ಹುಬ್ಬಳ್ಳಿ: ಲಿಂ. ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳ 150ನೇ ಜಯಂತಿ ಮಹೋತ್ಸವವನ್ನು ಡಿಸೆಂಬರ್ 3, 10 ಇಲ್ಲವೇ 17ರಂದು ಆಚರಿಸಲು ಹಾಗೂ ಮಹೋತ್ಸವಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ರಾಷ್ಟ್ರನಾಯಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ಇಲ್ಲಿನ ಮೂರುಸಾವಿರಮಠದ ಮೂಜಗಂ ಸಭಾಭವನದಲ್ಲಿ ಸೋಮವಾರ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಗಣ್ಯರು, ಭಕ್ತರು ಅಭಿಪ್ರಾಯ ಮಂಡಿಸಿದರು.
ಹಾನಗಲ್ಲ ಕುಮಾರ ಸ್ವಾಮಿಗಳು ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಸಭೆ ನಡೆಸಬೇಕು. ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕು. ಉಪನ್ಯಾಸ, ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ನಿಟ್ಟಿನಲ್ಲಿ ಮಹೋತ್ಸವದ ಸಿದ್ಧತೆಗಳಿಗಾಗಿ ಕೂಡಲೇ ಪ್ರಮುಖ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಿ, ಸದಸ್ಯರನ್ನು ನೇಮಿಸಿ ಅವರಿಗೆ ಜವಾಬ್ದಾರಿ ನೀಡಿ ಮಹೋತ್ಸವ ಐತಿಹಾಸಿಕವಾಗಿ ನಡೆಯುವಂತೆ ಮಾಡಲು ಸಿದ್ಧತೆ ಕೈಗೊಳ್ಳಬೇಕು ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಕೂಡಲೇ ಪ್ರಮುಖ ಸಮಿತಿ ಹಾಗೂ ಉಪ ಸಮಿತಿ ರಚಿಸಿ ಅವುಗಳಿಗೆ ಸದಸ್ಯರನ್ನು ನೇಮಿಸಿ ತಕ್ಷಣವೇ ಕಾರ್ಯಗತಗೊಳಿಸಬೇಕು. ಪ್ರತಿ ತಿಂಗಳು ತಾಲೂಕು, ಜಿಲ್ಲಾಮಟ್ಟಗಳಲ್ಲಿ ಸಭೆ ನಡೆಸಿ ಕಾರ್ಯಕ್ರಮ ಆಯೋಜಿಸಬೇಕು.
ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿಸಿ ವಿಶೇಷ ದತ್ತಿ ಉಪನ್ಯಾಸ ಆಯೋಜಿಸಿ ಆ ಮೂಲಕ ಕುಮಾರ ಸ್ವಾಮಿಗಳು ಸಮಾಜಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು ಸಮಾಜದ ಜನರಿಗೆ ತಲುಪಿಸಬೇಕು ಎಂದರು. ಜಯಂತಿ ಮಹೋತ್ಸವಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕು.
ಅಖೀಲ ಭಾರತ ಮಹಾಸಭಾದ ಪ್ರಮುಖರನ್ನು ಆಹ್ವಾನಿಸಿ ಇದರಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಬೇಕು. ಕಾರ್ಯಕ್ರಮ ರಾಜ್ಯಮಟ್ಟದಾಗಿದ್ದರಿಂದ ಪಕ್ಷ, ಪಂಗಡವೆನ್ನದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು. ಅಲ್ಲದೆ ಕುಮಾರ ಸ್ವಾಮಿಗಳ ಮಹೋತ್ಸವವನ್ನು ಡಿ. 3, 10 ಹಾಗೂ 17ರಂದು ಆಚರಿಸಲು ನಿರ್ಧರಿಸಲಾಗಿದೆ.
ಇವುಗಳಲ್ಲಿ ಯಾವ ದಿನಾಂಕಗಳನ್ನು ಪ್ರಧಾನಿ, ರಾಷ್ಟ್ರಪತಿಗಳು ನಿಗದಿಪಡಿಸುತ್ತಾರೋ ಅಂದೇ ಕಾರ್ಯಕ್ರಮ ಆಯೋಜಿಸೋಣ. ಅಲ್ಲಿಯವರೆಗೆ ಕಾರ್ಯಕ್ರಮದ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸೋಣ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಮಾಜದಲ್ಲಿನ ಪ್ರಮುಖರನ್ನು ಒಗ್ಗೂಡಿಸಿ ಸಭೆ ನಡೆಸಬೇಕು ಎಂದರು.