ಹಾನಗಲ್ಲ: ನೆರೆ ಹಾನಿ ಕುರಿತು ವಿಳಂಬವಿಲ್ಲದೆ ವಾಸ್ತವ ಸಮೀಕ್ಷಾ ವರದಿ ಸಿದ್ಧಪಡಿಸಿ ಕೊಡುವಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಹಾನಗಲ್ಲ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರೆ ಇನ್ನೂ ಹಾನಿಯನ್ನು ತಡೆಗಟ್ಟಲು ಸಾಧ್ಯವಿತ್ತು. ಬಾಳಂಬೀಡ ಗ್ರಾಮದ ಒಂದೆ ಕೆರೆ 3 ಕಡೆಗಳಲ್ಲಿ ಒಡೆದಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರೆ ಇದರಿಂದಾಗುವ ಹಾನಿ ತಡೆಯಲು ಸಾಧ್ಯವಾಗುತ್ತಿತ್ತು ಎಂದರು.
ಅತ್ಯಂತ ಪ್ರಮುಖವಾಗಿ ತಾಲೂಕಿನಲ್ಲಿರುವ ಕೆರೆಗಳತ್ತ ಅಧಿಕಾರಿಗಳ ಗಮನವಿರಲಿ. ಎಲ್ಲೆಲ್ಲಿ ಕರೆ ಏರಿಗಳು ದುರಸ್ಥಿ ಸ್ಥಿತಿಯಲ್ಲಿವೆ ಎಂಬ ಅರಿವು ನಿಮಗಿರಲಿ. ಅಧಿಕಾರಿಗಳ ನಿಷ್ಕಾಳಜಿ ಕಾರಣವಾಗಿ ಅನುಹುತಕ್ಕೆ ಅವಕಾಶವಾಗದಿರಲಿ ಎಂದು ಎಚ್ಚರಿಸಿದ ಅವರು, ಭಾರೀ ಮಳೆಗೆ ಕೃಷಿ ಭೂಮಿಯ ಫಲವತ್ತತೆಯೂ ಕೊಚ್ಚಿ ಹೋಗಿದೆ. ಇದರ ಫಲವತ್ತತೆಗೆ ಕಾಯಕಲ್ಪ ನೀಡಲೇಬೇಕು. ಕೂಡಲೇ ಇದೆಲ್ಲದರ ಸಮೀಕ್ಷಾ ವರದಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪರಿಹಾರ ಸಮೀಕ್ಷೆ ಹಾಗೂ ವಿತರಣೆ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ವಾಸ್ತವ ವರದಿ ನೀಡಬೇಕು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ 36 ಸಾವಿರ ಹೆಕ್ಟೇರ್ ಕೃಷಿ ಹಾಗೂ 1500 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. 1300ರಷ್ಟು ಮನೆಗಳು ಬಿದ್ದ ವರದಿಯಾಗಿದೆ. 35ಕ್ಕೂ ಅಧಿಕ ಕೆರೆಗಳು ಒಡೆದಿವೆ. 10 ಕಿ.ಮಿ ರಸ್ತೆ ಹಾಳಾಗಿವೆ. ಬಹು ದೊಡ್ಡ ಪ್ರಮಾಣದಲ್ಲಿ ರಸ್ತೆ ದುರಸ್ತಿ ಆಗಬೇಕಾಗಿದೆ. 20 ಪ್ರಾಥಮಿಕ ಶಾಲೆಗಳು, 40 ಅಂಗನವಾಡಿ ಕಟ್ಟಡಗಳು ಮಳೆಯಿಂದಾಗಿ ಕುಸಿದಿವೆ ಎಂದು ಅಧಿಕಾರಿಗಳು ವರದಿ ನೀಡಿದರು.
ಮಳೆ ನಿಂತ ತಕ್ಷಣ ರಸ್ತೆ ಮರು ನಿರ್ಮಾಣಕ್ಕಾಗಿ 13 ಕೋಟಿಗೂ ಅಧಿಕ ಹಣದ ಅಗತ್ಯವಿದೆ. ರಸ್ತೆ ಸುಧಾರಣೆಗೆ 25 ಕೋಟಿ ಹಣ ಬೇಕಾಗಿದೆ. ಈಗಾಗಲೇ 1.5 ಕೋಟಿ ರೂ.ಗಳನ್ನು ರಸ್ತೆ ದುರಸ್ತಿಗಾಗಿ ಖರ್ಚು ಮಾಡಲಾಗಿದೆ. ಹಲವು ಕೆರೆಗಳು ಒಡೆದಿರುವುದರಿಂದ ಇವುಗಳ ದುರಸ್ತಿಗೆ ಲಕ್ಷಾಂತರ ಹಣ ಬೇಕಾಗಿದೆ. ಇನ್ನೂ ನೀರಿನಲ್ಲಿಯೇ ನಿಂತ ಮನೆಗಳು ಬೀಳುವ ಸಂದರ್ಭಗಳೂ ಹೆಚ್ಚಾಗಿವೆ ಎಂದು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.
ಹಾನಗಲ್ಲ ಶಾಸಕ ಸಿ.ಎಂ.ಉದಾಸಿ, ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ಬೋಯಾರ್, ತಹಶೀಲ್ದಾರ್ ಎಂ.ಗಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.