Advertisement

ಅಕೇಶಿಯಾ ನೆಡಲು ಎಂಪಿಎಂಗೆ ಭೂಮಿ ಪರಭಾರೆ ; ಆಡಳಿತ ಶಾಸಕ ಹಾಲಪ್ಪ ತೀವ್ರ ವಿರೋಧ

03:44 PM Jul 09, 2022 | Team Udayavani |

ಸಾಗರ: ನಾನು ಆಡಳಿತ ಪಕ್ಷದ ಶಾಸಕ ಸಾಮಾನ್ಯವಾಗಿ ಆಡಳಿತ ಪಕ್ಷದ ಶಾಸಕರು ಸರ್ಕಾರದ ನಿಲುವುಗಳನ್ನು ವಿರೋಧಿಸುವುದಿಲ್ಲ. ಆದರೆ ರಾಜ್ಯ ಸರ್ಕಾರ ಎಂಪಿಎಂಗೆ ಜಿಲ್ಲೆಯಲ್ಲಿ 41,460 ಎಕರೆ ಜಮೀನನ್ನು 40 ವರ್ಷ ಅವಧಿಗೆ ಗುತ್ತಿಗೆ ಕೊಡುತ್ತಿರುವುದನ್ನು ನಾನು ತೀವ್ರವಾಗಿ ಆಕ್ಷೇಪಿಸುತ್ತೇನೆ. ನಾನೂ ಸೇರಿದಂತೆ ಯಾವ ಜನಪ್ರತಿನಿಧಿಗಳ ಗಮನಕ್ಕೂ ತರದೆ ಈ ಪರಭಾರೆ ಪ್ರಕ್ರಿಯೆ ನಡೆಯುತ್ತಿರುವುದು ಸರಿಯಲ್ಲ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲೂಕಿನಲ್ಲಿ 6,060 ಎಕರೆ ಮತ್ತು ಹೊಸನಗರದಲ್ಲಿ 4 ಸಾವಿರ ಎಕರೆ ಎಂಪಿಎಂಗೆ ಗುತ್ತಿಗೆ ನೀಡಲು ಮುಂದಾಗಿರುವ ಮಾಹಿತಿ ಬಂದಿದೆ. ಜಿಲ್ಲೆಯಲ್ಲಿ ಎಂಪಿಎಂ ಮುಚ್ಚಿ 10 ವರ್ಷವಾಗಿದೆ. ಸುಮಾರು 600 ಕೋಟಿ ರೂಪಾಯಿಗೂ ಹೆಚ್ಚು ಪಲ್ಫ್‌ವುಡ್ ಕಟಾವು ಮಾಡುವುದು ಬಾಕಿ ಇದೆ. ಎಂಪಿಎಂ ಕೆಲಸ ಮಾಡದೆ ಇರುವ ಈ ಸಂದರ್ಭದಲ್ಲಿ ಅದನ್ನು ಖಾಸಗಿಯವರಿಗೆ ಕೊಡುತ್ತಾರೆ ಎಂಬ ಸುದ್ದಿಯಿದೆ. ರೈತರಿಗೆ ಬಗರ್‌ಹುಕುಂನಲ್ಲಿ ಕೃಷಿ ಮಾಡಲಿಕ್ಕೂ ಭೂಮಿ ಕೊಡದಿರುವ ಕಾಲದಲ್ಲಿ ಅವರಿಗೆ ಭೂಮಿ ಮಂಜೂರಾತಿ ಮಾಡುತ್ತಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದವರೇ ಎಂಪಿಎಂಗೂ ಮುಖ್ಯಸ್ಥರಾಗಿದ್ದರು. ಈ ಹಂತದಲ್ಲಿ ಅಧಿಕಾರಿ, ಮಂತ್ರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ವ್ಯತ್ಯಾಸವಾಗಿ ಇಂತಹ ನಿರ್ಧಾರ ಹೊರಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಬಾರಿ ಎಂಪಿಎಂಗೆ 75 ಸಾವಿರ ಎಕರೆಯನ್ನು 25 ವರ್ಷಗಳಿಗೆ ಗುತ್ತಿಗೆ ಕೊಟ್ಟಿದ್ದರು. ಈಗಿನಂತೆ ಆಗಲೂ ಸಾಕಷ್ಟು ಷರತ್ತುಗಳನ್ನು ಹಾಕಲಾಗಿತ್ತು. ಒಂದೇ ಒಂದು ನಿಯಮವನ್ನು ಎಂಪಿಎಂ ಅನುಸರಿಸಿರಲಿಲ್ಲ. ಮತ್ತೆ ಈ ರೀತಿಯ ಏಕಜಾತಿ ನೆಡುತೋಪು ಮಾಡುವುದಕ್ಕೆ ನನ್ನ ತೀವ್ರ ವಿರೋಧ ಇದೆ. ಸೋಮವಾರ ಹಾಗೂ ಮಂಗಳವಾರ ಬೆಂಗಳೂರಿನಲ್ಲಿ ಇರಲಿದ್ದೇನೆ. ಆ ಸಂದರ್ಭದಲ್ಲಿ ಈ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ವಿಸ್ತಾರವಾಗಿ ಮಾತನಾಡಲಿದ್ದೇನೆ ಎಂದು ಪ್ರಕಟಿಸಿದರು.

ಇದನ್ನೂ ಓದಿ : ವೇಣೂರು: ಫಲ್ಗುಣಿ ನದಿಯಲ್ಲಿ ತೇಲಿ ಬಂತು ಅಪರಿಚಿತ ಮೃತದೇಹ 

ಈ ಹಿಂದೆ ಎಂಪಿಎಂ ಗುತ್ತಿಗೆ ಪಡೆದ ಜಮೀನಿನಲ್ಲಿ ಕಂದಾಯ, ಅರಣ್ಯ ಮತ್ತು ಕೆಪಿಸಿಗೆ ಸೇರಿದ ಭೂಮಿಯಿದೆ. ಇನ್ನು ಕೆಲವು ಕಡೆಗಳಲ್ಲಿ ರೈತರಿಗೆ ಸೇರಿದ ಜಮೀನು ಸೇರಿಕೊಂಡಿದೆ. ಗುತ್ತಿಗೆ ಅವಧಿ ಮುಗಿದ ಜಮೀನನ್ನು ರೈತರಿಗೆ, ಕಂದಾಯ ಮತ್ತು ಅರಣ್ಯ ಇಲಾಖೆಗೆ ಕೊಡಬೇಕು. ಈ ಜಾಗದಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಲು ಮುಂದಾಗಬೇಕು. ಅದನ್ನು ಬಿಟ್ಟು ಮತ್ತೆ ಎಂಪಿಎಂಗೆ ಕೊಡಲು ಮುಂದಾಗಿರುವುದರ ಹಿಂದೆ ದ್ವಂದ್ವ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರ ಜೊತೆ ಮಾತುಕತೆ ನಡೆಸಿ, ಪರಭಾರೆ ರದ್ದುಮಾಡಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಡಾ. ವೀರೇಂದ್ರ ಹೆಗ್ಗಡೆಯವರು ಅನುಕರಣೀಯ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕಳಕಳಿ ದೇಶವೆ ಮೆಚ್ಚಿದೆ. ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡುವ ಮೂಲಕ ಇನ್ನಷ್ಟು ಸಾಮಾಜಿಕ ಚಟುವಟಿಕೆ ವಿಸ್ತಾರಗೊಂಡಂತಾಗಿದೆ.

ಡಾ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ್ದು ಅತ್ಯಂತ ಸಮಂಜಸ ನಿರ್ಧಾರವಾಗಿದೆ ಎಂದು ಹಾಲಪ್ಪ ಹೆಗ್ಗಡೆಯವರಿಗೆ ಅಭಿನಂದನೆ ಸೂಚಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯೆ ಭಾವನಾ ಸಂತೋಷ್, ಹೊಸನಗರದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next