Advertisement

ಪುರಂದರ ಉತ್ಸವ ಈ ಬಾರಿ ಹರೋಹರ?

12:30 AM Feb 05, 2019 | |

ಬಳ್ಳಾರಿ: ಬರ, ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಹಂಪಿ ಉತ್ಸವ ಆಚರಣೆಗೆ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಪುರಂದರ ಉತ್ಸವಕ್ಕೆ ಎಳ್ಳುನೀರು ಬಿಟ್ಟಿದೆ. ಅನುದಾನ ಕೊರತೆಯಿಂದಾಗಿ ಪ್ರತಿವರ್ಷ ನಡೆಯುತ್ತಿದ್ದ ಪುರಂದರ ಉತ್ಸವವನ್ನೇ ರದ್ದುಗೊಳಿಸಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಹಂಪಿ ಉತ್ಸವಕ್ಕೆ ಪುರಂದರ ಉತ್ಸವವೇ ಮೂಲ ಪ್ರೇರಣೆ. ಪ್ರತಿವರ್ಷ ಅಮೃತ ಅಮಾವಾಸ್ಯೆಯಾದ ಫೆ.4 ರಂದು ಪುರಂದರ ಉತ್ಸವವನ್ನು ಹಂಪಿಯಲ್ಲಿ ಆಚರಿಸಬೇಕಿತ್ತು. ಆದರೆ, ಅನುದಾನದ ಕೊರತೆ ನೆಪದಡಿ ಜಿಲ್ಲಾಡಳಿತ ಉತ್ಸವವನ್ನೇ ರದ್ದುಗೊಳಿಸಿದೆ ಎನ್ನಲಾಗುತ್ತಿದೆ.

1980ರ ದಶಕದಲ್ಲಿ ಕನಕ-ಪುರಂದರ ಉತ್ಸವ ಎಂದು ಆಚರಿಸಲ್ಪಡುತ್ತಿದ್ದ ಈ ಉತ್ಸವವನ್ನು 1990ರ ದಶಕದಲ್ಲಿ ಮಾಜಿ ಉಪಮುಖ್ಯಮಂತ್ರಿ ದಿ|ಎಂ.ಪಿ. ಪ್ರಕಾಶ್‌ ಹಂಪಿ ಉತ್ಸವ ಎಂದು ಪರಿವರ್ತಿಸಿ ಪ್ರತಿವರ್ಷ ನ.3.4.5 ರಂದು ಆಚರಿಸಲು ನಾಂದಿ ಹಾಡಿದ್ದರು. ನಂತರ ಹಂಪಿ ಉತ್ಸವದ ಜತೆ ಎರಡು ದಿನ ಪುರಂದರ ಉತ್ಸವವನ್ನೂ ಆಚರಿಸಲಾಗುತ್ತಿತ್ತು. ಆದರೆ ಸಮ್ಮಿಶ್ರ ಸರ್ಕಾರ ಈ ಬಾರಿ ಉತ್ಸವ ಆಚರಣೆಗೆ ಉತ್ಸಾಹವನ್ನೇ ತೋರಿಲ್ಲ. ಇದು ಕಲಾವಿದರ ಸಾಂಸ್ಕೃತಿಕ ವಲಯದ ಹಿರಿಯರ ಕೆಂಗಣ್ಣಿಗೆ ಕಾರಣವಾಗಿದೆ.

ಅನುದಾನ ಬಿಡುಗಡೆಯಾಗಿಲ್ಲ: ಪ್ರತಿವರ್ಷ ರಾಜ್ಯ ಬಜೆಟ್‌ನಲ್ಲಿ ಹಂಪಿ ಉತ್ಸವಕ್ಕೆ ಅನುದಾನ ಮೀಸಲಿಡುತ್ತಿದ್ದ ರಾಜ್ಯ ಸರ್ಕಾರ, ಪುರಂದರ ಉತ್ಸವಕ್ಕೆ 10ಲಕ್ಷ ರೂ. ಅನುದಾನ ನೀಡುತ್ತಿತ್ತು. ಆದರೆ, ಪ್ರಸಕ್ತ ವರ್ಷ ಉತ್ಸವಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಉತ್ಸವದ ಉಸ್ತುವಾರಿ ನೋಡಿಕೊಳ್ಳುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ವರೆಗೂ ಯಾವುದೇ ಅನುದಾನವೂ ಬಿಡುಗಡೆಯಾಗಿಲ್ಲ. ಪರಿಣಾಮ ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಉತ್ಸವ ಇದೇ ಮೊದಲ ಬಾರಿಗೆ ರದ್ದುಗೊಂಡಂತಾಗಿದೆ ಎಂದು ತಿಳಿಸಿದೆ.

ಎರಡು ದಿನಗಳ ಕಾಲ ಆಚರಿಸಲಾಗುತ್ತಿದ್ದ ಪುರಂದರ ಉತ್ಸವದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಮುಖ್ಯವೇದಿಕೆ ನಿರ್ಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ಸಂಗೀತ ಸೇರಿ ವಿವಿಧ ಸಾಂಸ್ಕೃತಿಕ ಮತ್ತು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಪುಸ್ತಕ ಪ್ರದರ್ಶನ ಮಾರಾಟ ಸೇರಿ ವಿವಿಧ ಮಳಿಗೆ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿತ್ತು. ಜತೆಗೆ ತುಂಗಭದ್ರಾ ನದಿ ದಡದಲ್ಲಿರುವ ಪುರಂದರ ಮಂಟಪದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಸಲಾಗುತ್ತಿತ್ತು. ಆದರೆ ಸಕಾರಣವಿಲ್ಲದೆ ಉತ್ಸವ ನಿಲ್ಲಿಸಲಾಗಿದೆ.

Advertisement

ಪುರಂದರ ಉತ್ಸವ ರದ್ದಾಗಿಲ್ಲ. ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕ್ರಮ ಜರುಗಿಸಲಾಗುವುದು. ಹಂಪಿ ಉತ್ಸವ ಆಚರಣೆಗೂ ದಿನಾಂಕ ನಿಗದಿಪಡಿಸಿ ವರದಿ ಕಳುಹಿಸಲಾಗಿದೆ. ಕೆಲವೆ ದಿನದಲ್ಲಿ ಅನುದಾನ ಬರುವ ಸಾಧ್ಯತೆಯಿದೆ ಇಲ್ಲದಿದ್ದರೆ ದಿನಾಂಕ ನಿಗದಿಪಡಿಸಲಾಗುವುದು.
– ಡಾ. ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ, ಬಳ್ಳಾರಿ.

ಹಂಪಿ ಉತ್ಸವಕ್ಕಿಲ್ಲ ಸಿದ್ಧತೆ
ಈಗಾಗಲೇ ಎರಡು ಬಾರಿ ಮುಂದೂಡಲಾಗಿದ್ದ ಹಂಪಿ ಉತ್ಸವವನ್ನು ಫೆ.16,17 ರಂದು ಎರಡು ದಿನಗಳ ಕಾಲ ಆಚರಿಸುವುದಾಗಿ ದಿನಾಂಕ ನಿಗದಿಪಡಿಸಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಕಳುಹಿಸಿತ್ತು. ಆದರೆ, ನಿಗದಿತ ದಿನಾಂಕಕ್ಕೆ ಇನ್ನು ಕೇವಲ 12 ದಿನಗಳು ಬಾಕಿ ಉಳಿದಿದ್ದರೂ, ಹಂಪಿಯಲ್ಲಿ ಉತ್ಸವ ಆಚರಣೆಗೆ ಯಾವುದೇ ಸಿದ್ಧತಾ ಕ್ರಮ ಕೈಗೊಂಡಿಲ್ಲ. ಪರಿಣಾಮ ಜಿಲ್ಲಾಡಳಿತ ನಿಗದಿ ಪಡಿಸಿದ್ದ ದಿನಾಂಕಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಒಂದು ವೇಳೆ ಒಪ್ಪಿಗೆ ಸೂಚಿಸದಿದ್ದರೆ ಮತ್ತೂಮ್ಮೆ ಮುಂದೂಡಲು ಜಿಲ್ಲಾಡಳಿತ ಚಿಂತಿಸುತ್ತಿದೆ ಎನ್ನಲಾಗಿದೆ.

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next