Advertisement

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

01:14 AM Sep 09, 2022 | Team Udayavani |

ಉಡುಪಿ: ಕಾನೂನು ಸುವ್ಯವಸ್ಥೆಗೆ ಆದ್ಯತೆ, ಸೌಹಾರ್ದ ವಾತಾವರಣ, ಪ್ರಗತಿಪರ ಆಲೋಚನೆ, ಉತ್ತಮ ವಾತಾವರಣ ಸೃಷ್ಟಿಗೆ ಒತ್ತು ನೀಡುವುದೇ ನನ್ನ ಮೊದಲ ಆದ್ಯತೆ. ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಅವರು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರ ವಿವರ ಇಲ್ಲಿದೆ.

Advertisement

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹೇಗೆ ಸಾಧ್ಯ?

– ಇಂಟರ್‌ನೆಟ್‌ ಹಾಗೂ ಮೊಬೈಲ್‌ ಬ್ಯಾಂಕಿಂಗ್‌ ಬಂದ ಬಳಿಕ ಅದರ ಸದುಪಯೋಗದಷ್ಟೇ ದುರುಪಯೋಗವೂ ನಡೆಯುತ್ತಿದೆ. ಪಾಸ್‌ವರ್ಡ್‌ ಕೇಳುವುದು, ವಿವಿಧ ಆಫ‌ರ್‌ಗಳ ಆಮಿಷ ಒಡ್ಡಿ ಹಣ ದೋಚುವ ಘಟನೆಗಳು ಹೆಚ್ಚಾಗಿವೆ. ವಿವಿಧ ರೀತಿಯ ಲಿಂಕ್‌ಗಳ ಮೂಲಕವೂ ಹಣ ದೋಚುವ ಪ್ರಕರಣ ನಡೆಯುತ್ತಿದೆ. ಇಂತಹ ಲಿಂಕ್‌ಗಳಿಗೆ ಮಾರುಹೋಗದೆ ಯಾವುದೇ ಪ್ರತಿಕ್ರಿಯೆ ನೀಡದಿರುವುದೇ ಉತ್ತಮ.

ಆನ್‌ಲೈನ್‌ ಮೂಲಕ ವಂಚನೆಗೊಳಗಾದವರು 3 ಅಥವಾ 4 ಗಂಟೆಯೊಳಗೆ ಸೈಬರ್‌ ಠಾಣೆ ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದೂರು ನೀಡಲು ಸಮಯ ಹೆಚ್ಚು ತೆಗೆದುಕೊಂಡರೆ ಆರೋಪಿಗಳ ಪತ್ತೆ ಕಾರ್ಯವೂ ಜಟಿಲವಾಗಲಿದೆ. ಮುಖ್ಯವಾಗಿ ಬ್ಯಾಂಕ್‌ ಖಾತೆಗಳ ಪಾಸ್‌ವರ್ಡ್‌ ಗಳನ್ನು ಬದಲಾಯಿಸುತ್ತಿದ್ದರೆ ಉತ್ತಮ. ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ವಿನಿಮಯ ಮಾಡಕೂಡದು.

ಡ್ರಗ್ಸ್‌ ಮಾಫಿಯಾ ತಡೆಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತೀರಿ?

Advertisement

ಮಾದಕ ವಸ್ತುಗಳ ಸಾಗಣೆ ಹಾಗೂ ಸೇವನೆ ಎರಡೂ ಅಪರಾಧ. ಜಿಲ್ಲೆಯಲ್ಲಿ ಮಾದಕ ವ್ಯಸನಕ್ಕೆ ಕಡಿವಾಣ ಹಾಕಲು ವಿಶೇಷ ಡ್ರೈವ್‌ ಮಾಡಲಾಗುತ್ತಿದೆ. 15 ದಿನಗಳಲ್ಲಿ 70 ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಈ ಜಾಲದ ಹಿಂದಿರುವ ಪ್ರಮುಖ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯವೂ ನಡೆದಿದೆ. ಇಂತಹ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೆ ಅಪರಾಧಿಗಳನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.

ಮಟ್ಕಾ ಚಟುವಟಿಕೆಯೂ ಎಗ್ಗಿಲ್ಲದೆ ನಡೆಯುತ್ತಿದೆಯಲ್ಲ?

ಡ್ರಗ್ಸ್‌, ಮಟ್ಕಾ ಸಹಿತ ಯಾವುದೇ ರೀತಿಯ ಅನೈತಿಕ ಚಟುವಟಿಕೆ ನಡೆದರೂ ತಡೆಯಲಾಗುವುದು. ಈಗಾಗಲೇ ಎಲ್ಲ ಪೊಲೀಸರಿಗೂ ನಿಗಾ ಇರಿಸಲು ಸೂಚಿಸಲಾಗಿದೆ. ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕರಿಸಿದರೆ ಇಂಥ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯ. ಸೂಕ್ತ ಮಾಹಿತಿ, ಪೂರಕ ದಾಖಲೆಗಳಿದ್ದರೆ ಸ್ಥಳೀಯ ಠಾಣೆ ಅಥವಾ ಎಸ್‌ಪಿ ಕಚೇರಿಗೂ ನೀಡಬಹುದು. ಮಾಹಿತಿ ಪರಿಪೂರ್ಣವಾಗಿದ್ದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ರಾಣಿ ಅಬ್ಬಕ್ಕ ಪಡೆ ಈಗೆಲ್ಲಿ?

ಶಾಲಾರಂಭ ಹಾಗೂ ತರಗತಿಗಳು ಬಿಟ್ಟ ಅನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿರುವ ಇಆರ್‌ಎಸ್‌ಎಸ್‌ ವಾಹನಗಳು, ಹೊಯ್ಸಳ ವಾಹನಗಳು ಗಸ್ತು ಕಾರ್ಯಾಚರಣೆ ನಡೆಸುತ್ತಿವೆ. ರಾಣಿ ಅಬ್ಬಕ್ಕ ಪಡೆಗೆ ವಿಶೇಷ ಒತ್ತು ನೀಡಲಾಗುವುದು. ಪೊಲೀಸರ ಬಗ್ಗೆ ಸಾರ್ವಜನಿಕರಿಗೆ ಭಯ ಇರಕೂಡದು. ಕಾನೂನು ಬಗ್ಗೆ ಭಯ ಇರಬೇಕು. ಯಾವುದೇ ಅಹಿತಕರ ಘಟನೆ ಆಗದಿರುವಂತೆ ಪೊಲೀಸ್‌ ಇಲಾಖೆ ನಿಗಾ ಇರಿಸಲಿದೆ.

 ನಗರದ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಸಿಗ್ನಲ್‌ ಲೈಟ್‌ಗಳ ಅಳವಡಿಕೆ ಪ್ರಸ್ತಾವನೆ ಏನಾಯಿತು?

ಈಗಾಗಲೇ ಕೆಲವೆಡೆ ಇಲಾಖೆ ಅಳವಡಿಸಿದ ಕೆಮರಾಗಳಿವೆ. ಸರಿ ಇಲ್ಲದ್ದಿರೆ ದುರಸ್ತಿಪಡಿಸಲಾಗುವುದು. ಉಳಿದ ಪ್ರಮುಖ ಭಾಗಗಳಲ್ಲಿ ಸಿಗ್ನಲ್‌ ಲೈಟ್‌ ಅಳವಡಿಸಲು ಅಧ್ಯಯನ ನಡೆಸಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ ಹೆಚ್ಚುವರಿ ಕೆಮರಾ ಅಳವಡಿಕೆ ಬಗ್ಗೆ ಪರಿಶೀಲಿಸಲಾಗುವುದು.

 ಎಸ್‌ಪಿ ಫೋನ್‌ ಇನ್‌ ಮತ್ತೆ ಆರಂಭವಾಗಬಹುದೇ?

ಸಾರ್ವಜನಿಕರು ಯವುದೇ ಸಮಸ್ಯೆಗಳಿದ್ದರೆ ಇಲಾಖೆಯನ್ನು ಸಂಪರ್ಕಿಸಬಹುದು. ಪೊಲೀಸ್‌ ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಫೋನ್‌ ಇನ್‌ ಆರಂಭಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

 

-ಪುನೀತ್‌ ಸಾಲ್ಯಾನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next