Advertisement
‘ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್’ಯೋಜನೆಗಾಗಿ ಹೊಂಡ ತೆಗೆದು ಪ್ರಾರಂಭಿಕ ಸಿದ್ದತೆಯಲ್ಲಿಯೇ ಬಾಕಿ ಉಳಿದಿರುವ ಯೋಜನಾ ಪ್ರದೇಶಕ್ಕೆ ಶನಿವಾರ ಮೇಯರ್ ಮನೋಜ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿಕೊಂಡ ಮೇಯರ್ ಅವರು ಯೋಜನೆ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಯೋಜನೆಯನ್ನು ತುರ್ತಾಗಿ ನಡೆಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್ ಅವರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
Related Articles
ಕಾಮಗಾರಿ ನಡೆಸುವ ಬದಿಯಲ್ಲಿ ಕಾಲುದಾರಿಯಾಗಿ ಬಳಕೆಯಲ್ಲಿರುವ ಸಣ್ಣ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ನಿತ್ಯ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ. ಅದನ್ನು ಡಾಮರು ಕಾಮ ಗಾ ರಿ ಮಾಡಬೇಕಿದೆ ಎಂದು ಸ್ಥಳೀಯರು ಮೇಯರ್ ಮನೋಜ್ ಕುಮಾರ್ ಅವರಲ್ಲಿ ಮನವಿ ಮಾಡಿದರು. ತಾತ್ಕಾಲಿಕ ರಸ್ತೆ ಡಾಮರು ನಡೆಸುವಂತೆ ಮೇಯರ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
Advertisement
‘ಸುದಿನ’ ಅಭಿಯಾನ ವರದಿ ಪ್ರತಿಧ್ವನಿ‘ಮಲ್ಟಿಲೆವೆಲ್ ಪಾರ್ಕಿಂಗ್ ಇನ್ನೆಷ್ಟು ವರ್ಷ ಬೇಕು?’ ಎಂಬ ವಿಶೇಷ ಸರಣಿ ವರದಿಯನ್ನು ‘ಉದಯವಾಣಿ ಸುದಿನ’ ಸೆ.18ರಿಂದ ಪ್ರಕಟಿಸಿತ್ತು. ಯೋಜನೆ ಬಾಕಿಯಾಗಿದ್ದು, ಮುಂದೇನು? ಎಂಬ ವಿಷಯಗಳ ಬಗ್ಗೆ ವರದಿ ಮಾಡಿತ್ತು. ಮೇಯರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ‘ಸುದಿನ’ ವರದಿಯನ್ನು ಗಮನಕ್ಕೆ ತಂದರು. ಉದಯವಾಣಿಯಲ್ಲಿ ಇಲ್ಲಿನ ಎಲ್ಲ ಸಮಸ್ಯೆಗಳನ್ನು ಫೋಟೋ ಸಹಿತ ಬರೆದಿದ್ದಾರೆ. ಕೇವಲ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದರೆ ಸಾಲದು. ಬೇಗನೆ ಕೆಲಸ ಆರಂಭವಾಗುವಂತಾಗಲಿ ಎಂದು ಅವರು ಮೇಯರ್ ಅವರನ್ನು ಆಗ್ರ ಹಿಸಿದರು. ಯೋಜನೆ ವಿಳಂಬ ಆಗಿದ್ದು ಯಾಕೆ?
‘ಪಿಪಿಪಿ ಮಾದರಿಯಲ್ಲಿ ಅನುಷ್ಠಾನಿಸಬೇಕಾದ ಯೋಜನೆ ಇದು. ಅಂದರೆ 91 ಕೋ.ರೂ.ಗಳ ಮೊತ್ತವನ್ನು ಗುತ್ತಿಗೆದಾರರೇ ಖರ್ಚು ಮಾಡಿ ಕಟ್ಟಡ ನಿರ್ಮಿಸಬೇಕು. ಈಗಾಗಲೇ ಇಲ್ಲಿ ಅಡಿಪಾಯ, ರಿಟೈನಿಂಗ್ ವಾಲ್ ಸಹಿತ ಸುಮಾರು 15 ಕೋ.ರೂ.ಗಳ ಕಾಮಗಾರಿಯನ್ನು ಗುತ್ತಿಗೆದಾರರು ಮಾಡಿದ್ದಾರೆ. ಈ ವೇಳೆ ತಾಂತ್ರಿಕ ಕೆಲವು ಸವಾಲು, ಮಳೆಯ ಕಾರಣ ಹಾಗೂ ಗುತ್ತಿಗೆದಾರರಾದ ರಾಕೇಶ್ ಅವರು ಅನಾರೋಗ್ಯದಿಂದ ನಿಧನ ಹೊಂದಿದ ಕಾರಣದಿಂದ ಕಾಮಗಾರಿ ಮುಂದುವರಿಯಲು ಸಾಧ್ಯವಾಗಿಲ್ಲ. ಟೆಂಡರ್ ಮತ್ತೆ ಬದಲಾವಣೆ ಮಾಡಿದರೆ ಯೋಜನೆ ಮತ್ತೆ ಆರಂಭಕ್ಕೆ ಇನ್ನೂ ಕೆಲವು ವರ್ಷ ಬೇಕಾಗಬಹುದು. ಇದೀಗ ರಾಕೇಶ್ ಅವರ ಪತ್ನಿ ಅನುರಾಧಾ ಪ್ರಭು ಅವರು ಕಾಮಗಾರಿ ಮುಂದುವರಿಸಲು ಉದ್ದೇಶಿಸಿದ್ದಾರೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು.