Advertisement

ಹಾಲಾಡಿ ಭತ್ತಗುಳಿಯ ಬಂಜರು ಭೂಮಿಯಲ್ಲಿ ಕೃಷಿ ಕ್ರಾಂತಿ

01:02 AM Jan 11, 2023 | Team Udayavani |

ಕುಂದಾಪುರ: ಕೃಷಿಯಿಂದ ಜನ ವಿಮುಖರಾಗುತ್ತಿದ್ದಾರೆ ಅನ್ನುವು ದಕ್ಕೆ ಅಪವಾದವೆಂಬಂತೆ ಇಲ್ಲೊಂದು ಊರಿನ ಕೊರಗ ಜನಾಂಗದ 26 ಕುಟುಂಬಗಳು ಒಟ್ಟು ಸೇರಿ ಬಂಜರು ಭೂಮಿಯನ್ನು ಸಮೃದ್ಧ ಫಸಲಿನ ಕೃಷಿ ಭೂಮಿಯನ್ನಾಗಿಸಿ, ಅಡಿಕೆ, ಹಣ್ಣಿನ ಗಿಡಗಳು, ಹೈನುಗಾರಿಕೆ, ಕೋಳಿ ಸಾಕಣೆ ಸಹಿತ ಬಹು ವಿಧದ ಬೆಳೆ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ 26 ಕೊರಗ ಕುಟುಂಬಗಳು ಸರಕಾರದ ಸಮುದಾಯ ಕೃಷಿ ಯೋಜನೆಯಡಿ ವಿವಿಧ ಸವಲತ್ತುಗಳನ್ನು ಪಡೆದುಕೊಂಡು 4-5 ವರ್ಷಗಳಿಂದ ಶ್ರಮಿಸಿ ಭತ್ತಗುಳಿ ಎಂಬ ಬರಡು ಭೂಮಿಯ 26 ಎಕರೆಯನ್ನು ಕೃಷಿಯೋಗ್ಯವಾಗಿಸಿದ್ದಾರೆ. ಅಡಿಕೆ, ಹಣ್ಣಿನ ಮರಗಳಲ್ಲಿ ಈಗ ಫಸಲು ಬರುತ್ತಿದೆ.

Advertisement

ಸಶಕ್ತರನ್ನಾಗಿಸುವ ಉದ್ದೇಶ
ಕೊರಗ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಮನಗಂಡು ಅಧ್ಯಯನ ನಡೆಸಿದಾಗ ಜೀವನಶೈಲಿ, ಅನಕ್ಷರತೆ, ಅಪೌಷ್ಟಿಕತೆ ಕಾರಣವೆಂದು ತಿಳಿಯಿತು. ಇದಕ್ಕಾಗಿ ಕೊರಗ ಅಭಿವೃದ್ಧಿ ಸಂಘಟನೆಗಳು 2010ರಲ್ಲಿ ಕೊರಗರ ಉಳಿವಿಗಾಗಿ ಚಳವಳಿ ಹಮ್ಮಿಕೊಂಡಿದ್ದವು. ಪರಿಣಾಮವೆಂಬಂತೆ ಸರಕಾರವು ಡಾ| ಮಹಮ್ಮದ್‌ ಫೀರ್‌ ನೇತೃತ್ವದಲ್ಲಿ ಜನಾಂಗದವರ ಕುಂದು ಕೊರತೆ ಮತ್ತು ಶ್ರೇಯೋಭಿವೃದ್ಧಿಗಾಗಿ ಸಮಿತಿ ರಚಿಸಿತು. ಆರ್ಥಿಕವಾಗಿ ಸಶಕ್ತರನ್ನಾಗಿಸಲು ಕನಿಷ್ಠ 2.5 ಎಕರೆ ಜಮೀನನ್ನು ಸರಕಾರದಿಂದ ಮಂಜೂರು ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ, ಆರ್ಥಿಕ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವಂತೆ ಸಮಿತಿ ವರದಿ ನೀಡಿತ್ತು.

26 ಎಕರೆ ಮಂಜೂರು
ಹಾಲಾಡಿಯಲ್ಲಿ 26 ಕುಟುಂಬಗಳಿಗೆ ತಲಾ 1 ಎಕರೆ ಮಂಜೂರಾಗಿದ್ದು, ಕುಮಾರದಾಸ್‌ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಪ್ರತೀ ದಿನ ಶ್ರಮದಾನದ ಮೂಲಕ ದಟ್ಟ ಅರಣ್ಯ ಪ್ರದೇಶವನ್ನು ಹದಗೊಳಿಸಿ ಕೃಷಿಗೆ ಪೂರಕವಾಗಿಸಿದರು. ಅನಂತರ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾ.ಪಂ. ಹಾಲಾಡಿ, ಕೃಷಿ ಇಲಾಖೆ ಮತ್ತು ಶಾಸಕರ ಸಹಕಾರದೊಂದಿಗೆ ಈ ಜಾಗದಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಅಳವಡಿಸಿಕೊಂಡು ತರಹೇವಾರಿ ಕೃಷಿ ಮಾಡಿದ್ದಾರೆ. ನರೇಗಾ, ತೋಟಗಾರಿಕೆ ಇಲಾಖೆ ಸಹಾಯಧನದೊಂದಿಗೆ ಅಡಿಕೆ ತೋಟ ನಿರ್ಮಿಸಿದ್ದಾರೆ.

ಮಿಶ್ರ ಬೆಳೆ, ಉಪಕಸುಬು
ಭತ್ತಗುಳಿಯ ರೈತರು ತಮ್ಮ 1 ಎಕರೆ ಜಮೀನಿನ ಪೈಕಿ ಅರ್ಧ ಎಕರೆಯಲ್ಲಿ ಅಡಿಕೆ ತೋಟ ರಚಿಸಿ, ಉಳಿದ ಭಾಗದಲ್ಲಿ ಬಾಳೆ, ಹಣ್ಣಿನ ಗಿಡಗಳು, ಜೇನು ಕೃಷಿಯಂತಹ ಮಿಶ್ರ ಬೆಳೆಯೊಂದಿಗೆ ಕೋಳಿ ಸಾಕಣೆ, ಹೈನುಗಾರಿಕೆ, ಎರೆಹುಳ ಘಟಕ ಅಳವಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ನೀರಿನ ಮಿತವ್ಯಯ ಸಾಧಿಸಿದ್ದಾರೆ.

ಹಾಲಾಡಿ, ಕೊಕ್ಕರ್ಣೆ, ಪೆರ್ಡೂರು, ಶಿರ್ವ ಸೇರಿದಂತೆ ಜಿಲ್ಲೆಯ ವಿವಿಧೆಡೆ 430 ಕೊರಗ ಕುಟುಂಬಗಳಿಗೆ 450 ಎಕರೆ ಜಮೀನು ನೀಡಲಾಗಿದೆ. ಈ ಪೈಕಿ ಹಾಲಾಡಿಯಲ್ಲಿ ಮಾದರಿಯಾಗಿ ಕೃಷಿ ಮಾಡಿದ್ದಾರೆ.
– ದೂದ್‌ ಪೀರ್‌, ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಇಲಾಖೆ

Advertisement

ಸಮುದಾಯವಾಗಿ ಶ್ರಮಿಸಿದಾಗ ಏನನ್ನೂ ಸಾಧಿಸಬಹುದು. ಅದಕ್ಕೆ ಹಾಲಾಡಿಯ ಕೊರಗ ಕುಟುಂಬದವರು ಸಾಕ್ಷಿ. ಇದು ಎಲ್ಲರಿಗೂ ಮಾದರಿ.
– ಕುಮಾರದಾಸ್‌, ಭತ್ತಗುಳಿ ನಿವಾಸಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next