Advertisement

ಅಸಮಾಧಾನ ಶಮನ; ನಾಮಪತ್ರ ಹಿಂತೆಗೆಸಲು ಕಸರತ್ತು

01:41 PM Oct 10, 2021 | Team Udayavani |

ಹಾವೇರಿ: ದಿ.ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ಲ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡಿದ್ದು, ಈಗ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಟಿಕೆಟ್‌ಗಾಗಿ ಕಾಂಗ್ರೆಸ್‌, ಬಿಜೆಪಿಯಲ್ಲಿದ್ದ ಅಸಮಾಧಾನ ಶಮನಗೊಂಡಿದ್ದು, ಮಗ್ಗಲು ಮುಳ್ಳಾಗಿರುವ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಸಲು ಕಸರತ್ತು ಶುರುವಾಗಿದೆ.

Advertisement

ಅ.11ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದರಿಂದ ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆಂಬುದು ಕೂತೂಹಲ ಮೂಡಿಸಿದೆ.

ತಹಶೀಲ್ದಾರ್‌ಗೆ ಸೂಕ್ತ ಸ್ಥಾನಮಾನ ಭರವಸೆ: ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಪಟ್ಟು ಹಿಡಿದಿದ್ದರು. ಸ್ಥಳೀಯರಿಗೇ ಟಿಕೆಟ್‌ ನೀಡಬೇಕೆಂದು ಒತ್ತಡ ಹಾಕಿದ್ದರು. ಕೊನೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಹಶೀಲ್ದಾರ್‌ ಮನವೊಲಿಸಿ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್‌ ಕೊಟ್ಟಿದ್ದಾರೆ. ನಾಮಪತ್ರ ಸಲ್ಲಿಕೆ ದಿನವೇ ನನಗೆ ಏನು ಸ್ಥಾನಮಾನ ಕೊಡ್ತಾರೆ ಎಂಬುದನ್ನು ಘೋಷಣೆ ಮಾಡಬೇಕೆಂದು ತಹಶೀಲ್ದಾರ್‌ ಮನವಿ ಮಾಡಿದ್ದರು. ಹೀಗಾಗಿ ಹಾನಗಲ್ಲ ಕುಮಾರೇಶ್ವರ ಮಠದಲ್ಲಿ ಕೆಲಕಾಲ ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸಿ ಸೂಕ್ತ ಸ್ಥಾನಮಾನ ಭರವಸೆ ನೀಡುವ ಮೂಲಕ ಅಸಮಾಧಾನ ಶಮನಗೊಳಿಸಿದ್ದಾರೆ.

ಬಿಜೆಪಿಯಲ್ಲಿನ ಅಸಮಾಧಾನವೂ ಶಮನ: ಬಿಜೆಪಿಯಿಂದ ಶಿವರಾಜ ಸಜ್ಜನರ ಅವರನ್ನು ಅಚ್ಚರಿ ಎಂಬಂತೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರಿಂದ ಕ್ಷೇತ್ರದಲ್ಲಿ ಭುಗಿಲೆದ್ದಿದ್ದ ಆಕ್ರೋಶ ಸಂಸದ ಶಿವಕುಮಾರ ಉದಾಸಿ ಅವರ ಮನವೊಲಿಕೆಯಿಂದ ಒಂದೇ ದಿನದಲ್ಲಿ ತಣ್ಣಗಾಗಿದೆ. ಶಿವರಾಜ ಸಜ್ಜನರ ಹೆಸರು ಅಂತಿಮ ಗೊಳ್ಳುತ್ತಿದ್ದಂತೆಯೇ ಕ್ಷೇತ್ರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಲ್ಲದೇ, ಸಾಮೂಹಿಕ ರಾಜೀನಾಮೆಗೆ ಹಲವರು ಮುಂದಾಗಿದ್ದರು. ತಕ್ಷಣ ಸಂಸದ ಶಿವಕುಮಾರ ಉದಾಸಿ ಅಸಮಾಧಾನಗೊಂಡಿದ್ದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ನಾಮಪತ್ರ ಸಲ್ಲಿಸುವ ರ್ಯಾಲಿಗೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ದಂಡೇ ಹರಿದು ಬಂದು ಶಕ್ತಿ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next