ಜೆರುಸಲೇಂ: ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರ ತಾಣಗಳನ್ನು ಧ್ವಂಸಗೊಳಿಸುವ ಇಸ್ರೇಲ್ ಕಾರ್ಯಾಚರಣೆ ಬಿರುಸುಗೊಂಡಿದ್ದು, ಶನಿವಾರ ನಡೆದ ದಾಳಿಯಲ್ಲಿ ಹಮಾಸ್‌ನ ನಾಯಕನ ನಿವಾಸವನ್ನು ಇಸ್ರೇಲ್ ಪಡೆಗಳು ಪುಡಿಗಟ್ಟಿವೆ. ಗಾಜಾ ನಗರದಲ್ಲಿರುವ ಶತಿ ನಿರಾಶ್ರಿತ ಶಿಬಿರದ ಬಳಿಯೇ ಹಮಾಸ್ ಉಗ್ರ ಇಸ್ರೇಲ್ ಹನಿಯೈನ ನಿವಾಸವಿರುವುದನ್ನು ಪತ್ತೆಹಚ್ಚಿ, ಪ್ರದೇಶದ ಮೇಲೆ ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ನಡೆಸಿವೆ.
ಗಾಜಾದ ಜಾಬಾಲಿಯ ನಿರಾಶ್ರಿತ ಶಿಬಿರದಲ್ಲಿರುವ ಮಕ್ಕಳಿಗಾಗಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಯ ಮೇಲೂ ಕ್ಷಿಪಣಿದಾಳಿ ನಡೆದಿದ್ದು, ಘಟನೆಯಲ್ಲಿ 15 ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಲ್-ಶಿಫಾ ಎಂಬಲ್ಲಿ ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳಿಗೆ ಇಸ್ರೇಲ್ ಪಡೆಗಳ ಬೆಂಗಾವಲು ವಾಹನಗಳು ಡಿಕ್ಕಿ ಹೊಡೆದು 15 ಮಂದಿ ಮೃತರಾಗಿರುವುದು ವರದಿಯಾಗಿದೆ. ಈ ಸಂಬಂಧಿಸಿದಂತೆ ತೀವ್ರ ಆಕ್ಷೇಪ ಕೂಡ ವ್ಯಕ್ತವಾಗಿದೆ.
ಮುಂದುವರಿದ ಶಾಂತಿ ಪ್ರಯತ್ನ: ಯುದ್ಧ ಮುಂದುವರಿದಿರುವಂತೆಯೇ ಗಾಜಾಗೆ ಮಾನವೀಯ ನೆರವು ಒದಗಿಸಲು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟನಿ ಗುಟೇರಸ್ ಕರೆ ನೀಡಿದ್ದಾರೆ. ಇದರ ಜತೆಗೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಲೆಬೆನಾನ್‌ಗೆ ಭೇಟಿ ನೀಡಿದ್ದಾರೆ. ಜತೆಗೆ ಅರಬ್ ರಾಷ್ಟ್ರಗಳ ಇತರ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಿದ್ದಾರೆ. ಕದನವಿರಾಮ ಘೋಷಿಸುವುದಿಲ್ಲವೆಂದು ಪಟ್ಟು ಹಿಡಿದಿರುವ ಪಿಎಂ ನೇತನ್ಯಾಹು ಜತೆಗೆ ಶನಿವಾರವೂ ಜೋರ್ಡನ್, ಈಜಿಪ್ಟ್, ಸೌದಿ, ಕತಾರ್‌ನ ರಾಜತಾಂತ್ರಿಕರು ಮಾತುಕತೆ ನಡೆಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಟೆಲ್ ಅವಿವ್‌ನಲ್ಲಿರುವ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಳ್ಳಲು ಟರ್ಕಿ ಸರಕಾರ ನಿರ್ಧರಿಸಿದೆ.