Advertisement

ಕೈಕೊಟ್ಟ ಮಳೆ: ಕುಡಿಯುವ ನೀರಿಗೆ ಪರದಾಟ

04:15 PM Aug 01, 2018 | |

ಚಿಕ್ಕಬಳ್ಳಾಪುರ: ಮಳೆ ಕೈ ಕೊಟ್ಟಿರುವ ಪರಿಣಾಮ ಒಂದೆಡೆ ಬಿತ್ತನೆ ಪ್ರಮಾಣ ಭಾರಿ ಕುಸಿತಗೊಂಡಿದ್ದರೆ ಮತ್ತೂಂದೆಡೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರಿ ಜಿಲ್ಲೆಯ ಒಟ್ಟು 50 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿರ್ಮಾಣವಾಗಿದೆ.

Advertisement

ಹಲವು ತಿಂಗಳಿಂದ ಮಳೆಯ ದರ್ಶನವಾಗದೇ ಕೃಷಿ ಚಟುವಟಿಕೆಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಕುಂಠಿತಗೊಂಡಿದ್ದು, ಬಿತ್ತನೆಗೆ ಸಜ್ಜಾಗಿರುವ ರೈತರು ಮಳೆಗಾಗಿ ಆಕಾಶದತ್ತ ದಿಟ್ಟಿಸಿ ನೋಡುವಂತಾಗಿದೆ. ಇದುವರಿಗೂ ಶೇ.38ರಷ್ಟು ಮಾತ್ರ ಬಿತ್ತನೆ ಆಗಿರುವುದು ಕೃಷಿ ಇಲಾಖೆಯನ್ನು ಚಿಂತೆಗೀಡು ಮಾಡಿದ್ದರೆ, ಮಳೆ ಕೈ ಕೊಟ್ಟು ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತದ ಕದ ತಟ್ಟಿದೆ. ಜಿಲ್ಲೆಯಲ್ಲಿ ಮಳೆ ಕ್ಷೀಣಿಸುತ್ತಿದ್ದಂತೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಗ್ರಾಪಂಗಳ ಕೊಳವೆ ಬಾವಿಗಳು ತಮ್ಮ ಸದ್ದು ನಿಲ್ಲಿಸುತ್ತಿವೆ.

50 ಗ್ರಾಮಗಳಲ್ಲಿ ನೀರಿಲ್ಲ: ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ, ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಳೆಯ ಕಣ್ಣಾಮುಚ್ಚಲೇ ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆಯ ಪಟ್ಟಿಗೆ ಇನ್ನಷ್ಟು ಗ್ರಾಮಗಳು ಸೇರ್ಪಡೆಗೊಳ್ಳಲಿವೆ.

ಸದ್ಯ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ 6 ಗ್ರಾಮಗಳು, ಚಿಂತಾಮಣಿ ತಾಲೂಕಿನಲ್ಲಿ 22, ಶಿಡ್ಲಘಟ್ಟದಲ್ಲಿ 13, ಗುಡಿಬಂಡೆಯಲ್ಲಿ 4, ಗೌರಿಬಿದನೂರು 1 ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ 4 ಗ್ರಾಮಗಳು ಸೇರಿ 50 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಪೈಕಿ ನೀರಿನ ಸಮಸ್ಯೆ ಇರುವ 50 ಗ್ರಾಮಗಳ ಪೈಕಿ 23 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿವ ನೀರು ಪೂರೈಸುತ್ತಿದ್ದರೆ, ಉಳಿದ 27 ಗ್ರಾಮಗಳು ಖಾಸಗಿ ಕೊಳವೆ
ಬಾವಿಗಳನ್ನು ಅವಲಂಬಿಸಿವೆ. ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಗಿಂತ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿರುವುದು  ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಸದ್ಯ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಎದ್ದು ಕಾಣುತ್ತಿದೆ.

ಪ್ರತಿ ವಾರ ಲೆಕ್ಕ ಕೊಡುವಂತೆ ಸೂಚನೆ: ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಮೂಲಕ ನೀರು ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದರು. ಅಲ್ಲದೇ ಟ್ಯಾಂಕರ್‌ ನೀರು ಪೂರೈಕೆಯಲ್ಲಿ ಆಗುವ ಅಕ್ರಮ  ತಡೆಯಲು ಪ್ರತಿ ಶನಿವಾರ ಜಿಲ್ಲಾಡಳಿತಕ್ಕೆ ಟ್ಯಾಂಕರ್‌ ನೀರು ಪೂರೈಕೆಯಾದ ಬಗ್ಗೆ ಗ್ರಾಪಂ ಪಿಡಿಗಳ ಸಹಿಯೊಂದಿಗೆ ತಾಪಂ ಸಿಇಗಳು ಜಿಪಂಗೆ ಸಲ್ಲಿಸುವಂತೆ ಆದೇಶ ಮಾಡಿದ್ದರು. ಆದರೂ ಸಮರ್ಪಕ ವಾಗಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

50 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆ ಪೈಕಿ 23 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 27 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆ ಸಮರ್ಪಕವಾಗಿ ಆಗದಿದ್ದರೆ ನೀರಿನ ಸಮಸ್ಯೆ ಇನ್ನಷ್ಟು ಗ್ರಾಮಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.
ಶಿವಕುಮಾರ್‌ ಲಾತೋರ್‌,  ಕಾರ್ಯಪಾಲಕ ಅಭಿಯಂತರರು.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next