Advertisement

ಭಾರತ ಬೌಲ್ಡ್‌ ಬೌಲ್ಟ್ 92

12:30 AM Feb 01, 2019 | |

ಹ್ಯಾಮಿಲ್ಟನ್‌: ವಿರಾಟ್‌ ಕೊಹ್ಲಿ ವಿಶ್ರಾಂತಿಗೆ ತೆರಳಿದ ಬೆನ್ನಲ್ಲೇ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಸರದಿಯಲ್ಲಿ ತೀವ್ರ ಕಂಪನವೊಂದು ಸಂಭವಿಸಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಹ್ಯಾಮಿಲ್ಟನ್‌ಲ್ಲಿ ಗುರುವಾರ ನಡೆದ 4ನೇ ಏಕದಿನ ಪಂದ್ಯದಲ್ಲಿ 92 ರನ್ನಿಗೆ ಆಲೌಟಾದ ಭಾರತ 8 ವಿಕೆಟ್‌ಗಳ ಹೀನಾಯ ಸೋಲಿಗೆ ತುತ್ತಾಗಿದೆ. ಎಡಗೈ ವೇಗಿ ಟ್ರೆಂಟ್‌ ಬೌಲ್ಟ್ 21 ರನ್ನಿಗೆ 5 ವಿಕೆಟ್‌ ಉಡಾಯಿಸಿ ಪ್ರವಾಸಿಗರನ್ನು ಬೌಲ್ಡ್‌ ಔಟ್‌ ಮಾಡಿದರು. ಇದರೊಂದಿಗೆ ನಾಯಕ ರೋಹಿತ್‌ ಶರ್ಮ ಅವರ 200ನೇ ಪಂದ್ಯದ ಖುಷಿಯೆಲ್ಲ “ಸೆಡ್ಡನ್‌ ಪಾರ್ಕ್‌’ನಲ್ಲಿ ನೆಲಸಮವಾಯಿತು.

Advertisement

ಸತತ 3 ಪಂದ್ಯಗಳನ್ನು ಸೋತು ತವರಿನಲ್ಲೇ ಸರಣಿ ಕಳೆದುಕೊಂಡ ಹತಾಶೆಯಲ್ಲಿದ್ದ ನ್ಯೂಜಿಲ್ಯಾಂಡ್‌ ತನ್ನೆಲ್ಲ ಸಾಮರ್ಥ್ಯವನ್ನು ಒಂದೇ ಪಂದ್ಯದಲ್ಲಿ ಹೊರಹೊಮ್ಮಿಸುವ ರೀತಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿತು. “ಸಮಾಧಾನ’ಕ್ಕಿಂತ ಮಿಗಿಲಾದ ಗೆಲುವಿನ ಸಂಭ್ರಮದಲ್ಲಿ ತೇಲಾಡಿತು.

ಮೊದಲು ಆಡಲಿಳಿದ ಭಾರತ ಭಾರೀ ಬ್ಯಾಟಿಂಗ್‌ ವೈಫ‌ಲ್ಯವೊಂದನ್ನು ಅನುಭವಿಸಿ 30.5 ಓವರ್‌ಗಳಲ್ಲಿ ಕೇವಲ 92 ರನ್ನಿಗೆ ಸರ್ವಪತನ ಕಂಡಿತು. ಇದು ಹ್ಯಾಮಿಲ್ಟನ್‌ ಅಂಗಳದಲ್ಲಿ ದಾಖಲಾದ ತಂಡವೊಂದರ ಕನಿಷ್ಠ ಗಳಿಕೆ. ಹಿಂದಿನ ದಾಖಲೆ ಕೂಡ ಭಾರತದ ಹೆಸರಲ್ಲೇ ಇತ್ತು (122 ರನ್‌). ಈ ಸಣ್ಣ ಮೊತ್ತವನ್ನು ಮೀರಿ ನಿಲ್ಲಲು ನ್ಯೂಜಿಲ್ಯಾಂಡಿಗೆ ಕೇವಲ 14.4 ಓವರ್‌ ಸಾಕಾಯಿತು. ಕಿವೀಸ್‌ 2 ವಿಕೆಟಿಗೆ 93 ರನ್‌ ಬಾರಿಸಿ ಸರಣಿ ಸೋಲಿನ ಅಂತರವನ್ನು ತಗ್ಗಿಸಿತು. ಅಂತಿಮ ಪಂದ್ಯ ರವಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಭಿನ್ನ ತಂಡ, ಭಿನ್ನ ಫ‌ಲಿತಾಂಶ!
ಹಿಂದಿನ ಮೂರೂ ಪಂದ್ಯಗಳಲ್ಲಿ ಅಧಿಕಾರಯುತ ಜಯದೊಂದಿಗೆ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಅವರದಾಗಿತ್ತು. ರೋಹಿತ್‌ ಪಡೆ ಇದನ್ನೇ ಮುಂದುವರಿಸಿಕೊಂಡು ಹೋಗಬಹುದೆಂಬ ವಿಶ್ವಾಸ ಇತ್ತು. ಆದರೆ ಇದು ಸಂಪೂರ್ಣ ಹುಸಿಯಾಯಿತು. ಕೊಹ್ಲಿ ಜತೆಗೆ ಅನುಭವಿ ಧೋನಿ ಕೂಡ ಈ ಪಂದ್ಯದಿಂದ ಹೊರಗುಳಿದಿದ್ದರು. ಶುಭಮನ್‌ ಗಿಲ್‌ ಮೊದಲ ಸಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಶಮಿ ಬದಲು ಖಲೀಲ್‌ ಅಹ್ಮದ್‌ಗೆ ಅವಕಾಶ ನೀಡಲಾಗಿತ್ತು. ಒಟ್ಟಾರೆ, ಭಾರತ ತಂಡದ ಸ್ವರೂಪ ಬಹಳ ಭಿನ್ನವಾಗಿತ್ತು. ಫ‌ಲಿತಾಂಶ ಕೂಡ!

ಭಯಾನಕ ಬೌಲ್ಟ್
ಸ್ವಿಂಗ್‌ಗೆ ನೆರವು ನೀಡುವ ಅಂಗಳದಲ್ಲಿ ಭಾರತ ಮೊದಲೈದು ಓವರ್‌ಗಳನ್ನು ಎಚ್ಚರಿಕೆಯಿಂದಲೇ ನಿಭಾಯಿಸಿತ್ತು. ಆದರೆ 6ನೇ ಓವರಿನಲ್ಲಿ ಧವನ್‌ ಅವರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ಬೌಲ್ಟ್ ಭಯಾನಕವಾಗಿ ಗೋಚರಿಸತೊಡಗಿದರು. ತಮ್ಮ ಮುಂದಿನ ಓವರಿನಲ್ಲೇ ರೋಹಿತ್‌ ಅವರನ್ನು ರಿಟರ್ನ್ ಕ್ಯಾಚ್‌ ಮೂಲಕ ಪೆವಿಲಿಯನ್ನಿಗೆ ಅಟ್ಟಿದರು.

Advertisement

ಈ ನಡುವೆ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 11ನೇ ಓವರಿನಲ್ಲಿ “ಗ್ರ್ಯಾಂಡ್‌ ಸಕ್ಸಸ್‌’ ಕಂಡರು. 4 ಎಸೆತಗಳ ಅಂತರದಲ್ಲಿ ರಾಯುಡು ಮತ್ತು ಕಾರ್ತಿಕ್‌ ವಿಕೆಟ್‌ ಹಾರಿಸಿದರು. ಇಬ್ಬರೂ ಖಾತೆ ತೆರೆಯಲು ವಿಫ‌ಲರಾಗಿದ್ದರು.ಮುಂದಿನ ಓವರಿನಲ್ಲಿ ಬೌಲ್ಟ್ ಮತ್ತೆ ಭಾರತಕ್ಕೆ ಬಿಗಿದರು. ಚೊಚ್ಚಲ ಪಂದ್ಯವಾಡಲಿಳಿದಿದ್ದ ಶುಭಮನ್‌ ಗಿಲ್‌ ಅವರ ರಿಟರ್ನ್ ಕ್ಯಾಚ್‌ ಪಡೆದರು. 12 ಓವರ್‌ಗಳ ಮುಕ್ತಾಯಕ್ಕೆ ಭಾರತ ಬರೀ 33 ರನ್ನಿಗೆ ಅರ್ಧದಷ್ಟು ಆಟಗಾರರನ್ನು ಕಳೆದುಕೊಂಡು ಪರದಾಡತೊಡಗಿತು.

ಬಳಿಕ ಪಾಂಡ್ಯ, ಕುಲದೀಪ್‌ ಮತ್ತು ಚಾಹಲ್‌ ಸಿಡಿಯುವ ಸೂಚನೆ ನೀಡಿದರೂ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಚಾಹಲ್‌ ಅವರ 18 ರನ್ನೇ ಗರಿಷ್ಠ ವೈಯಕ್ತಿಕ ಮೊತ್ತವೆಂಬುದು ಭಾರತೀಯ ಸರದಿಯ ಒಟ್ಟು ಕತೆಯನ್ನು ಸಾರುತ್ತದೆ!

ಗಪ್ಟಿಲ್‌ ಅಬ್ಬರ
ಕಿವೀಸ್‌ ಚೇಸಿಂಗ್‌ ಭಾರೀ ಅಬ್ಬರದ್ದಾಗಿತ್ತು. ಭುವನೇಶ್ವರ್‌ ಅವರನ್ನು ಬೆದರಿಸಿದ ಗಪ್ಟಿಲ್‌ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಬಳಿಕ ಸತತ 2 ಬೌಂಡರಿ ಬಿತ್ತು. ಹೀಗೆ 3 ಎಸೆತಗಳಿಂದ 14 ರನ್‌ ಬಂತು. 4ನೇ ಎಸೆತದಲ್ಲಿ ಗಪ್ಟಿಲ್‌ ವಿಕೆಟ್‌ ಬಿತ್ತು.ನಾಯಕ ವಿಲಿಯಮ್ಸನ್‌ (11) ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಿಕೋಲ್ಸ್‌-ಟಯ್ಲರ್‌ ಸೇರಿಕೊಂಡು ಉಳಿದ ಕೆಲಸ ಪೂರೈಸಿದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಸಿ ಮತ್ತು ಬಿ ಬೌಲ್ಟ್    7
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಬಿ ಬೌಲ್ಟ್    13
ಶುಭ್‌ಮನ್‌ ಗಿಲ್‌    ಸಿ ಮತ್ತು ಬಿ ಬೌಲ್ಟ್    9
ಅಂಬಾಟಿ ರಾಯುಡು    ಸಿ ಗಪ್ಟಿಲ್‌ ಬಿ ಗ್ರ್ಯಾಂಡ್‌ಹೋಮ್‌    0
ದಿನೇಶ್‌ ಕಾರ್ತಿಕ್‌    ಸಿ ಲ್ಯಾಥಂ ಬಿ ಗ್ರ್ಯಾಂಡ್‌ಹೋಮ್‌    0
ಕೇಧಾರ್‌ ಜಾಧವ್‌    ಎಲ್‌ಬಿಡಬ್ಲ್ಯು ಬಿ ಬೌಲ್ಟ್    1
ಹಾರ್ದಿಕ್‌ ಪಾಂಡ್ಯ    ಸಿ ಲ್ಯಾಥಂ ಬಿ ಬೌಲ್ಟ್    16
ಭುವನೇಶ್ವರ್‌ ಕುಮಾರ್‌    ಬಿ ಗ್ರ್ಯಾಂಡ್‌ಹೋಮ್‌    1
ಕುಲದೀಪ್‌ ಯಾದವ್‌    ಸಿ ಗ್ರ್ಯಾಂಡ್‌ಹೋಮ್‌    ಬಿ ಆ್ಯಸ್ಟಲ್‌    15
ಯಜುವೇಂದ್ರ ಚಾಹಲ್‌    ಔಟಾಗದೆ    18
ಖಲೀಲ್‌ ಅಹ್ಮದ್‌    ಬಿ ನೀಶಮ್‌    5
ಇತರ        7
ಒಟ್ಟು  (30.5 ಓವರ್‌ಗಳಲ್ಲಿ ಆಲೌಟ್‌)        92
ವಿಕೆಟ್‌ ಪತನ: 1-21, 2-23, 3-33, 4-33, 33-5, 6-35, 7-40, 8-55, 9-80.
ಬೌಲಿಂಗ್‌:
ಮ್ಯಾಟ್‌ ಹೆನ್ರಿ        8-2-30-0
ಟ್ರೆಂಟ್‌ ಬೌಲ್ಟ್        10-4-21-5
ಗ್ರ್ಯಾಂಡ್‌ಹೋಮ್‌    10-2-26-3
ಟಾಡ್‌ ಆ್ಯಸ್ಟಲ್‌        2-0-9-1
ಜೇಮ್ಸ್‌ ನೀಶಮ್‌        0.5-0-5-1

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಪಾಂಡ್ಯ ಬಿ ಭುವನೇಶ್ವರ್‌    14
ಹೆನ್ರಿ ನಿಕೋಲ್ಸ್‌    ಔಟಾಗದೆ    30
ಕೇನ್‌ ವಿಲಿಯಮ್ಸನ್‌    ಸಿ ಕಾರ್ತಿಕ್‌ ಬಿ ಭುವನೇಶ್ವರ್‌    11
ರಾಸ್‌ ಟಯ್ಲರ್‌    ಔಟಾಗದೆ    37
ಇತರ                1
ಒಟ್ಟು  (14.4 ಓವರ್‌ಗಳಲ್ಲಿ 2 ವಿಕೆಟಿಗೆ)        93
ವಿಕೆಟ್‌ ಪತನ: 1-14, 2-39.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        5-1-25-2
ಖಲೀಲ್‌ ಅಹ್ಮದ್‌         3-0-19-0
ಹಾರ್ದಿಕ್‌ ಪಾಂಡ್ಯ        3-0-15-0
ಯಜುವೇಂದ್ರ ಚಾಹಲ್‌        2.4-0-32-0
ಕುಲದೀಪ್‌ ಯಾದವ್‌        1-0-2-0
ಪಂದ್ಯಶ್ರೇಷ್ಠ: ಟ್ರೆಂಟ್‌ ಬೌಲ್ಟ್
5ನೇ ಪಂದ್ಯ: ವೆಲ್ಲಿಂಗ್ಟನ್‌ (ಫೆ. 3)

“ಬಹಳ ಸಮಯದ ಬಳಿಕ ಕಂಡುಬಂದ ನಮ್ಮ ಅತ್ಯಂತ ಕಳಪೆ ಬ್ಯಾಟಿಂಗ್‌ ಇದಾಗಿದೆ. ಕೆಲವೊಮ್ಮೆ ನಾವು ಇದರ ನಿರೀಕ್ಷೆಯಲ್ಲೇ ಇರುವುದಿಲ್ಲ. ಎಲ್ಲ ಶ್ರೇಯಸ್ಸು ನ್ಯೂಜಿಲ್ಯಾಂಡ್‌ ಬೌಲರ್‌ಗಳಿಗೆ ಸಲ್ಲಬೇಕು. ಅವರದು ಅದ್ಭುತ ಸಾಧನೆ. ನಮಗೊಂದು ಪಾಠ. ನಮ್ಮ ಮೇಲೆಯೇ ನಾವು ಒತ್ತಡ ಹೇರಿಕೊಂಡು ಸೋತೆವು’
– ರೋಹಿತ್‌ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next