ಬೆಂಗಳೂರು: ಕೊಲೆಗೆ ಹಣ ಹೊಂದಿಸಲು ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ರೌಡಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ನಿವಾಸಿಗಳಾದ ಮೋಹನ್ ಕುಮಾರ್ ಅಲಿಯಾಸ್ ಡಬ್ಬಲ್ ಮೀಟರ್ ಮೋಹನ್(30), ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ (30), ರಾಜು( 24) ಹಾಗೂ ಬಸವರಾಜು ಬಂಧಿತರು.
ಫೆ.20ರ ತಡರಾತ್ರಿ 1 ಗಂಟೆ ಸುಮಾರಿಗೆ ಆರೋಪಿಗಳು ಯಲಹಂಕದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಮಣಿ ಎಂಬ ರೌಡಿಯ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ. ಹಣಕ್ಕಾಗಿ ದರೋಡೆ ಮಾಡಲು ಮುಂದಾಗಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ ಎರಡು ಕಾರು, ನಾಡ ಪಿಸ್ತೂಲ್ , ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಡಬಗೆರೆ ಶ್ರೀನಿವಾಸ್ ಪ್ರಕರಣದಲ್ಲಿ ಬಂಧನ?: ಆರೋಪಿಗಳು ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದ ಶಂಕೆ ವ್ಯಕ್ತವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಖಚಿತಪಡಿಸಿಲ್ಲ. ಬಂಧಿತರಲ್ಲಿ ಮೋಹನ್ ಮತ್ತು ನಾಗರಾಜ್ ಈಗಾಗಲೇ ಶೂಟೌಟ್ ಪ್ರಕರಣದಲ್ಲಿ ಬಂಧಿತರಾಗಿರುವ ರೌಡಿ ಸೈಲಂಟ್ ಸುನೀಲ ಮತ್ತು ಒಂಟೆ ರೋಹಿತನ ಸಹಚರರಾಗಿದ್ದಾರೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಹೇಳಿದ್ದಾರೆ.
ಮೋಹನ್, ನಾಗರಾಜ್ ವಿರುದ್ಧ 15 ಪ್ರಕರಣ: ಮೋಹನ್ ಮತ್ತು ನಾಗರಾಜ್ ನಗರದಲ್ಲಿ ನಡೆದ ಐದು ಕೊಲೆ ಪ್ರಕರಣಗಳಲ್ಲಿ ಆರೋಪಿ ಗಳಾಗಿದ್ದಾರೆ. ಹಲವು ಠಾಣೆಯಲ್ಲಿ ಈ ಇಬ್ಬರ ವಿರುದ್ಧ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರೌಡಿ ಮೋಹನ್ 2003ರಲ್ಲಿ ಬನಶಂಕರಿಯಲ್ಲಿ ನಡೆದ ಮೋಟಾ ವೆಂಕಟೇಶ್ ಕೊಲೆ, 2007ರ ವಿಲ್ಸನ್ ಗಾರ್ಡನ್‌ನಲ್ಲಿ ಬಾಲು ಎಂಬಾತನ ಹತ್ಯೆ ಹಾಗೂ 2013ರಲ್ಲಿ ಕೆಂಗೇರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಸರ್ಕಲ್ ಗಿರಿ ಎಂಬಾತನ ಕೊಲೆ ಪ್ರಕರಣದ ಆರೋಪಿಯಾಗಿದ್ದ.
ಇನ್ನೂ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ 2009ರಲ್ಲಿ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಗೇಟ್ ಗಣೇಶ ಎಂಬಾತನ ಕೊಲೆ, 2012ರಲ್ಲಿ ಮುರುಳಿ ಎಂಬಾತನ ಅಪಹರಿಸಿದ ಕೊಲೆಗೈದಿದ್ದ. ಅದೇ ವರ್ಷ ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಕುಪೇಂದ್ರ ಎಂಬಾತನ ಕೊಲೆ, 2014ರಲ್ಲಿ ಬಿಟಿಎಂ ಲೇಔಟ್ ನಲ್ಲಿ ನಕ್ರಬಾಬು, 2015ರಲ್ಲಿ ಸುಹೇಲ್ ಎಂಬಾತನ ಕೊಲೆ ಮಾಡಿದ್ದ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ವಿವರಿಸಿದರು.