Advertisement

ಆರೋಗ್ಯ ಸೇವೆಗಳಿಗೆ ಸರಕಾರದ ಅನುಮತಿ ನಿರೀಕ್ಷೆ

06:00 AM Jun 29, 2018 | Team Udayavani |

ಉಡುಪಿ: ಉಡುಪಿ ನಗರಸಭೆ ಕಚೇರಿ ಎದುರು ನಿರ್ಮಾಣಗೊಂಡಿರುವ ಡಾ| ಬಿ. ಆರ್‌. ಶೆಟ್ಟಿ ಅವರ ಬಿ. ಆರ್‌.ಲೈಫ್- “ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯಲ್ಲಿ ಸರಕಾರದೊಂದಿಗಿನ ಒಡಂಬಡಿಕೆಯಂತೆ ಹೆಂಗಸರು ಮತ್ತು ಮಕ್ಕಳಿಗೆ ಚಿಕಿತ್ಸೆ ಆರಂಭವಾಗಿದೆ. ಆದರೆ ಪ್ರಸ್ತುತ ಪಕ್ಕದಲ್ಲೇ ಇರುವ ಹೆಂಗಸರು ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿಕೊಂಡು ಬರುವವರಿಗೆ (ಹೊರರೋಗಿ ವಿಭಾಗದ ಸೇವೆ) ಮಾತ್ರ ದೊರೆಯುತ್ತಿದೆ. 200 ಹಾಸಿಗೆಗಳುಳ್ಳ ಈ ಆಸ್ಪತ್ರೆಯಲ್ಲಿ ದಾಖಲಾತಿ ಪ್ರಕ್ರಿಯೆ, ಇತರ ಸೇವೆಗಳನ್ನು ಆರಂಭಿಸಲು ಸರಕಾರದ ಒಪ್ಪಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಆಸ್ಪತ್ರೆ 2017 ನವೆಂಬರ್‌ನಲ್ಲಿ ಉದ್ಘಾಟಿಸಲ್ಪಟ್ಟಿತ್ತು. 

Advertisement

ಈಗ ಇರುವ ಹೆಂಗಸರು ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಸ್ಥಳದಲ್ಲಿ ಬಿ.ಆರ್‌.ಶೆಟ್ಟಿ ಅವರ ಬಿ.ಆರ್‌.ಲೈಫ್ನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಜಾಗ ನೀಡಿರುವುದಕ್ಕೆ ಪ್ರತಿಯಾಗಿ ಬಿ.ಆರ್‌.ಲೈಫ್ನವರು ಆಧುನಿಕ ಸೌಲಭ್ಯಗಳುಳ್ಳ 200 ಬೆಡ್‌ಗಳ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲು ಒಡಂಬಡಿಕೆ ನಡೆಸಲಾಗಿದೆ. ಅದರಂತೆ ಸೇವೆ ಆರಂಭಗೊಂಡಿದೆ.

“ಏಕಕಾಲದಲ್ಲಿ 6 ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದಾದ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು ಸೇರಿದಂತೆ ಸೂಪರ್‌ ಸ್ಪೆಷಾಲಿಟಿಗೆ ಸಮಾನವಾದ ಸೌಲಭ್ಯಗಳು ಇಲ್ಲಿ ದೊರೆಯುತ್ತವೆ. ಪ್ರಸ್ತುತ ಗರ್ಭಿಣಿಯರ ತಪಾಸಣೆ, ಚಿಕಿತ್ಸೆ ನಡೆಯುತ್ತಿದೆ. ಆದರೆ ಹೆರಿಗೆ ಪಕ್ಕದಲ್ಲಿರುವ ಹೆಂಗಸರು ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಮುಂದೆ ಇಲ್ಲಿಯೇ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ದೊರೆಯಲಿವೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದರು.

ದಿನಕ್ಕೆ100 ಮಂದಿಗೆ ಚಿಕಿತ್ಸೆ 
ಪ್ರಸ್ತುತ ಹೆರಿಗೆ ಮತ್ತು ಇತರ ಚಿಕಿತ್ಸೆಗೆ ಸುಮಾರು 100ರಷ್ಟು ಮಂದಿ ಹೆಂಗಸರು ಮತ್ತು ಮಕ್ಕಳು ಆಗಮಿಸುತ್ತಿದ್ದಾರೆ. ಇಲ್ಲಿ ಯಾವುದೇ ಶುಲ್ಕ ಪಡೆದುಕೊಳ್ಳುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭವಾದ ಅನಂತರವೂ ಯಾವುದೇ ಶುಲ್ಕ ಇರುವುದಿಲ್ಲ. ಇಲ್ಲಿ ಸೂಪರ್‌ ಸ್ಪೆಷಾಲಿಟಿಗೆ ಸಮಾನವಾದ ಚಿಕಿತ್ಸಾ ಸೌಲಭ್ಯಗಳು ದೊರೆಯಲಿವೆ. 5 ಮಂದಿ ಸ್ತ್ರೀರೋಗ ತಜ್ಞೆಯರು, ಮೂವರು ಮಕ್ಕಳ ತಜ್ಞರು ಹಾಗೂ ನಾಲ್ವರು ಇತರ ಡ್ನೂಟಿ ಡಾಕ್ಟರ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆ ಮತ್ತಷ್ಟು ವೈದ್ಯರ ನೇಮಕ ನಡೆಯಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಜಗದೀಶ್‌ ಶರ್ಮಾ ಶಾಸಕರ ಭೇಟಿ ವೇಳೆ ಸುದ್ದಿಗಾರರಿಗೆ ತಿಳಿಸಿದರು. 

ಏನೇನಿದೆ?
ತಳಅಂತಸ್ತಿನಲ್ಲಿ ಉಪಾಹಾರ ಗೃಹ, ತುರ್ತುಚಿಕಿತ್ಸೆ, ಎಕ್ಸ್‌ರೇ, ರಕ್ತಮಾದರಿ ಸಂಗ್ರಹಣೆ, ಪ್ರಯೋಗಾಲಯ, ಔಷಧಾಲಯ, ರಿಸೆಪ್ಷನ್‌ ಇತ್ಯಾದಿ, ಮೊದಲ ಅಂತಸ್ತಿನಲ್ಲಿ ಪಾರ್ಕಿಂಗ್‌, ಎಮರ್ಜೆನ್ಸಿ, ಎಕ್ಸ್‌ರೇ, ಫಾರ್ಮಸಿ ಮೊದಲಾದವು, ಎರಡನೇ ಮಹಡಿಯಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿ/ಸ್ತ್ರೀರೋಗ ಚಿಕಿತ್ಸಾ ವಿಭಾಗ, ಚಿಕಿತ್ಸಾ ಕೊಠಡಿ, ಅಲ್ಟ್ರಾಸೌಂಡ್‌, ಡೇಕೇರ್‌ ಸೆಂಟರ್‌, ಕುಟುಂಬ ಕಲ್ಯಾಣ ವಾರ್ಡ್‌, ದಾಖಲಾತಿ ಕೌಂಟರ್‌, ಮೂರನೇ ಅಂತಸ್ತಿನಲ್ಲಿ ಆಪರೇಷನ್‌ ಥಿಯೇಟರ್‌, ಲೇಬರ್‌ ವಾರ್ಡ್‌, ಅಲ್ಟ್ರಾ ಸೌಂಡ್‌, ಡೇ ಕೇರ್‌ ಸೆಂಟರ್‌, ಫ್ಯಾಮಿಲಿ ಫ್ಲಾನಿಂಗ್‌ ವಾರ್ಡ್‌ ಮೊದಲಾದವು, ನಾಲ್ಕನೇ ಅಂತಸ್ತಿನಲ್ಲಿ ನವಜಾತ ಶಿಶುವಿನ ತೀವ್ರ ನಿಗಾ ಘಟಕ, ಮಕ್ಕಳ ತೀವ್ರ ನಿಗಾ ಘಟಕ, ವೈದ್ಯಕೀಯ ತೀವ್ರ ನಿಗಾ ಘಟಕ, ಐಸೊಲೇಷನ್‌ ಕೊಠಡಿ, ಮಕ್ಕಳ ವಾರ್ಡ್‌, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಸೂತಿ ಘಟಕ ಇತ್ಯಾದಿ, ಐದನೇ ಆಂತಸ್ತಿನಲ್ಲಿ ಐಸಿಯು, ಮಕ್ಕಳ ವಾರ್ಡ್‌ ಮೊದಲಾದವು, 6ನೇ ಮಹಡಿಯಲ್ಲಿ ಸ್ತ್ರೀರೋಗ ವಾರ್ಡ್‌, ಪ್ರಸವಪೂರ್ವ ವಾರ್ಡ್‌, ಪ್ರಸವೋತ್ತರ ವಾರ್ಡ್‌ ಮಾದಲಾದವುಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next