ಹಳಿಯಾಳ: ಹಳಿಯಾಳ ಕ್ಷೇತ್ರ ಸೇರಿದಂತೆ ಪಕ್ಕದ ಗಡಿ ಭಾಗಗಳಲ್ಲಿಯೂ ಕಳೆದ 5 ದಿನಗಳಿಂದ ಬಿಡುವಿಲ್ಲದೇ ಸುರಿಯುತ್ತಿರುವ ಭಾರಿ ಮಳೆಯಿಂದ ತಾಲೂಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 62ಕ್ಕೂ ಅಧಿಕ ಮನೆಗಳ ಗೊಡೆಗಳು ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದ್ದರೆ ಇನ್ನೊಂದೆಡೆ ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಹಳಿಯಾಳ ಭಾಗದಲ್ಲಿ ಕಳೆದ 15 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ ಆದರೂ 5 ದಿನಗಳಿಂದ ಮಳೆ ಬಿಡುವಿಲ್ಲದಂತೆ ಧಾರಾಕಾರವಾಗಿ ಸುರಿಯುತ್ತಿರುವುದೇ ಸಾಕಷ್ಟು ಅನಾಹುತಗಳು ಸೃಷ್ಠಿಯಾಗಲು ಕಾರಣವಾಗಿದೆ.
ಹಳಿಯಾಳದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ ತಾಲೂಕಿನ ತೇರಗಾಂವ, ಮಂಗಳವಾಡ, ಯಡೋಗಾ, ಕೆಸರೊಳ್ಳಿ ಹಳ್ಳಗಳು ಹರಿದು ಹೋಗುವ ಸೇತುವೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದಲ್ಲದೇ ಸೇತುವೆ ಸುತ್ತ ಸಾವಿರಾರು ಎಕರೆ ಪ್ರದೇಶದಲ್ಲಿ ನೀರು ಆವರಿಸಿದ್ದರಿಂದ ಕೋಟ್ಯಾಂತರ ರೂ ಮೌಲ್ಯದ ಬೆಳೆಯು ನೀರಿಗೆ ಆಹುತಿಯಾಗಿದೆ. ಪ್ರಥಮ ಬಾರಿಗೆ ತಾಲೂಕಿನಲ್ಲಿ 3 ಗಂಜೀ ಕೇಂದ್ರಗಳನ್ನು ತೆರೆಯಲಾಗಿದೆ.
ಕೆಸರೊಳ್ಳಿ, ಯಡೋಗಾ, ಮಂಗಳವಾಡ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಕೆಸರೊಳ್ಳಿಯಿಂದ ಸೇತುವೆ ಮೇಲಿಂದ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಸಂಚಾರ ಮಂಗಳವಾರ ಸಂಪೂರ್ಣ ಸ್ಥಗೀತವಾಗಿತ್ತು. ರಾತ್ರಿ ವೇಳೆ ನೀರಿನ ಹರಿವು ಕಡಿಮೆಯಾಗಿ ವಾಹನ ಸಂಚಾರ ಆರಂಭಗೊಂಡಿತ್ತು ಆದರೆ ಮತ್ತೆ ಬುಧವಾರದ ಕುಂಭದ್ರೋಣ ಮಳೆಗೆ ಸಾಯಂಕಾಲ ಮತ್ತೆ ಸೇತುವೆ ಜಲಾವೃತವಾಗಿದ್ದು ಸಂಚಾರ ಮತ್ತೆ ಸ್ಥಗಿತಗೊಂಡಿದೆ.
ತಾಲೂಕಿನ ಕೆಸರೊಳ್ಳಿ, ಭಾಗವತಿ ಮತ್ತು ಅಂಬಿಕಾನಗರದಲ್ಲಿ ಗಂಜೀ ಕೇಂದ್ರಗಳನ್ನು ತೆರೆಯಲಾಗಿದ್ದು ಮನೆ ಮಠಗಳನ್ನು ಕಳೆದುಕೊಂಡಂತಹ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಕೆಸರೊಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಗಂಜೀ ಕೇಂದ್ರದಲ್ಲಿ 72 ಮಕ್ಕಳು, 52 ಹೆಂಗಸು ಮತ್ತು 42 ಗಂಡಸರು ಸೇರಿದಂತೆ 200ಕ್ಕೂ ಅಧಿಕ ನಾಗರಿಕರು ದಾಖಲಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಸಿಡಿಪಿಒ ಅಂಬಿಕಾ ಕಟಕೆ ಸೃಷ್ಟಪಡಿಸಿದ್ದಾರೆ.
ಭಾಗವತಿ ಕೇಂದ್ರದಲ್ಲಿ 315 ಹಾಗೂ ಅಂಬಿಕಾನಗರದಲ್ಲಿ 1556 ಜನರು ಗಂಜೀ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕುಡಿಯುವ ಶುದ್ದ ನೀರಿನ ಕ್ಯಾನ್, ಬಿಸ್ಕಿತ್ ಮತ್ತು ಅಡುಗೆ ಮಾಡಲು ಗ್ಯಾಸ್‌ಗಳನ್ನು ನೀಡಿದ್ದು ಸಂಘಟನೆಯ ವಿಲಾಸ ಕಣಗಲಿ ಅವರ ನೇತೃತ್ವದಲ್ಲಿ ಅವುಗಳನ್ನು ಕೆಸರೊಳ್ಳಿ ಗಂಜಿ ಕೇಂದ್ರಕ್ಕೆ ಹಸ್ತಾಂತರಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ 60ಕ್ಕೂ ಅಧಿಕ ಮನೆಗಳ ಗೊಡೆ ಬಿದ್ದು ಜನರು ಬೀದಿಗೆ ಬರುವಂತಾಗಿದೆ. ಪಟ್ಟಣದಲ್ಲಿ 17 ಮನೆ, ಬಿಕೆ ಹಳ್ಳಿಯಲ್ಲಿ 7, ತೇರಗಾಂವದಲ್ಲಿ 6, ಕೆಸರೊಳ್ಳಿಯಲ್ಲಿ 4, ಅಮ್ಮನಕೊಪ,್ಪ ನಂದಿಗದ್ದಾ ಮತ್ತು ಎನ್.ಎಸ್.ಕೊಪ್ಪದಲ್ಲಿ ತಲಾ 3, ಬೆಳವಟಗಿಯಲ್ಲಿ 2, ಮುಂಡವಾಡ, ಮುತ್ತಲಮುರಿ, ಕುರಿಗದ್ದಾ, ಮದಳ್ನಿ ಗ್ರಾಮಗಳಲ್ಲಿ ತಲಾ 1 ಹಾಗೂ ಇತರ 10ಕ್ಕೂ ಅಕ ಗ್ರಾಮಗಳಲ್ಲಿ ಮನೆಗಳ ಗೊಡೆಗಳು ಕುಸಿದಿರುವ ಹಾಗೂ ಮನೆಗಳು ನೆಲಸಮಗೊಳ್ಳುವ ಪ್ರಕರಣಗಳು ಮುಂದುವರೆದಿವೆ. ತಾಲೂಕಾಡಳಿತ ಪರಿಹಾರ ನೀಡಲು ಮುಂದಾಗಿದೆ.