Advertisement

ಕೈ-ಕಮಲ ಸಮರ; ಯಾರಿಗೊಲಿವ ಮತದಾರ

05:45 PM Apr 02, 2018 | |

ಸಾಗರ: ಜಗದ್ವಿಖ್ಯಾತ ಜೋಗ ಜಲಪಾತ, ಅಪರೂಪದ ನೀನಾಸಂ ಹಾಗೂ ಚರಕ ಸಂಸ್ಥೆಗಳ ಪ್ರಯೋಗ, ರಮಣೀಯ ಧಾರ್ಮಿಕ ಕ್ಷೇತ್ರಗಳಾದ ಬ್ರಹ್ಮೇಶ್ವರ, ವರದಪುರ, ಸಿಗಂದೂರು ಮೊದಲಾದವುಗಳ ಮೂಲಕ ಪ್ರವಾಸೋದ್ಯಮದ “ಗಣಿ’ ಹೊಂದಿರುವ ಕ್ಷೇತ್ರ.

Advertisement

ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ. ಹಣಕ್ಕಾಗಿ ಕ್ಷೇತ್ರದಾದ್ಯಂತ ಮರಳು, ಜಂಬಿಟ್ಟಿಗೆಗಳ ಗಣಿಗಾರಿಕೆ ಮಾಫಿಯಾ ಸ್ವರೂಪದಲ್ಲಿ ಬೆಳೆದು ನಿಂತಿದೆ. ರಾಜಕಾರಣವನ್ನು ಈ ಶಕ್ತಿಗಳೇ ನಿಯಂತ್ರಿಸಲು ಹೊರಟಿರುವ ಸ್ಥಿತಿ ಎದುರಾಗಿದೆ.

ಸಾಗರದ ತಾಳಗುಪ್ಪ ಹೋಬಳಿಯನ್ನು ಹೊರತುಪಡಿಸಿದ ಪೂರ್ಣ ತಾಲೂಕು ಹಾಗೂ ಹೊಸನಗರದ ಕೆಲಭಾಗವನ್ನು
ಸಾಗರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಸಮಾಜವಾದದ ಗಟ್ಟಿ ನೆಲೆಗಟ್ಟಿನ ಸಾಗರದಲ್ಲಿ ಕಾಗೋಡಿನ ಗೇಣಿ ರೈತರ ಹೋರಾಟ ನಾಡಿನಲ್ಲಿ ಉಳುವವನೇ ಹೊಲದೊಡೆಯ ಎಂಬ ಕಾನೂನು ಜನ್ಮ ತಾಳಲು ಕಾರಣವಾದುದು ಇತಿಹಾಸ. ಬಹುಸಂಖ್ಯಾತ ಈಡಿಗ
ಹಾಗೂ ಬ್ರಾಹ್ಮಣರನ್ನು ಹೊಂದಿರುವ ಇಲ್ಲಿ ಈ ವರ್ಗದವರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ ದಶಕದೀಚೆಗೆ ಈಡಿಗರು ರಾಜಕೀಯವಾಗಿ ಅತಿ ಹೆಚ್ಚಿನ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. 1989ರಿಂದ ಈ ಕ್ಷೇತ್ರದಲ್ಲಿ ಸಂಬಂಧದಲ್ಲಿ ಮಾವ ಸೋದರಳಿಯರಾಗಿರುವ ಕಾಗೋಡು- ಬೇಳೂರು ಅವರೇ ಪ್ರತಿ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಿದ್ದಾರೆ.

ವಿವಿಧ ಕಾರಣಗಳಿಂದ ಸಾಗರ ವಿಧಾನಸಭಾ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಗಮನ ಸೆಳೆಯುತ್ತಲೇ ಇದೆ. ಕಳೆದ ವಿಧಾನಸಭೆಯ ಮೊದಲ ಸ್ಪೀಕರ್‌ ಆಗಿ ಕಾಗೋಡು ತಿಮ್ಮಪ್ಪ ಆ ಹುದ್ದೆಯ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಿದ್ದರು. ಕಂದಾಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಬಗರ್‌ಹುಕುಂ ಸಕ್ರಮ, ವಾಸಿಸುವವನೇ ಮನೆಯೊಡೆಯ ಕಾನೂನು, 94ಸಿ, ಸಿಸಿಗಳ ಕಪಿಮುಷ್ಠಿಯನ್ನು ಸಡಿಲಗೊಳಿಸುವ ಕೆಲಸ ಮಾಡಿ ಪರಿಸರಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಇತ್ತ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಬಿಜೆಪಿ ಬೇಳೂರು- ಹಾಲಪ್ಪ ಜುಗಲ್‌ ಬಂದಿ ತರಹದ ವಿವಾದದಿಂದಲೇ ಗಮನ ಸೆಳೆದುಕೊಳ್ಳುವಂತಾದುದು ವಿಪರ್ಯಾಸ.

ಸತತ ಎರಡು ಸೋಲುಗಳ ನಂತರ ಅಧಿಕಾರಕ್ಕೆ ಬಂದ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಕ್ಷೇತ್ರದ ಜನ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆಗಳನ್ನು ಮಾಡಿದ್ದರು. ನಗರಸಭೆ, ತಾಪಂ, ಬಹುತೇಕ ಗ್ರಾಪಂಗಳಲ್ಲಿಯೂ ಕಾಂಗ್ರೆಸ್‌ ನೇರ, ಪರೋಕ್ಷವಾಗಿ ಅಧಿಕಾರದಲ್ಲಿದ್ದುದ ರಿಂದ ಹಿತಾಸಕ್ತಿ ಸಂಘರ್ಷ ನಡೆಯದೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿತ್ತು. ಆ ನಿಟ್ಟಿನಲ್ಲಿ ನಗರಸಭೆ ಆಡಳಿತ ತೀವ್ರ ನಿರಾಸೆ ಉಂಟುಮಾಡಿತು. ನಗರದ ಒಳಚರಂಡಿ ವ್ಯವಸ್ಥೆಯ ಯುಜಿಡಿ ಯೋಜನೆ ಪಂಚ ವಾರ್ಷಿಕ ಸರಹದ್ದನ್ನು ದಾಟುತ್ತ ಧೂಳು, ಅವ್ಯವಸ್ಥೆಗಳನ್ನು ತಂದೊಡ್ಡಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಜನಸೇವೆ ಮರೆತು  ಸಂಪನ್ಮೂಲ ಸಂಗ್ರಹಕ್ಕೆ ಕೌನ್ಸಿಲ್‌ ಸದಸ್ಯರು ಹಪಹಪಿಸುತ್ತಾರೆ ಎಂಬ ಆರೋಪವೂ ಇದೆ.

Advertisement

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಹಣ ತಾಲೂಕಿಗೆ ಬರುವಂತೆ ಮಾಡುವಲ್ಲಿ ಕಾಗೋಡು ಅವರ ಶ್ರಮ ಎದ್ದು ಕಾಣುತ್ತದೆ. ಅವರ ಹಠದ ಕಾರಣದಿಂದಲೇ ಅಧಿಕಾರ ವರ್ಗದ ಮೂಲಕ ಬಗರ್‌ಹುಕುಂ ಪತ್ರಗಳನ್ನು ಸಾವಿರಾರು ಜನರಿಗೆ ಕೊಡಲು ಸಾಧ್ಯವಾದುದು ಮತ್ತು ನಗರಸಭೆ ಆಡಳಿತ ಆಶ್ರಯ ಹಕ್ಕುಪತ್ರಗಳನ್ನು ನೀಡಿದ್ದು. ಹತ್ತು ಹಲವು ಮೂಲಗಳಿಂದ ಹಣ ತಂದು ತಾಯಿ ಮಗು ಆಸ್ಪತ್ರೆ, ಪದವಿ ಕಾಲೇಜು, ಗಣಪತಿ ದೇವಸ್ಥಾನದ ಪುನರುತ್ಥಾನ ಮಾದರಿಯ “ಕಟ್ಟಡಗಳ ಅಭಿವೃದ್ಧಿ’ಗೆ
ಕಾಗೋಡು ಶ್ರಮಿಸಿರುವುದು ಕಾಣುತ್ತದೆ.

ಪದೇ ಪದೇ ನಾನು ಸ್ಪೀಕರ್‌ ಆಗಿದ್ದರಿಂದ ತಾಲೂಕಿನ ಅಭಿವೃದ್ಧಿಗೆ ಅಡ್ಡಿಯಾಯಿತು ಎನ್ನುತ್ತಿದ್ದ ಕಾಗೋಡರ ಮಾತನ್ನು ನಂಬಿದ ಜನ ಸಚಿವರಾದ ನಂತರ ಆಮೂಲಾಗ್ರ ಬದಲಾವಣೆಯನ್ನು ನಿರೀಕ್ಷಿಸಿದ್ದರು. ಆದರೆ ನೀರೀಕ್ಷಿಸಿದ್ದ ಪ್ರಾಮಾಣಿಕ ಆಡಳಿತ ಸಾಧ್ಯವಾಗಿಲ್ಲ ಎಂಬುದನ್ನು ಅವರ ಪಕ್ಷದ ಎರಡನೇ ಹಂತದ ನಾಯಕರೇ ಹೇಳುತ್ತಾರೆ.  ಜಾತಿಯನ್ನು ಮೀರಿ ನಿಜವಾದ ಸಮಾಜವಾದಿಯಂತೆ ಕಾಗೋಡು ನಡೆದುಕೊಂಡಿಲ್ಲ ಎನ್ನುವವರೂ ಇದ್ದಾರೆ.

ಕಳೆದ ದಶಕದ ಇತಿಹಾಸವನ್ನು ಗಮನಿಸಿದಾಗ, ಇಲ್ಲಿ ಕಾಂಗ್ರೆಸ್‌, ಬಿಜೆಪಿ ಮುಂಚೂಣಿಯಲ್ಲಿರುವ ಪಕ್ಷಗಳು. ರಾಮಕೃಷ್ಣ ಹೆಗಡೆಯವರ ದಿನಗಳಲ್ಲಿ ಜನತಾದಳ ಕೂಡ ಇಲ್ಲಿ ಗೆದ್ದಿದ್ದು ಗತ ನೆನಪು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ನೇರ ಹಣಾಹಣಿಯನ್ನೇ ನಿರೀಕ್ಷಿಸಬಹುದು. ಇಂದಿಗೂ ಗ್ರಾಮಾಂತರ ಭಾಗದಲ್ಲಿ ಕಾಂಗ್ರೆಸ್‌ ತನ್ನ ಭಾಗ್ಯದ ಯೋಜನೆಗಳ ಮೂಲಕ ಮತಬ್ಯಾಂಕ್‌ನ್ನು ಗಟ್ಟಿಯಾಗಿಸಿಕೊಂಡಿದೆ. ಪರಿಶಿಷ್ಟ ಜಾತಿ, ಮುಸ್ಲಿಂ ಮತಗಳನ್ನು ಆ ಪಕ್ಷ ನೆಚ್ಚಿಕೊಂಡಿದೆ. ಇತ್ತ ಬಿಜೆಪಿ ಯಡಿಯೂರಪ್ಪ ಅವರ ಅಲೆಗಳಲ್ಲಿ ತೇಲದಿದ್ದರೂ ಪ್ರಧಾನಿ ಮೋದಿ ಮಂತ್ರ ಒಂದು ಮಟ್ಟಿಗೆ ಸಹಾಯ ಮಾಡಲಿದೆ ಎಂದು ರಾಜಕೀಯ ವೀಕ್ಷಕರು ಅಭಿಮತ ವ್ಯಕ್ತಪಡಿಸುತ್ತಾರೆ.
 
ಕ್ಷೇತ್ರದ ಬೆಸ್ಟ್‌ ಏನು?
ಸೊಪ್ಪಿನ ಬೆಟ್ಟ, ಕಾನು ಭಾಗದಲ್ಲಿ ತಲೆತಲಾಂತರದಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರ ಮೇಲೂ ತೂಗುತ್ತಿರುವ ಒತ್ತುವರಿ ತೆರವು ತೂಗುಕತ್ತಿ. 94ಸಿಸಿಗೆ ಈ ಸಂಬಂಧ ತಡೆಯಾಗಿರುವ ನ್ಯಾಯಾಲಯದ ತಡೆಯಾಜ್ಞೆ ದಿನದಿಂದ ದಿನಕ್ಕೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಬಿಗಡಾಯಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ. ಕೆರೆ, ಬಾವಿಗಳು ಆರುತ್ತಿವೆ. ಬೋರ್‌ ವೆಲ್‌ ಮಲೆನಾಡಿನ ಬಹುಭಾಗಗಳಲ್ಲಿ ವಿಫಲವಾಗುತ್ತಿರುವುದರಿಂದ ಅಡಕೆ ತೋಟಗಳು ನಾಶವಾಗುವ ಭೀತಿ. ನಗರದೊಳಗಿನ ಸಂಚಾರ ವ್ಯವಸ್ಥೆಯ ಅಧ್ವಾನ. ಎನ್‌ಎಚ್‌ 206 ಹಾದುಹೋಗಿರುವ ನಗರದಲ್ಲಿ ಪ್ರತಿದಿನ ಅಪಘಾತ, ಸಾವು. ಪ್ರವಾಸೋದ್ಯಮದ ಕುರಿತು ಅಸೀಮ ನಿರ್ಲಕ್ಷ್ಯ. ಜೋಗದಲ್ಲಿ ಈಗಲೂ ಮೂಲಭೂತವಾದ ಹೋಟೆಲ್‌, ವಸತಿ ಸಮಸ್ಯೆ.

ಕ್ಷೇತ್ರದ ದೊಡ್ಡ ಸಮಸ್ಯೆ
ಶರಾವತಿ ಹಿನ್ನೀರಿನಿಂದ ಸಾಗರಕ್ಕೆ ಕುಡಿಯುವ ನೀರಿನ ಯೋಜನೆ ಜಾರಿಯಾಗಿರುವುದರಿಂದ ಸಾಗರ ನಗರದ ಜನರಿಗೆ ಬಿರು ಬೇಸಿಗೆಯಲ್ಲೂ ನೀರಿನ ಸಂತೃಪ್ತಿ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಪಡೆದಿರುವುದರಲ್ಲಿ ಸಾಗರ ಜಿಲ್ಲೆಗೆ ಪ್ರಥಮ. ಒಟ್ಟು 17 ಕೋಟಿ ರೂ. ಖರ್ಚು ಮಾಡಲಾಗಿದ್ದು, ಈ ಹಣ ಕಾರ್ಮಿಕ ವರ್ಗಕ್ಕೆ ಸಂದಿದೆ.
 
ಶಾಸಕರು ಏನಂತಾರೆ?
 ಕಾಲದ ಅವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿಯ ಚಿಂತನೆ ಅಗತ್ಯ. ಮನುಷ್ಯ ಸಹ ಇಂದು ನಾಗಾಲೋಟದಲ್ಲಿ
ಓಡುತ್ತಿದ್ದಾನೆ. ಅಭಿವೃದ್ಧಿಯ ಓಟದಲ್ಲಿ ನಾವೂ ಓಡಬೇಕು. ಜನರ ಕೆಲಸ, ಅಭಿವೃದ್ಧಿ ಕಾರ್ಯ ನಿರಂತರವಾದುದು.
ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

ಕ್ಷೇತ್ರ ಮಹಿಮೆ
ಜಗದ್ವಿಖ್ಯಾತ ಜೋಗ ಜಲಪಾತ ಇರುವುದು ಸಾಗರ ತಾಲೂಕಿನಲ್ಲಿ. ಇನ್ನು ಕೆಳದಿ ರಾಮೇಶ್ವರ ದೇವಾಲಯ, ಇಕ್ಕೇರಿ ಅಘೋರೇಶ್ವರ ದೇಗುಲಗಳು ಕೆಳದಿ ಅರಸರ ಕಾಲದ ದೇಗುಲಗಳಾಗಿದ್ದು ಪ್ರೇಕ್ಷಣೀಯ ಸ್ಥಳಗಳಾಗಿವೆ. ಭಗವಾನ್‌ ಶ್ರೀಧರ ಸ್ವಾಮಿಗಳ ಪುಣ್ಯಭೂಮಿಯಾದ ವರದಪುರ ಸಾಗರದಿಂದ ಅನತಿ ದೂರದಲ್ಲಿದೆ. ಇನ್ನು ರಂಗಭೂಮಿ, ಸಾಹಿತ್ಯ, ನಾಟಕಗಳ ಕೇಂದ್ರವಾದ
ಹೆಗ್ಗೊಡು ನೀನಾಸಂ ಇರುವುದು ಸಾಗರ ತಾಲೂಕಿನಲ್ಲಿ

ಕಳೆದ ಐದು ವರ್ಷಗಳಲ್ಲಿ
ಆಡಳಿತಾತ್ಮಕವಾಗಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ, ಜನರ ನಿರೀಕ್ಷೆಗಳಿಗೆ ಸ್ಪಂದಿಸಿದ್ದಾರೆ. ನಗರದ
ನೀರಿನ ಸಮಸ್ಯೆಗೆ ಉತ್ತರ ಒದಗಿಸಿದ್ದಾರೆ. ಬರುವ ಅವ ಧಿಯಲ್ಲಿ ಅವರು ಗ್ರಾಮಾಂತರ ಭಾಗದ ನೀರಿನ ಸಮಸ್ಯೆಗೆ ಯೋಜನೆ ರೂಪಿಸಬೇಕು. ತಾಲೂಕಿನಾದ್ಯಂತ ರಸ್ತೆ ಸರಿಪಡಿಸುವಲ್ಲಿ ಆಗಿರುವ ವ್ಯತ್ಯಯವನ್ನು ಮುಂದಿನ ಬಾರಿ ಸರಿಪಡಿಸಬೇಕು.
ಅಂಜನಮೂರ್ತಿ, ಸಾಗರ

ಆಡಳಿತ ನಡೆಸುವವರು ಸಾಗರದ ಶೈಕ್ಷಣಿಕ ವ್ಯವಸ್ಥೆಯತ್ತ ಗಮನ ಹರಿಸಬೇಕು. ಸಾಗರದ ಜೂನಿಯರ್‌ ಕಾಲೇಜಿನ ವಿಜ್ಞಾನ ವಿಭಾಗ ರಾಜ್ಯದಲ್ಲಿಯೇ ಅತ್ಯಧಿಕ- 1300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಆದರೆ ಅವರ ಸಂಖ್ಯೆಗೆ ಪೂರಕವಾದ ಉಪನ್ಯಾಸಕರನ್ನು ಕೊಡುತ್ತಿಲ್ಲ. ಗ್ರಾಮೀಣ ಪಿಯು ಕಾಲೇಜುಗಳಿಗೆ ಪರಿಣಿತ ಲೆಕ್ಚರರ್‌ ಕೊಡದಿರುವುದು ಕೂಡ ಸಮಸ್ಯೆ ಗಾಢವಾಗಲು ಕಾರಣ. ಕಳೆದ 5 ವರ್ಷ ಕೂಡ ಈ ವಿಭಾಗದಲ್ಲಿ ನಿರಾಶೆಯಾಗಿದೆ. 
ರೋಹಿತ್‌ ವಿ, ಸಾಗರ

ಸ್ವತಃ ಕಾಗೋಡು ತಿಮ್ಮಪ್ಪ ಅವರು ಹೇಳಿದಂತೆ ಸರ್ಕಾರದ ಎಲ್ಲ ಕೆಲಸ ಅಧಿಕಾರಿ ವರ್ಗದ ಲಂಚಗುಳಿತನ ದಿಂದ
ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಇನ್ನಷ್ಟು ವೃದ್ಧಿಸಿದೆ. ಈ ನಿರಾಶೆಯನ್ನು ಹೋಗಲಾಡಿಸಲು ಒಂದು ಆಮೂಲಾಗ್ರ ಬದಲಾವಣೆಯೇ ಬೇಕಾಗಿದೆ. 
ಚಿದಾನಂದ ಕಾಂತ್ರಿ, ಕವಲಕೋಡು

ಕಳೆದ ಐದು ವರ್ಷಗಳಲ್ಲಿ ಕೆಲಮಟ್ಟಿನ ಅಭಿವೃದ್ಧಿ ಆಗಿದೆ. ಬಡವರು, ಭೂಮಿ ಇಲ್ಲದವರ ಕುರಿತು ಕಾಗೋಡು ತೋರಿದ ಕಾಳಜಿ ನೈಜವಾದುದಾಗಿದೆ. ಆದರೆ ಅಭಿವೃದ್ಧಿಯ ಹೆಸರಲ್ಲಿ ಕೆರೆಗಳನ್ನು ಮುಚ್ಚಿ ಕಾಮಗಾರಿ ನಡೆಸುವುದನ್ನು ಕೃತಕ ಎನ್ನಬೇಕಾಗುತ್ತದೆ. ನಗರದ ಇಂದಿರಾ ಗಾಂಧಿ ಕಾಲೇಜಿನ ಎದುರಿನ ಗಣಪತಿ ಕೆರೆ ಮುಚ್ಚಿ ಸಂತೆ ಮೈದಾನ ಮಾಡುವ ಮಾದರಿ ಕೆಲಸ ಸಮರ್ಥನೀಯವಲ್ಲ. ಯುವಜನ ಚುನಾವಣೆಗಳನ್ನು ನಕಾರಾತ್ಮಕವಾಗಿ ನೋಡದೆ, ಸಂವಿಧಾನ ಜನರಿಗೆ ಕೊಟ್ಟಿರುವ ಅಪೂರ್ವ ಅವಕಾಶವನ್ನು ಬಳಸಿಕೊಂಡು ಅರ್ಹರನ್ನು ಆರಿಸಬೇಕು.
ಮಧುನಿಶಾ ಹೆಗ್ಗೊಡು

Advertisement

Udayavani is now on Telegram. Click here to join our channel and stay updated with the latest news.

Next