ಗೊರೇಬಾಳ: ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ಭಾರೀ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆ ವೇಳೆ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಮೂರು ಕುರಿಗಳು ಮೃತಪಟ್ಟಿವೆ.
ಸಾಲಗುಂದಾ ಗ್ರಾಮದ ಮಹಿಬೂಬಸಾಬ ರಾಜಾಸಾಬ್ (19) ಮೃತ ಯುವಕ. ಕುರಿ ಮೇಯಿಸಲು ಹೋಗಿದ್ದ ಮಹಿಬೂಬಸಾಬ 2 ಗಂಟೆ ಸುಮಾರಿಗೆ ಬಿರುಗಾಳಿ ಹಾಗೂ ಆಲಿಕಲ್ಲು ಮಳೆ ಬರುವಾಗ ಮರವೊಂದರ ಕೆಳಗೆ ಆಶ್ರಯ ಪಡೆದಿದ್ದಾನೆ. ಈ ಸಂದರ್ಭದಲ್ಲಿ ಜವರಾಯನಂತೆ ಸಿಡಿಲು ಅಪ್ಪಳಿಸಿದೆ. ಪಕ್ಕದ ಮರವೊಂದರ ಕೆಳಗೆ ನಿಂತಿದ್ದ ಗೌರಮ್ಮ ದುರುಗಪ್ಪ ಎನ್ನುವ ಮಹಿಳೆಗೆ ಸಿಡಿಲಿನ ಶಬ್ದಕ್ಕೆ ಕಿವಿ ಕೇಳದಂತಾಗಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪಿಎಸ್‌ಐ ಸುಶೀಲಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಪಕ್ಷಗಳ ಮುಖಂಡರಾದ ಕೆ.ಕರಿಯಪ್ಪ, ಬಸವರಾಜ ನಾಡಗೌಡ, ಎಂ. ದೊಡ್ಡಬಸವರಾಜ, ಪರಮೇಶಪ್ಪ ದಡೇಸ್ಗೂರು, ರಾಜುಗೌಡ ಬಾದರ್ಲಿ ಸೇರಿದಂತೆ ಅನೇಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಭತ್ತ ಬೆಳೆ ಹಾನಿ: ರವಿವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತ ನಾಶವಾಗಿದೆ. ಸಿಂಧನೂರು ತಾಲೂಕಿನ ಶಾಂತಿನಗರ, ಬಸಾಪುರ, ಗೊರೇಬಾಳ, ಲಕ್ಷ್ಮೀಕ್ಯಾಂಪ್, ಸಾಲಗುಂದಾ ಹಾಗೂ ಇತರೆಡೆ ಬಿರುಗಾಳಿಯೊಂದಿಗೆ ಆಲಿಕಲ್ಲು ಮಳೆ ಸುರಿದ್ದು, ಭತ್ತ ಬೆಳೆ ನೆಲಕಚ್ಚಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಬಿರುಗಾಳಿ ಹೊಡೆತಕ್ಕೆ ಅನೇಕ ಮನೆಗಳ ತಗಡಿನ ಮೇಲ್ಛಾವಣಿಗಳು ಹಾರಿಹೋಗಿವೆ. ಜೊತೆಗೆ ಅನೇಕ ಮರಗಳು ಧರೆಗುರುಳಿವೆ. ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಎರಡು ಮರೆಗಳು ರಸ್ತೆಗುರುಳಿದ್ದು, ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಳೆ-ಗಾಳಿಗೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುವಂತೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರ್ ಶಂಶಾಲಂ ನಾಗಡದಿನ್ನಿ ತಿಳಿಸಿದ್ದಾರೆ.