Advertisement

ಹಂಪಿ ಉತ್ಸವಕ್ಕೆ ಒಪ್ಪಿಗೆ; ಒಂದು ದಿನದ ಮಟ್ಟಿಗೆ ಆಚರಣೆ: ಸಚಿವ ಡಿಕೆಶಿ

06:00 AM Dec 04, 2018 | |

ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ರದ್ದು ಪಡಿಸಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ಸವ ಆಚರಣೆ ಕುರಿತು ಮರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಶೇಷವಾಗಿ ಬಳ್ಳಾರಿಯಲ್ಲಿ ತೀವ್ರ ಬರ ಇದೆ ಎನ್ನುವ ಕಾರಣಕ್ಕೆ
ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ವರ್ಷ ಉತ್ಸವ ಮುಂದೂಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಯೋಜನೆ ಮುಂದೂಡಲು ತೀರ್ಮಾನಿಸಲಾಗಿತ್ತು. ಆದರೆ, ಸ್ಥಳೀಯ ಕಲಾವಿದರು ಹಾಗೂ ಬಳ್ಳಾರಿ ನೂತನ ಸಂಸದ ವಿ.ಎಸ್‌. ಉಗ್ರಪ್ಪ ಹಂಪಿ ಉತ್ಸವ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ದಿನವಾದರೂ ಆಚರಿಸುವ ಸಾಧ್ಯತೆ
ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ಉತ್ಸವ ಮಾಡುವುದೆಂದರೆ ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಬರ ಪರಿಹಾರ ಕಾಮಗಾರಿಯಲ್ಲಿ ಹೆಚ್ಚು ತೊಡಗಿಕೊಳ್ಳುವುದರಿಂದ ಉತ್ಸವ ಆಚರಣೆಯಲ್ಲಿ ತೊಂದರೆಯಾಗಬಾರದು ಎನ್ನುವ  ಕಾರಣಕ್ಕೆ ಮುಂದೂಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಉತ್ಸವ ಆಚರಣೆ ಮಾಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಬಿಜೆಪಿಯವರು ಹಂಪಿ ಉತ್ಸವಕ್ಕಾಗಿ ಭಿಕ್ಷೆ ಎತ್ತಿ ಹಣ ಕೊಡುತ್ತೇವೆ ಎಂದು ಹೇಳಿರುವುದು ಖಂಡನೀಯ. ಉತ್ಸವ ಮಾಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹಣ ವಸೂಲಿ ಮಾಡುವವರು ಹಿಂದೆ ತಮ್ಮ ಅವಧಿಯಲ್ಲಿ ಮಾಡಿದಂತೆ ಜನರಿಂದ ವಸೂಲಿ ಮಾಡಲು ಅವಕಾಶ ಕೊಡುವುದಿಲ್ಲ ಎಂದರು. ಮೈಸೂರು ದಸರಾ ಹಾಗೂ ಟಿಪ್ಪು ಜಯಂತಿ ರಾಜ್ಯ ಮಟ್ಟದ ಉತ್ಸವಗಳಾಗಿವೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next