Advertisement

ವಾಯವ್ಯ ಸಾರಿಗೆ ನೌಕರರಿಗೆ ಅರ್ಧ ವೇತನ ಶಿಕ್ಷೆ

04:30 PM May 18, 2022 | Team Udayavani |

ಹುಬ್ಬಳ್ಳಿ: ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಚಾರ ಯಥಾಸ್ಥಿತಿಗೆ ತಲುಪಿ ಕೆಎಸ್‌ಆರ್‌ಟಿಸಿ ಹಾಗೂ ಕಲ್ಯಾಣ ಕರ್ನಾಟಕ ಸಂಸ್ಥೆ ತನ್ನೆಲ್ಲಾ ಸಿಬ್ಬಂದಿಗೆ ಪೂರ್ಣ ವೇತನ ಭಾಗ್ಯ ಕಲ್ಪಿಸಿವೆ. ಆದರೆ ವಾಯವ್ಯ ಸಾರಿಗೆ ಸಿಬ್ಬಂದಿಗೆ ಮಾತ್ರ ಇನ್ನೂ ಅರ್ಧ ವೇತನ ಶಿಕ್ಷೆ ತಪ್ಪಿಲ್ಲ. ಇನ್ನೂ ಬಿಎಂಟಿಸಿಗೆ ಸರಕಾರದ ಅನುದಾನವೇ ಗತಿಯಾಗಿದೆ. ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದು, ಮಕ್ಕಳ ಶುಲ್ಕ, ಸಮವಸ್ತ್ರ ಸೇರಿದಂತೆ ಇತರೆ ಖರ್ಚು ನಿಭಾಯಿಸುವುದು ಹೇಗೆ ಎನ್ನುವ ತ್ರಿಶಂಕು ಸ್ಥಿತಿ ನೌಕರರಲ್ಲಿ ನಿರ್ಮಾಣವಾಗಿದೆ.

Advertisement

ಕೋವಿಡ್‌ ಪೂರ್ವದಲ್ಲಿದ್ದ ಅನವಶ್ಯಕ ಬಸ್‌ಗಳ ಓಡಾಟಕ್ಕೆ ಒಂದಿಷ್ಟು ಕತ್ತರಿ ಹಾಕಲಾಗಿದೆ. ಇರುವ ಸಿಬ್ಬಂದಿಯಲ್ಲೇ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ಹಿಂದಿನಂತೆ ಪ್ರಯಾಣಿಕರು ಸಾರಿಗೆ ಬಸ್‌ ಆಶ್ರಯಿಸಿದ್ದಾರೆ. ಹೀಗಾಗಿ ಏಪ್ರಿಲ್‌ ತಿಂಗಳಲ್ಲಿ ಕೆಎಸ್‌ ಆರ್‌ಟಿಸಿ ನಿತ್ಯದ ಸರಾಸರಿ ಆದಾಯ 9.12 ಕೋಟಿ ರೂ., ವಾಕರಸಾ ಸಂಸ್ಥೆ 4.45 ಕೋಟಿ ರೂ., ಬಿಎಂಟಿಸಿ 3.16 ಕೋಟಿ ರೂ. ಹಾಗೂ ಕಕರಸಾ ಸಂಸ್ಥೆ 4.53 ಕೋಟಿ ರೂ.ಗೆ ತಲುಪಿದೆ. ಮೇ ತಿಂಗಳಿನ ಇಲ್ಲಿಯವರೆಗಿನ
ಸರಾಸರಿ ಆದಾಯ ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ತನ್ನೆಲ್ಲಾ ನೌಕರರಿಗೆ ಪೂರ್ಣ ವೇತನ ನೀಡುತ್ತಿದೆ. ಆದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ ಹಗಲು ರಾತ್ರಿ ದುಡಿಯುವ ನೌಕರರಿಗೆ ಅರ್ಧ ವೇತನ ಪಾವತಿಸುತ್ತಿದ್ದು, ಬಿಎಂಟಿಸಿ ಸರಕಾರದಿಂದ ಅನುದಾನ ಪಡೆದು ಅರ್ಧ ತಿಂಗಳು ಮುಗಿದ ನಂತರ ವೇತನ ನೀಡುತ್ತಿದೆ.

ಎರಡು ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ: ಕೆಎಸ್‌ಆರ್‌ ಟಿಸಿ ಹಾಗೂ ಕಕರಸಾ ಸಂಸ್ಥೆ ಏಪ್ರಿಲ್‌ ತಿಂಗಳ ವೇತನವನ್ನು ಪೂರ್ವ ಪ್ರಮಾಣದಲ್ಲಿ ಪಾವತಿಸಿವೆ. ಫೆಬ್ರವರಿ, ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಸಾರಿಗೆ ಆದಾಯ ಹೆಚ್ಚಳದ ಕಾಲ. ಅದರಂತೆ ಹೆಚ್ಚಾಗಿದ್ದರೂ ವಾಯವ್ಯ ಸಾರಿಗೆ ಸಂಸ್ಥೆ ಮಾತ್ರ ಅರ್ಧ ವೇತನ ಪಾವತಿ ಮಾಡಿದೆ. ಬಿಎಂಟಿಸಿ ಈಗ ವೇತನ ಪಾವತಿಗೆ ಮುಂದಾಗಿದೆ. 2019-20ನೇ ಸಾಲಿನ ಏಪ್ರಿಲ್‌ ತಿಂಗಳ ಸರಾಸರಿ ಸಾರಿಗೆ ಆದಾಯಕ್ಕೆ ಹೋಲಿಸಿದರೆ 2022-23ನೇ ಸಾಲಿನ ಸರಾಸರಿ ಆದಾಯದಲ್ಲಿ ಶೇ.1.5ಕ್ಕಿಂತ ಕಡಿಮೆಯಾಗಿಲ್ಲ. ಆದರೆ ಡಿಸೇಲ್‌, ಬಿಡಿಭಾಗಗಳು ಸೇರಿದಂತೆ ಪ್ರತಿಯೊಂದು ದರ ಹೆಚ್ಚಳವಾಗಿದೆ ಎನ್ನುವುದು ಅರ್ಧ ವೇತನಕ್ಕೆ ನೀಡುವ ಉತ್ತರವಾಗಿದೆ. ಅದರಲ್ಲಿ ಎರಡು ಸಂಸ್ಥೆಗಳು ಸಕಾಲಕ್ಕೆ ಪೂರ್ಣ ವೇತನ ನೀಡಿದರೆ ಇನ್ನುಳಿದ ಎರಡು ಸಂಸ್ಥೆಗಳಿಗ್ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿದೆ.

ಮಕ್ಕಳ ಶಿಕ್ಷಣವೋ, ಜೀವನವೋ: ಇದೀಗ ಮೇ 16ರಿಂದ ಶಾಲೆ-ಕಾಲೇಜುಗಳು ಪುನಾರಂಭವಾಗಿದ್ದು, ಶುಲ್ಕ, ಸಮವಸ್ತ್ರ, ಪಠ್ಯ ಸಾಮಗ್ರಿ ಹೀಗೆ ದೊಡ್ಡ ಖರ್ಚುಗಳ ಸಮಯವಿದು. ಪೂರ್ಣ ವೇತನ ಆಗುತ್ತದೆ. ಮಕ್ಕಳ ಶಾಲೆ ಖರ್ಚು ಹೇಗಾದರೂ ನಿಭಾಯಿಸಬಹುದು ಎಂದುಕೊಂಡಿದ್ದವರಿಗೆ ದಿಕ್ಕು ತೋಚದಂತಾಗಿದೆ. ಬರುವ ಅರ್ಧ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಿ ತುತ್ತಿನ ಚೀಲ ತುಂಬಿಸಿಕೊಳ್ಳಬೇಕೋ ಅಥವಾ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೋ ಎಂಬ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ.

ನೌಕರರ ಮೇಲೆ ಸೇಡು!: ಈ ಹಿಂದೆ ನಡೆಸಿದ ಮುಷ್ಕರದಿಂದ ಸರ್ಕಾರ ಈ ರೀತಿಯಾಗಿ ದ್ವೇಷ ಸಾಧಿಸುತ್ತಿದೆ. ಅಲ್ಲದೆ 2020ರಲ್ಲಿ ವೇತನ ಪರಿಷ್ಕರಣೆಗೆ ಎರಡೂ ವರ್ಷ ಕಳೆದರೂ ಇದರ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಹೀಗಾಗಿ ಅರ್ಧ ವೇತನ ಪಾವತಿಸುವ ಮೂಲಕ ಸಂಸ್ಥೆಗಳ ನಷ್ಟದಲ್ಲಿವೆ. ಸದ್ಯಕ್ಕೆ ವೇತನ ಪರಿಷ್ಕರಣೆ ಅಸಾಧ್ಯ ಎನ್ನುವ ಸಂದೇಶ ನೀಡುತ್ತಿದೆ ಎನ್ನುವ ಭಾವನೆ ನೌಕರರಲ್ಲಿ ಮೂಡಿದೆ. ಏಪ್ರಿಲ್‌ ತಿಂಗಳ ವೇತನಕ್ಕೆ ಸರಕಾರ ಬಿಎಂಟಿಸಿಗೆ 35 ಕೋಟಿ ರೂ. ನೀಡಿದ್ದರಿಂದಾಗಿ ಕೆಲವರಿಗೆ ವೇತನವಾಗುತ್ತಿದೆ. ಸರಕಾರ ಪುನಃ ವಾಯವ್ಯ ಸಾರಿಗೆ ಸಂಸ್ಥೆಗೆ ತಾರತಮ್ಯ ಮಾಡಿದೆ ಎನ್ನುವ ಅಸಮಾಧಾನ ನೌಕರರಲ್ಲಿದೆ.

Advertisement

ಉಳಿದ ಸಂಸ್ಥೆಗಳಿಗೆ ನೀಡುವಂತೆ ಸರ್ಕಾರ ವಾಯವ್ಯ ಸಾರಿಗೆ ಸಂಸ್ಥೆಗೆ ಯಾವುದೇ ವಿಶೇಷ ಅನುದಾನಗಳಿಲ್ಲ. ಇತ್ತೀಚೆಗೆ ಸಿಬ್ಬಂದಿ ಹಾಗೂ ಬಸ್‌ಗಳ ಕೊರತೆ, ಕಿಮೀ ಕಾರ್ಯಾಚರಣೆಯಲ್ಲಿ ಕಡಿಮೆಯಾಗಿದೆ. ಪ್ರಮುಖವಾಗಿ ಡೀಸೆಲ್‌, ಬಿಡಿ ಭಾಗಗಳ ದರ ದೊಟ್ಟ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಇವೆಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿರುವುದರಿಂದ ಪೂರ್ಣ ವೇತನ ಸಾಧ್ಯವಾಗುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಕೂಡ ಮಾಡಿದ್ದೇವೆ.
*ವಿ.ಎಸ್‌.ಪಾಟೀಲ,
ಅಧ್ಯಕ್ಷರು, ವಾಕರಸಾ ಸಂಸ್ಥೆ

ಅರ್ಧ ವೇತನ, ವಿಳಂಬ ಪಾವತಿ ವೇತನ ಕಾಯ್ದೆ ಸಂಪೂರ್ಣ ಉಲ್ಲಂಘನೆ. ಇದೇ ರೀತಿ ಮಾಡುತ್ತಿದ್ದ ಸರ್ಕಾರಿ ಸಂಸ್ಥೆಯೊಂದರ ವಿರುದ್ಧದ ಕಾನೂನು ಹೋರಾಟದಲ್ಲಿ ಆ ಸಂಸ್ಥೆ ದೊಡ್ಡ ಮೊತ್ತದ ನಷ್ಟ ಪರಿಹಾರ ಪಾವತಿ ಮಾಡಿದೆ. ಎರಡು ಸಾರಿಗೆ ಸಂಸ್ಥೆಗಳಿಗೆ ಪೂರ್ಣ ವೇತನ ಸಾಧ್ಯವಾಗುತ್ತಿದೆ. ಉಳಿದೆರಡಕ್ಕೆ ಸಾಧ್ಯವಾಗುವುದಿಲ್ಲ ಎಂದರೆ ಏನರ್ಥ. ಈ ಕುರಿತು ಸಂಬಂಧಿಸಿದವರಿಗೆ ಪತ್ರ ಬರೆಯಲಾಗುತ್ತಿದೆ.
*ಡಾ| ಕೆ.ಎಸ್‌. ಶರ್ಮಾ,
ಅಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ
ನೌಕರರ ಮಹಾಮಂಡಳ

ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next