Advertisement

ಸೂಡಿಯಲ್ಲಿ ಅರ್ಧಕ್ಕೆ ನಿಂತಿದೆ ಗ್ರಂಥಾಲಯ

12:58 PM Nov 11, 2019 | Suhan S |

ಗಜೇಂದ್ರಗಡ: ಸೂಡಿ ಗ್ರಾಮದ ಜನತೆಯ ಜ್ಞಾನದೇಗುಲವಾದ ಗ್ರಂಥಾಲಯ ಕಟ್ಟಡ ಕಾಮಗಾರಿ ದಶಕ ಕಳೆದರೂ ಗ್ರಾಪಂ ಆಡಳಿತ ನಿರ್ಲಕ್ಷದಿಂದ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕಳೆದ 15 ವರ್ಷಗಳ ಹಿಂದೆ ಗ್ರಾಪಂ ಆಡಳಿತ ಶಾಸಕರ ಅನುದಾನ ಮತ್ತು ತಾಪಂ ಅನುದಾನದಡಿ 1.50ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಅನುದಾನ ಕೊರತೆಯಿಂದ ಗ್ರಂಥಾಲಯ ಕಟ್ಟಡ ಮಾತ್ರ ಪೂರ್ಣಗೊಳ್ಳದೇ ಈವರೆಗೂ ಅರ್ಧಕ್ಕೆ ನಿಂತಿದೆ. ಗ್ರಾಪಂ ಕಾರ್ಯಾಲಯ ಪಕ್ಕದಲ್ಲೇ ಇರುವ ಗ್ರಂಥಾಲಯ ಕಟ್ಟಡಕ್ಕೆ ಅಡಿಪಾಯ ಹಾಕಿ ಅರ್ಧ ಗೋಡೆ ಕಟ್ಟಿದ್ದು ಬಿಟ್ಟರೆ ಇನ್ಯಾವ ಕೆಲಸವೂ ನಡೆದಿಲ್ಲ.

ಗ್ರಾಮದಲ್ಲಿ 1988ರಲ್ಲಿ ಆರಂಭವಾಗಿರುವ ಗ್ರಂಥಾಲಯದಲ್ಲಿ ಸದ್ಯ 215 ಜನ ಸದಸ್ಯತ್ವ ಪಡೆದಿದ್ದು, ಸಾಹಿತ್ಯ, ಕಾದಂಬರಿ, ಕಥೆ, ಹನಿಗವನ ಸೇರಿದಂತೆ 4300ಕ್ಕೂ ಅಧಿ ಕ ಅಮೂಲ್ಯ ಪುಸ್ತಕಗಳಿವೆ. ಗ್ರಾಪಂನ ಓಬೇರಾಯನ ಕಾಲದ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಲು ಸರಿಯಾದ ಸ್ಥಳಾವಕಾಶವಿಲ್ಲ. ವಿಶಾಲ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದೇ ಗೋದಾಮಿನಂತಿರುವ ಕೊಠಡಿಯಲ್ಲಿ ಗ್ರಂಥಾಲಯ ನಡೆಸುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಓದುಗರು. ಗ್ರಾಮ ಪಂಚಾಯತಿಗಳು ಸಾರ್ವಜನಿಕರಿಗೆ ಊರಿಗೆ ಮೂಲ ಸೌಲಭ್ಯ ಕೊಡುವುದರ ಜತೆಗೆ ಗ್ರಾಮದ ಯುವಕರು, ಓದುಗರು, ಸಾಹಿತ್ಯಾಸಕ್ತರು ಮತ್ತು ಹಿರಿಯ ಜೀವಿಗಳ ಮುಖ್ಯ ಕೇಂದ್ರವಾಗಿರುವ ಗ್ರಂಥಾಲಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಇಲ್ಲದಿದ್ದರೆ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಅರ್ಧಕ್ಕೆ ನಿಂತಿರುವ ಸೂಡಿ ಗ್ರಾಮದ ಗ್ರಂಥಾಲಯ ಕಟ್ಟಡ ಪೂರ್ಣಗೊಳಿಸಲು ಅನುದಾನ ಕೊರತೆಯಿದೆ. ಹೀಗಾಗಿ ಶಾಸಕರ ವಿಶೇಷ ಅನುದಾನದಲ್ಲಿ ಕಟ್ಟಡಕ್ಕೆ ಹಣ ಮಂಜೂರು ಮಾಡಲು ಸೂಡಿ ಗ್ರಾಪಂ ಆಡಳಿತ ವತಿಯಿಂದ ಶೀಘ್ರವೇ ಶಾಸಕ ಕಳಕಪ್ಪ ಬಂಡಿ ಅವರಿಗೆ ಮನವಿ ಮಾಡಲಾಗುವುದು. ರೇಣುಕಾ ಕಾಶಪ್ಪನವರ, ಗ್ರಾಪಂ ಅಧ್ಯಕ್ಷೆ.

 

Advertisement

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next