Advertisement

ಡೇಟಾ ಹಂಗಿಲ್ಲದ ಹ್ಯಾಮ್‌ ರೇಡಿಯೋ

10:09 AM Feb 22, 2020 | mahesh |

ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT ಪರಮೇಶ್‌ ಜಿ.’ ಹೌದು. ಇದು ಮಂಗಳೂರು ಅಮೆಚ್ಯುರ್‌ ರೇಡಿಯೋ ಕ್ಲಬ್‌ ಗೆಳೆಯರ ದಿನದ ಮೊದಲ ದಿನಚರಿ. ಹವ್ಯಾಸಿ ರೇಡಿಯೋ ಬಳಗ ಸುಮಾರು ಐವತ್ತು ವರುಷಗಳಿಂದ ನಿರಂತರವಾಗಿ ಹ್ಯಾಮ್‌ ರೇಡಿಯೋವನ್ನು ಬಳಸುತ್ತ, ಸಂವಹನ ಮಾಡುತ್ತ, ತನ್ನ ಬಳಗವನ್ನು ಬೆಳೆಸುತ್ತ ಇದೆ. ಸುಮಾರು 30-40 ಸಕ್ರಿಯ ಹ್ಯಾಮ್‌ ಬಳಗ ಉಡುಪಿ ಮಂಗಳೂರಿನಲ್ಲಿ ಹೊಂದಿದೆ.

Advertisement

ಅಂತರಜಾಲದೊಂದಿಗೆ ಜಗತ್ತಿಗೆ ಪ್ರದಕ್ಷಿಣೆ ಹಾಕುತ್ತಿರುವ ನಾವು, ಎಂದಾದರೂ ಒಂದು ದಿನ ಅಂತರಜಾಲ ಕಡಿತಗೊಂಡಾಗ ಹೇಗೆ ಜೀವನ ಮಾಡುವುದು ಎಂದು ಯೋಚಿಸಿದ್ದೇವಾ. ಯಾವುದೋ ಆಪತ್ಕಾಲ ಉಂಟಾದಾಗ ಮೊಬೈಲ್‌ ಕೂಡ ಇಲ್ಲದೇ ಹೇಗೆ ಸಂವಹನ ನಡೆಸುವುದು, ಮಾಹಿತಿಯನ್ನು ಇತರರಿಗೆ ಕೊಡುವುದು, ಪಡೆಯುವುದು, ಎಂತಹ ಸವಾಲಾಗಬಹುದು ಎಂದು ಯೋಚನೆ ಮಾಡಿದ್ದು ಕಡಿಮೆ. ಆದರೆ, ಅಂತಹ ಸಂದರ್ಭಗಳಲ್ಲಿ ಹ್ಯಾಮ್‌ ರೇಡಿಯೋ ನೆಟ್‌ವರ್ಕ್‌ ಸಹಾಯ ಮಾಡುತ್ತದೆ.

ದೂರದೂರಿಂದ ಔಷಧಿ ಮಾಹಿತಿ ಪಡೆಯುವುದು, ಪರವೂರಿನ ಹವಾಮಾನ ತಿಳಿದುಕೊಳ್ಳುವುದು, ವಾಹನ ದಟ್ಟಣೆ, ಸಮಾನ ಆಸಕ್ತಿಯ ಹೊಸ ಸ್ನೇಹಿತರನ್ನು ಸಂಪಾದಿಸುವುದು ಸಾಧ್ಯ.
ತುರ್ತಿನ ಸಂದರ್ಭಗಳಲ್ಲಿ ಹ್ಯಾಮ್‌ ರೇಡಿಯೋ ತುಂಬ ಸಹಾಯ ಮಾಡುತ್ತದೆ. ಪ್ರವಾಹವೋ, ಭೂಕಂಪವೋ ಆದಾಗ ನೆಟ್‌ವರ್ಕ್‌ಗಳೆಲ್ಲ ಕುಸಿದು ಬಿದ್ದಾಗ, ಹ್ಯಾಮ್‌ ರೇಡಿಯೋ ಜನರ ಕೈ ಹಿಡಿಯುತ್ತದೆ.

ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಘಡಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೊಲೀಸ್‌, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಸ್ಥಳೀಯ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ, ದೇಶದ ಸೈನಿಕನಂತೆ ಸಹಾಯ ಮಾಡಬಲ್ಲುದು ಈ ರೇಡಿಯೋ.

ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್‌ ರೇಡಿಯೋವೂ ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ, ಅಂತಸ್ತು ಮೀರಿ ಸದಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವೈಯಕ್ತಿಕವಾಗಿ, ಸಮೂಹ ಅಥವಾ ಸಂಸ್ಥೆಯ ಮೂಲಕ ತನ್ನದೇ ಆದ‌ ರೇಡಿಯೋ ನೆಲೆಯಿಂದ ಮತ್ತೂಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸುವುದು ಸಾಧ್ಯ. ಇಂತಹ ಹವ್ಯಾಸ ಹೊಂದಿರುವವರ ಹವ್ಯಾಸಿಗಳ ಬಳಗವೇ ಇದೆ. ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡಬಹುದು.

Advertisement

ಹ್ಯಾಮ್‌ ರೇಡಿಯೊ ಕ್ಲಬ್‌ ಸ್ಥಾಪಕರಲ್ಲೊಬ್ಬರಾದ ಮಹಾಬಲ ಹೆಗ್ಡೆ

ಹೆಲ್ಪ್ ಆಲ್‌ ಮ್ಯಾನ್ಕೈಂಡ್‌ (HAM) ಎಂಬುದು ಮತ್ತೂಂದು ವಿಸ್ತರಣೆ. ಭಾರತ ಸರ್ಕಾರ ನಡೆಸುವ ಅಮೆಚೂರ್‌ ಸ್ಟೇಷನ್‌ ಆಪರೇಟರ್‌ ಸರ್ಟಿಫಿಕೇಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಹ್ಯಾಮ್‌ ಲೈಸನ್ಸ್‌ ಪಡೆದು ಮುಂದೆ ಪ್ರೇಷಕ (ಟ್ರಾನ್ಸ್‌ಮಿಟರ್‌), ಅಭಿಗ್ರಾಹಕ (ರಿಸೀವರ್‌) ಮತ್ತು ಆಂಟೆನಗಳನ್ನು ಒಳಗೊಂಡ ಹವ್ಯಾಸಿ ರೇಡಿಯೋ ಸ್ಟೇಷನನ್ನು ತಮ್ಮ ಮನೆ, ಕಾರು, ಹಡಗು ಎಲ್ಲಿ ಬೇಕಾದರೂ ಸ್ಥಾಪಿಸಿಕೊಳ್ಳಬಹುದು. ಸಾಮಾನ್ಯವಾಗಿ ತಮ್ಮೊಂದಿಗೆ ಚಾಲನಾ ಪರವಾನಗಿ ಇಟ್ಟುಕೊಳ್ಳುವ ಮಾದರಿಯಂತೆ ಇದು. ಈ ಸ್ಟೇಷನ್ನುಗಳಿಗೆ ಆಯಾ ದೇಶ ಮತ್ತು ಹವ್ಯಾಸಿಯ ಹೆಸರುಗಳಿಗೆ ಅನುಗುಣವಾದ ಕರೆ ಚಿಹ್ನೆಗಳು (ಕಾಲ್‌ ಸೈನ್ಸ್‌) ಇರುತ್ತವೆ. ಇವರು ಪರಸ್ಪರ ಸಂಪರ್ಕ ಸಾಧಿಸಿದ ಅನಂತರ ಕರೆ ಗುರುತು ಪತ್ರಗಳ (ಕ್ಯೂ.ಎಸ್‌.ಎಲ್‌) ವಿನಿಮಯವನ್ನು ಮಾಡಿಕೊಳ್ಳುತ್ತಾರೆ.

ಮಂಗಳೂರು ಅಮೆಚೂರ್‌ ರೇಡಿಯೋ ಕ್ಲಬ್‌ನ್ನು 1972ರಲ್ಲಿ ಯು. ವರದರಾಯ ನಾಯಕ್‌ ಮತ್ತು ಮಹಾಬಲ ಹೆಗ್ಡೆಯವರು ಸ್ಥಾಪಿಸಿದರು. ಸುಮಾರು 83 ಪ್ರಾಯದ ಮಹಾಬಲ ಹೆಗ್ಡೆಯವರು ವಿಜಯಾ ಬ್ಯಾಂಕ್‌ ಉದ್ಯೋಗಿಯಾಗಿ ನಿವೃತ್ತರಾಗಿರುವವರು. ಇಂದಿಗೂ ಸಕ್ರಿಯ ಹ್ಯಾಮ್‌ ಪಟು. “ಆ ಕಾಲದಲ್ಲಿ ಮನರಂಜನೆಗೆ ಯಾವುದೇ ಇತರ ಮಾಧ್ಯಮ ಇಲ್ಲದಿ¨ªಾಗ ಅಣ್ಣನ ಮೆಕ್ಯಾನಿಕಲ್‌ ಜ್ಞಾನದಿಂದ ಈ ಹವ್ಯಾಸದ ಕಡೆಗೆ ಮನಸ್ಸು ವಾಲಿತು, ತನ್ನ ರೇಡಿಯೋ ರಿಪೇರಿ, ಇಲೆಕ್ಟ್ರಾನಿಕ್‌ಗಳ ಬಗೆಗಿದ್ದ ಒಲವು ಹ್ಯಾಮ್‌ನ ಕಡೆಗೆ ಸೆಳೆಯಿತು. ಈ ರೇಡಿಯೋ ಮೂಲಕ ಭಾರತದಾದ್ಯಂತ ಹಾಗೂ ವಿದೇಶದಲ್ಲಿಯೂ ಗೆಳೆಯರನ್ನು ಸಂಪಾದಿಸುವುದು ಸಾಧ್ಯವಾಯಿತು’ ಎನ್ನುತ್ತಾರೆ. ಮಣಿಪಾಲದ ಶ್ರೀಕಾಂತ್‌ ಭಟ್‌ ಪ್ರಸ್ತುತ ಮಂಗಳೂರು ಅಮೆಚೂರ್‌ ರೇಡಿಯೋ ಕ್ಲಬ್‌ನ ಅಧ್ಯಕ್ಷರು.

ವಿದ್ಯಾರ್ಹತೆ:
12 ವರ್ಷ ತುಂಬಿದ ಭಾರತದ ನಾಗರಿಕರಾಗಿರಬೇಕು ಹಾಗೂ ದೂರಸಂಪರ್ಕ ಮತ್ತು ವಿದ್ಯುನ್ಮಾನ ಸಚಿವಾಲಯ ಭಾರತ ಸರಕಾರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪ್ರೌಡಶಾಲಾ ಹಂತದ ವಿಜ್ಞಾನ ವಿಷಯ (ಮೂಲ ವಿದ್ಯುತ್‌ ಮತ್ತು ದೂರ ಸಂಪರ್ಕ), ರೇಡಿಯೋ ಬಳಸುವ ಮೂಲ ಜ್ಞಾನ, ರೇಡಿಯೋ ನಿಯಮಗಳು ಮತ್ತು ಕಾನೂನುಗಳ ಬಗೆಗೆ ಪ್ರಾಥಮಿಕ ಜ್ಞಾನ ಇರಬೇಕು.
ಹೆಚ್ಚಿನ ಮಾಹಿತಿಗೆ : 9448503607; 9886133515

ಭರತೇಶ ಅಲಸಂಡೆಮಜಲು

Advertisement

Udayavani is now on Telegram. Click here to join our channel and stay updated with the latest news.

Next