Advertisement
ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಬೇಕು. ಜನರಿಗೆ ಪೊಲೀಸರು ಸುಲಭವಾಗಿ ದೂರು ನೀಡಲು ಸಿಗುವಂತಾಗಬೇಕು ಎಂದು ಹೊಸ ಯೋಜನೆ ರೂಪಿಸಲಾಗಿದೆ. ಹಳ್ಳಿಗೊಬ್ಬ ಎಸ್‌ಐ ಇದ್ದಂತೆ. ಎಲ್ಲ ರೀತಿಯ ದೂರುಗಳನ್ನು ಜನ ಅವರ ಬಳಿ ಹೇಳಬಹುದು ಎಂದು ಎಸ್‌ಪಿ ಅವರು ವಿವರಿಸಿದರು.
ಬೆಳ್ತಂಗಡಿಗೆ ಸಂಚಾರ ಠಾಣೆ ಮಂಜೂರು ಮಾಡಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳನ್ನು ದಲಿತ ಮುಖಂಡ ಶೇಖರ್ ಎಲ್ . ಅಭಿನಂದಿಸಿದರು. ಗುರುವಾಯನಕೆರೆಯಿಂದ ಉಜಿರೆಯವರೆಗೆ ಅತ್ಯಧಿಕ ಸಂಚಾರದಟ್ಟಣೆ ಇದ್ದು ಅನಧಿಕೃತ ಅಂಗಡಿಗಳ ತೆರವಿಗೆ ಒತ್ತಾಯಿಸಿದರು. ಅಕ್ರಮ ಸಾರಾಯಿ ಅಡ್ಡೆ
ಕಳಂಜದಲ್ಲಿ ಅಕ್ರಮ ಸಾರಾಯಿ ಅಡ್ಡೆಗಳು ತಲೆ ಎತ್ತಿದ್ದು ಫೆ.20ರಂದು 5ನೇ ತರಗತಿಯ ಪ್ರವೀಣ ಎಂಬ ಬಾಲಕನಿಗೆ ಮೋಹನ ಎಂಬಾತ ಕಳ್ಳಭಟ್ಟಿ ಸಾರಾಯಿ ಕುಡಿಸಿದ್ದಾನೆ. ಆತ ಅಸ್ವಸ್ಥನಾಗಿ ರಸ್ತೆಯಲ್ಲಿ ಬಿದ್ದುದನ್ನು ನೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಶಾಲೆಗೆ ಹೋಗಲು ಹೆದರುತ್ತಿದ್ದಾನೆ. ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ. ದಲಿತ ಮುಖಂಡರ ಹೆಸರಿನಲ್ಲಿ ವಿಶ್ವನಾಥ ಎಂಬ ವ್ಯಕ್ತಿ ರಾಜಿ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇಂತಹ ಪ್ರಕರಣ ನಡೆಯಲು ಬಿಡಬಾರದು. ವಿಶ್ವನಾಥ ಹಾಗೂ ಧರ್ಮಸ್ಥಳ ಎಸ್‌ಐ ಮೇಲೆ ಕ್ರಮ ಜರಗಿಸಬೇಕೆಂದು ಶ್ರೀಧರ ಕಳಂಜ, ಚಂದು ಎಲ್., ಬಿ.ಕೆ. ವಸಂತ್, ಬೇಬಿ ಸುವರ್ಣ ಒತ್ತಾಯಿಸಿದರು.
Related Articles
Advertisement
ಪೆರಿಯಶಾಂತಿ ಎಂಬಲ್ಲಿ ಕೇಸರಿ ಶಾಲು ಹಾಕಿದ ತಂಡವೊಂದು ಇಲ್ಲದ ದೇವಾಲಯಗಳ ಹೆಸರಿನಲ್ಲಿ ನಕಲಿ ಬ್ರಹ್ಮಕಲಶದ ಚೀಟಿ ಹಿಡಿದು ವಾಹನ ಸವಾರರಿಂದ ಬಲವಂತದ ವಸೂಲಿ ನಡೆಸುತ್ತಿದ್ದೆ ಎಂದು ಚಂದು ಎಲ್. ಹೇಳಿದರು. ಈ ಬಗ್ಗೆ ಯಾರೇ ದೂರು ನೀಡಿದರೂ ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು. ಈ ರೀತಿ ವಸೂಲಿ ಮಾಡಲು ಅವಕಾಶ ಇಲ್ಲ ಎಂದರು. 1,574 ಎಕರೆ ಡಿಸಿ ಮನ್ನಾ ಜಾಗ ಇದ್ದರೂ 990 ಎಕರೆ ಮಾತ್ರ ದಲಿತರಿಗೆ ಮೀಸಲಿಡಲಾಗಿದೆ. ಉಳಿಕೆ ಜಾಗ ಇತರರಿಂದ ಒತ್ತುವರಿ ಆಗಿದೆ ಎಂದು ಕಂದಾಯ ಇಲಾಖೆಯೇ ವರದಿ ನೀಡಿದ್ದು ದಲಿತರ ಭೂಮಿ ಒತ್ತುವರಿ ಮಾಡಿದವರ ಮೇಲೆ ತತ್‌ಕ್ಷಣ ಎಫ್‌ಐಆರ್ ದಾಖಲಿಸಬೇಕೆಂದು ಶೇಖರ್ ಎಲ್. ಒತ್ತಾಯಿಸಿದರು. ತಾಲೂಕಿನಲ್ಲಿ ಸಂವಿಧಾನಬಾಹಿರ ಕೆಲಸ ನಡೆಸುವ ಪುಂಡಪೋಕರಿಗಳ ಸಂಖ್ಯೆ ಹೆಚ್ಚಾಗಿದ್ದು ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸೌಹಾರ್ದ ರ್ಯಾಲಿಯ ಬ್ಯಾನರ್ ಹರಿದವರ ಮೇಲೆ ಕೇಸು ದಾಖಲಿಸಬೇಕು ಎಂದು ಶೇಖರ್ ಒತ್ತಾಯಿಸಿದರು.
ಬಂಟ್ವಾಳ ಡಿವೈಎಸ್‌ಪಿ ರವೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಸಿ. ಆರ್., ಕಂದಾಯ ಇಲಾಖೆ ಪ್ರಥಮ ದರ್ಜೆ ಗುಮಾಸ್ತ ಗೋವಿಂದ ನಾಯ್ಕ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್, ದಲಿತ ದೌರ್ಜನ್ಯ ತಡೆ ಜಿಲ್ಲಾ ಸಮಿತಿ ಸದಸ್ಯ ಸಂಜೀವ ನೆರಿಯ ಮತ್ತಿತರರು ಉಪಸ್ಥಿತರಿದ್ದರು.