Advertisement

ಹಕ್ಯಾಳದಲ್ಲಿ ನೀರಿಗಾಗಿ ಪರದಾಟ

01:00 PM May 08, 2019 | Team Udayavani |

ಕಮಲನಗರ: ತಾಲೂಕಿನ ಹಕ್ಯಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಮಹಿಳೆಯರು ನಿತ್ಯ ಕೊಡ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಗ್ರಾಮದ ಹತ್ತಿರವಿರುವ ಕೆರೆಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಗ್ರಾಮದಲ್ಲಿರುವ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಮುರ್ಕಿ ಗ್ರಾ.ಪಂ. ವ್ಯಾಪ್ತಿಯ ಈ ಗ್ರಾಮದಲ್ಲಿ 1200 ಕ್ಕೂ ಹೆಚ್ಚು ಜನ ಸಂಖ್ಯೆಯಿದ್ದು, 4 ಕೊಳವೆ ಬಾವಿ, 1 ತೆರೆದ ಬಾವಿ ಇದೆ.

ಇದರಲ್ಲಿ 2 ಕೊಳವೆ ಬಾವಿ ಬತ್ತಿ ಹೋಗಿದ್ದು, 2 ಕೊಳವೆ ಬಾವಿ, 1 ತೆರೆದ ಬಾವಿಯಿಂದ ನೀರು ಅಲ್ಪ-ಸ್ವಲ್ಪ ಬರುತ್ತಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ.

ಪ್ರಸಕ್ತ ಎಸ್‌.ಸಿ. ಬಡಾವಣೆಯಲ್ಲಿ 1 ಕೊಳವೆ ಬಾವಿ, ಹನುಮಾನ ಮಂದಿರದ ಹತ್ತಿರವಿರುವ 1 ಕೊಳವೆ ಮತ್ತು ಗ್ರಾಮದ ಹೊರವಲಯದಲ್ಲಿರುವ 1 ತೆರೆದ ಬಾವಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಅಂತರ್ಜಲದ ಮಟ್ಟ ಕುಸಿದ ಕಾರಣ ಗ್ರಾಮಸ್ಥರಿಗೆ ನೀರು ಸಾಕಾಗುತ್ತಿಲ್ಲ. ಸುಮಾರು ಒಂದು ತಿಂಗಳಿನಿಂದ ಗ್ರಾಮದಲ್ಲಿ ನೀರಿಗಾಗಿ ಮನೆಯ ಕೆಲಸಗಳನ್ನೆಲ್ಲ ಬಿಟ್ಟು ಮಹಿಳೆಯರು, ಮಕ್ಕಳು, ವೃದ್ಧರು ಕೊಡಗಳನ್ನು ಹಿಡಿದುಕೊಂಡು ಅಕ್ಕ-ಪಕ್ಕದ ಹೊಲ, ಗದ್ದೆಗಳಿಗೆ ಹೋಗಿ ನೀರು ತಂದು ಬಳಸಿಕೊಳ್ಳುತ್ತಿದ್ದಾರೆ. ಈ ಮಧ್ಯದಲ್ಲಿ ವಿದ್ಯುತ್‌ ಕೈಕೊಡುತ್ತಿದೆ. ಆಗ ಗಂಟೆಗಟ್ಟಲೇ ಕಾಯ್ದು ನೀರು ತರಬೇಕಿದೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

Advertisement

ನೀರಿನ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಗ್ರಾಮ ಪಂಚಾಯತ್‌ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಚುನಾಯಿತರು, ಅಧಿಕಾರಿಗಳು ಕೂಡಲೇ ಗ್ರಾಮದಲ್ಲಿ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಸದ್ಯ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಸಂಬಂಧಿತ ಅಧಿಕಾರಿಗಳು ಟ್ಯಾಂಕರ್‌ ವ್ಯವಸ್ಥೆ ಮಾಡಿಸಿ ನೀರಿನ ಸಮಸ್ಯೆ ಬಗೆಹರಿಸಬೆಕು.
• ನಾಗೇಂದ್ರ ಬಿರಾದಾರ, ಗ್ರಾಮಸ್ಥ.

ನೀರಿನ ಬರ ನಿಗಿಸಲು ಖಾಸಗಿಯವಾಗಿ ಕಿರಣ ಪಾಟೀಲ್ ಅವರ ಹೊಲದ ಕೊಳವೆ ಬಾವಿಯಿಂದ ಉಚಿತ ನೀರು ಕೊಡುತ್ತಿದ್ದಾರೆ. ಮತ್ತೂಬ್ಬ ಖಾಸಗಿ ಅವರ ಕೊಳವೆ ಬಾವಿಯಿಂದ ನೀರು ಖರೀದಿಸಿ ಜನರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಹಣಮಂತರಾಯ ಕೌಟಗೆ,
ಮುರ್ಕಿ ಪಿಡಿಒ.

ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ನಮ್ಮ ಹೊಲದಲ್ಲಿರುವ ಕೊಳವೆಯಿಂದ ಉಚಿತವಾಗಿ ನೀರನ್ನು ಪೂರೈಸುತ್ತಿದ್ದೇನೆ. ಮುಂದೆಯೂ ಕೂಡಾ ನೀರಿನ ಸಮಸ್ಯೆ ಬಗೆಹರಿಸಲು ಉಚಿತವಾಗಿ ನೀರನ್ನು ಕೊಡಲು ಸಿದ್ಧ.
ಕಿರಣ ಪಾಟೀಲ್, ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next