Advertisement

ಬಿನ್‌ ಲಾಡೆನ್‌ ಪುತ್ರ ಹಂಜಾ ಹತ?

12:42 AM Aug 02, 2019 | Team Udayavani |

ವಾಷಿಂಗ್ಟನ್‌: ಅಲ್ ಖೈದಾ ಉಗ್ರ ಸಂಘಟನೆಯ ಮುಂದಿನ ನಾಯಕ ಎಂದೇ ಬಿಂಬಿತನಾಗಿದ್ದ ಹಂಜಾ ಬಿನ್‌ ಲಾಡೆನ್‌ ಅಸುನೀಗಿದ್ದಾನೆ ಎಂದು ಅಮೆರಿಕದ ‘ಎನ್‌ಬಿಸಿ ನ್ಯೂಸ್‌’ ವರದಿ ಮಾಡಿದೆ.

Advertisement

ಹಂಜಾ ಬಿನ್‌ ಲಾಡೆನ್‌ ಅಲ್ಖೈದಾ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್‌ ಲಾಡೆನ್‌ ಪುತ್ರ. ಅಮೆರಿಕದ ಗುಪ್ತಚರ ಇಲಾಖೆಯ ಮೂವರು ಅಧಿಕಾರಿಗಳನ್ನು ಉಲ್ಲೇಖೀಸಿ ತಾನು ವರದಿ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಅಮೆರಿಕದ ಓವಲ್ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಚೇರಿಯ ಅಧಿಕಾರಿಗಳ ಬಳಿ ಮಾಹಿತಿ ಬಗ್ಗೆ ವಿವರಣೆ ಬಯಸಿದಾಗ, ಅದನ್ನು ಇಲ್ಲ ಅಥವಾ ಹೌದು ಎಂದು ಹೇಳಲಿಲ್ಲ ಎಂದು ಎನ್‌ಬಿಸಿ ಹೇಳಿಕೊಂಡಿದೆ. ಮತ್ತೂಂದು ಮಾಧ್ಯಮ ಸಂಸ್ಥೆ ‘ದ ನ್ಯೂಯಾರ್ಕ್‌ ಟೈಮ್ಸ್‌’ ಕೂಡ ಅದೇ ರೀತಿಯಲ್ಲಿ ವರದಿ ಮಾಡಿದೆ.

ಯಾವ ಸಂದರ್ಭದಲ್ಲಿ ಹಂಜಾ ಬಿನ್‌ ಲಾಡೆನ್‌ ಅಸುನೀಗಿದ್ದಾನೆ ಎಂಬ ಅಂಶವನ್ನು ಈ ಎರಡೂ ಮಾಧ್ಯಮ ವರದಿಗಳಲ್ಲಿ ಪುಷ್ಟೀಕರಿಸಲಾಗಿಲ್ಲ. ಆದರೆ, ಆತ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ದಾಳಿಯಲ್ಲಿ ಅಮೆರಿಕದ ಸೇನೆಯ ಪಾತ್ರವಿತ್ತೇ ಎಂಬುದನ್ನೂ ಬಹಿರಂಗಪಡಿಸಲಾಗಿಲ್ಲ.

ಲಾಡೆನ್‌ನ 20 ಮಕ್ಕಳ ಪೈಕಿ 15ನೆಯವನಾದ ಹಂಜಾ ಮೂರನೇ ಪತ್ನಿಯ ಪುತ್ರ. ಉಗ್ರ ಸಂಘಟನೆಯ ಮುಂದಿನ ಅಗ್ರೇಸರ ನಾಯಕನಾಗಿ ಬೆಳೆಯುತ್ತಿದ್ದ ಆತನ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ಡಾಲರ್‌ ಬಹುಮಾನ ನೀಡುವುದಾಗಿ ಅಮೆರಿಕ ಸರಕಾರ ಫೆಬ್ರವರಿಯಲ್ಲಿ ಘೋಷಿಸಿತ್ತು. ಆದರೆ, ಇದಕ್ಕೂ ಮೊದಲೇ ಆತ ಸತ್ತಿದ್ದಾನೆ ಎಂದು ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next