Advertisement

ಅಕ್ರಮ ಮರಳು ಗಣಿಗಾರಿಕೆ ನಡೆದರೆ ಕಠಿಣ ಕ್ರಮ: ಹಾಲಪ್ಪ ಆಚಾರ್‌

12:22 PM Apr 28, 2022 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಬಸಪ್ಪ ಆಚಾರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳು ಗಣಿಗಾರಿಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಬಡವರಿಗೆ ಸೂರು ನಿರ್ಮಾಣ ಮಾಡಿಕೊಳ್ಳಲು ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 37 ಮರಳು ಬ್ಲಾಕ್‌ಗಳ ಪೈಕಿ 21 ಬ್ಲಾಕ್‌ಗಳನ್ನು ಹೊಸ ಮರಳು ನೀತಿ ಪ್ರಕಾರ ಹಟ್ಟಿ ಗೋಲ್ಡ್‌ ಮೈನ್ಸ್‌ ವತಿಯಿಂದ ನಡೆಯಲು ಕಾರ್ಯಾದೇಶ ನೀಡಬೇಕು ಎಂದು ನಿರ್ದೇಶನ ನೀಡಿದರು.

ಗಣಿಗಾರಿಕೆ ಸಂಬಂಧ ಬಾಕಿ ಇರುವ ನಿರಾಪೇಕ್ಷಣಾ ಪತ್ರಗಳನ್ನು ನಿಮಾಮಾನುಸಾರ ಕಂದಾಯ ಹಾಗೂ ಅರಣ್ಯ ಇಲಾಖೆಗಳು ತುರ್ತಾಗಿ ನೀಡಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗಣಿಗಾರಿಕೆ ಕುರಿತು ಶೀಘ್ರ ಕಾರ್ಯಪಡೆ ರಚಿಸಿ, ಪ್ರತಿತಿಂಗಳು ಸಭೆ ನಡೆಸಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚು ಕಾಡುತ್ತಿರುವ ಅನಿಮಿಯತತೆ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲೆಡೆ ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ನವೀನ್‌ ಯು. ಜಿಲ್ಲೆಯಲ್ಲಿ 554 ತೀವ್ರ ಅಪೌಷ್ಟಿಕತೆ ಮತ್ತು 23,119 ಸಾಧಾರಣ ಕಡಿಮೆ ತೂಕದ ಮಕ್ಕಳಿದ್ದು, ಒಟ್ಟು 23,673 ಅಪೌಷ್ಟಿಕ ಮಕ್ಕಳಿದ್ದಾರೆ. ಈ ಪೈಕಿ ತೀವ್ರ ಅಪೌಷ್ಟಿಕತೆ ಇರುವ ಮಕ್ಕಳಿಗೆ ಸಿರಿಧಾನ್ಯಗಳ ಪುಡಿ ನೀಡುತ್ತಿದ್ದು, ಎಲ್ಲ 554 ಮಕ್ಕಳು ಸೇವಿಸುತ್ತಿದ್ದು, ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರು ಸಿರಿಧಾನ್ಯಗಳ ಪುಡಿ ಇರುವ ಡಬ್ಬಿಯನ್ನು ಸ್ವತಃ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಹಾಬಾದ ತಾಲೂಕಿನಲ್ಲಿ ಗರ್ಭಿಣಿ ಹಾಗೂ ಬಾಣಂತಿಯವರ ಲಸಿಕಾಕರಣ ಮಾಹಿತಿ ಕೇಳಲಾಗಿ, ಗರ್ಭಿಣಿಯರ ಲಸಿಕಾಕರಣ ಶೇಕಡಾ 73.05 ಹಾಗೂ ಬಾಣಂತಿಯರದ್ದು ಶೇ. 62.18ರಷ್ಟು ಆಗಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 171 ಬಾಲ್ಯ ವಿವಾಹದ ಯತ್ನಗಳಲ್ಲಿ 165 ತಡೆದಿದ್ದು ಪ್ರಶಂಸನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮದುವೆಯಾಗಿರುವ ಆರು ಪ್ರಕರಣಗಳಲ್ಲಿ ಕೇವಲ ಮೂರು ಕೇಸುಗಳಲ್ಲಿ ಎಫ್‌ಐಆರ್‌ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರೇ ಸ್ವಯಂಕೃತವಾಗಿ ಈ ಪ್ರಕರಣಗಳಲ್ಲಿ ಕೇಸು ದಾಖಲಿಸಬೇಕು. ಒಂದು ವೇಳೆ ದಾಖಲಿಸದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳೇ ಪೊಲೀಸರಿಗೆ ವರದಿ ಸಲ್ಲಿಸಿ ಕೇಸು ದಾಖಲಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕಾಡಾ ಭೀಮರಾಯನಗುಡಿ ಅಧ್ಯಕ್ಷ ಶರಣಪ್ಪ ತಳವಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ರೇಜು ಎಂ.ಟಿ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ ಸಾಸಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಇಶಾ ಪಂತ್‌, ಡಿಸಿಪಿ ಅಡೂರು ಶ್ರೀನಿವಾಸಲು, ಸಹಾಯಕ ಆಯುಕ್ತರಾದ ಮೋನಾ ರೊಟ್‌, ಸಚಿವರ ಆಪ್ತ ಕಾರ್ಯದರ್ಶಿಗಳಾದ ಡಾ| ನಂದನ ಕುಮಾರ ಜೆ.ವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಗೀತಾ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಡಾ| ಲಕ್ಷಮ್ಮ, ಮೋಹನ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next