಿಸಿದ ಚನ್ನಪಟ್ಟಣದ ಜನರ ಋಣವನ್ನು ಮರೆಯುವ ಮಾತೇ ಇಲ್ಲ. ಅನಿವಾರ್ಯ ಕಾರಣಗಳಿಂದ ಮಂಡ್ಯದಿಂದ ಸ್ಪರ್ಧಿಸುತ್ತಿದ್ದೇನೆ. ಈ ಜಿಲ್ಲೆ, ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ನನ್ನ ಧ್ಯೇಯ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ
ನಾನು ಬಿಜೆಪಿಯೊಂದಿಗೆ ಹೋಗಿರುವುದು ನನ್ನ ಸ್ವಾರ್ಥಕ್ಕಾಗಿ ಅಲ್ಲ. ರಾಜ್ಯದ ಅಭಿವೃದ್ಧಿಗಾಗಿ. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಜೆಪಿಯನ್ನು ಬೆಂಬಲಿಸಿದ್ದೇನೆ. ಪ್ರಧಾನಿ ಮೋದಿ ಅವರಿಗೆ ನೀವೆಲ್ಲ ಶಕ್ತಿ ನೀಡಿದರೆ, ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನು ಕೇಂದ್ರದಿಂದ ಮಂಜೂರು ಮಾಡಿಸುತ್ತೇನೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ, ಮೈತ್ರಿಯ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಕೊಟ್ಟದ್ದೆಷ್ಟು :
ಲೆಕ್ಕ ಕೊಟ್ಟ ಅಮಿತ್‌ ಶಾ
-ಯುಪಿಎ ಸರಕಾರ ಅಧಿಕಾರ ದಲ್ಲಿದ್ದಾಗ ಕರ್ನಾಟಕಕ್ಕೆ ಏನು ಮಾಡಿತ್ತು?
-ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ಬರೇ 1.42 ಲಕ್ಷ ಕೋಟಿ ರೂ. ಕೊಟ್ಟಿದ್ದರು.
-ಆದರೆ ಮೋದಿ ಸರಕಾರ ಬರೋ ಬ್ಬರಿ 4.91 ಲಕ್ಷ ಕೋಟಿ ರೂ. ಕೊಟ್ಟಿದೆ.
-ಕುರ್ಚಿ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ, ಡಿಕೆಶಿಗೆ ಇದೆಲ್ಲ ಕಾಣುತ್ತಿಲ್ಲ.
-ಪ್ರಧಾನಿ ಮೋದಿಯವರ ಕಾರ್ಯಕ್ರಮ ಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು.
-ಮಹಾನ್‌ ಭಾರತ ಆಗಬೇಕು. ಮೋದಿ ಗೆಲ್ಲಬೇಕು.

ದೇಶಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಗೆಲ್ಲಿಸುವ ಅಗತ್ಯವಿದೆ. ಎನ್‌ಡಿಎ 400 ಪ್ಲಸ್‌ ಗೆಲುವಿಗೆ ನಾವು ರಾಜ್ಯದ 28 ಕ್ಷೇತ್ರಗಳ ಗೆಲುವನ್ನು ಕೊಡುಗೆಯಾಗಿ ನೀಡೋಣ. ಈ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡೋಣ.
– ಬಿ.ವೈ. ವಿಜಯೇಂದ್ರ,
ರಾಜ್ಯ ಬಿಜೆಪಿ ಅಧ್ಯಕ್ಷ

400ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವಂತೆ ಮೋದಿ ಕರೆ ನೀಡಿದ್ದಾರೆ. 400 ಸಂಸದರಲ್ಲಿ ನಾನೂ ಇರುತ್ತೇನೆ. ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಅಮಿತ್‌ ಶಾ ಅವರ ರೋಡ್‌ ಶೋದಿಂದ ನಮ್ಮ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದೆ. ನನ್ನನ್ನು ಜನತೆ ಆಶೀರ್ವದಿಸುತ್ತಾರೆ ಎಂಬ ಅಚಲ ವಿಶ್ವಾಸ ಉಂಟಾಗಿದೆ.
– ಡಾ| ಸಿ.ಎನ್‌. ಮಂಜುನಾಥ್‌,
ಬಿಜೆಪಿ ಅಭ್ಯರ್ಥಿ, ಬೆಂ. ಗ್ರಾ. ಲೋಕಸಭಾ ಕ್ಷೇತ್ರ

 

Advertisement

Udayavani is now on Telegram. Click here to join our channel and stay updated with the latest news.

Next