Advertisement

ವಿವಿಧೆಡೆ ಆಲಿಕಲ್ಲು  ಮಳೆ; ಹಾನಿ

08:21 AM Apr 09, 2018 | Harsha Rao |

ವೇಣೂರು: ರವಿವಾರ ಸಂಜೆ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ. ವೇಣೂರು ಪರಿಸರದಲ್ಲಿ ಅಡಿಕೆ ಗಾತ್ರದ ಆಲಿಕಲ್ಲುಗಳು ಭಾರೀ ಪ್ರಮಾಣದಲ್ಲಿ ಬಿದ್ದು ಜನರು ಗಾಬರಿಗೊಂಡರು.

Advertisement

ರವಿವಾರ ಸಂಜೆ 3.30ರ ಸುಮಾರಿಗೆ  ವೇಣೂರು, ಹೊಸಂಗಡಿ, ಕುಕ್ಕೇಡಿ ಭಾಗದಲ್ಲಿ ಗುಡುಗು ಮಿಂಚಿನ ಮಳೆಯ ಜತೆಗೆ ಆಲಿಕಲ್ಲು ಬೀಳಲು ಪ್ರಾರಂಭವಾಯಿತು. ದೊಡ್ಡ ಗಾತ್ರದ ಆಲಿಕಲ್ಲು ಗಳು ಭಾರೀ ಪ್ರಮಾಣದಲ್ಲಿ ಬಿದ್ದದ್ದರಿಂದ ಜನರು ದಿಗಿಲುಗೊಂಡರು. ದ್ವಿಚಕ್ರ ಸವಾರರು ಮಾತ್ರವಲ್ಲದೆ ಘನ ವಾಹನಗಳಿಗೂ ಸಂಚರಿಸಲು ಸಾಧ್ಯವಾಗದೆ ರಸ್ತೆ ಬದಿ ನಿಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಮನೆ, ಕಟ್ಟಡಗಳ ಛಾವಣಿ ಮೇಲೆ ಆಲಿ ಕಲ್ಲುಗಳು ಬಿದ್ದು ಭಾರೀ ಸದ್ದು ಉಂಟಾಗಿ ಜನರು ಗಾಬರಿಗೀಡಾದರು. ವೇಣೂರು ಪರಿಸರದ ಮರಗಳಲ್ಲಿದ್ದ ಮಾವಿನ ಮಿಡಿ ಉದುರಿವೆ. ಗೇರು, ಬಾಳೆ ಕೃಷಿಗೂ ಹಾನಿಯಾಗಿದೆ.

ಪುತ್ತೂರು ತಾಲೂಕಿನ ಕೆದಿಲ, ಕಬಕ, ವಡ್ಯ, ಉಪ್ಪಿ ನಂಗಡಿ, ಬೆಳ್ತಂಗಡಿ ತಾಲೂಕಿನ ನಿಡ್ಲೆ, ಕಾವಳ ಮುಡೂರು, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರ, ಬಾಳುಗೋಡು, ಐನೆಕಿದು ಗಳಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ. 

ಮರ ಬಿದ್ದು ಮನೆಗೆ ಹಾನಿ, ಗಾಯ
ಮಳೆ ಜತೆಗೆ ಬೀಸಿದ ಭಾರೀ ಗಾಳಿಯಿಂದ ಗುಂಡೂರಿ ರಾಮಪ್ಪ ಆಚಾರಿ ಅವರ ಮನೆ ಮೇಲೆ ಮರ ಬಿದ್ದು, ಅವರ ಸಹೋದರ ಸುಂದರ ಆಚಾರಿ ಗಾಯಗೊಂಡಿದ್ದಾರೆ. ಅವರನ್ನು ಸಿದ್ದಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ಸುಮಾರು ಸಿಮೆಂಟ್ ಶೀಟ್ಗಳು ಪುಡಿಯಾಗಿದ್ದು, ಅಂಗಳದಲ್ಲಿ ನಿಲ್ಲಿಸಲಾಗಿದ್ದ 2 ಬೈಕ್ಗಳಿಗೂ ಹಾನಿಯಾಗಿದೆ. 

ಇಷ್ಟು ದೊಡ್ಡ ಆಲಿಕಲ್ಲು ಕಂಡಿಲ್ಲ
ವೇಣೂರಿನ ಹಿರಿಯ ವೈದ್ಯ 87ರ ಹರೆಯದ ಡಾ| ಬಿ.ಪಿ. ಇಂದ್ರ ಹೇಳುವಂತೆ ಅವರು ಯುವಕರಾಗಿದ್ದ ವೇಳೆ ಆಲಿಕಲ್ಲು ಮಳೆ ಬಿದ್ದಿದೆ. ಆದರೆ ಅದು ಹೆಕ್ಕುವಷ್ಟರಲ್ಲಿ ನೀರಾಗುತ್ತಿತ್ತು. ಇಷ್ಟೊಂದು ದೊಡ್ಡ ಗಾತ್ರದ ಆಲಿಕಲ್ಲುಗಳು ಭಾರೀ ಪ್ರಮಾಣದಲ್ಲಿ ಬಿದ್ದಿರುವುದನ್ನು ಕಂಡಿಲ್ಲ. ಮಾವು, ಅಡಿಕೆ, ಗೇರು, ಬಾಳೆ ಸಹಿತ ಕೃಷಿಗೆ ಆಲಿಕಲ್ಲು ಮಳೆ ಒಳ್ಳೆಯದಲ್ಲ. ಆದರೆ ಬಿರುಬೇಸಗೆಯಲ್ಲಿ ಸುರಿದ ಮಳೆ ಜೀವರಾಶಿಗೆ ಈ ಮಳೆ ತಂಪು ಒದಗಿಸಿದೆ ಎಂದಿದ್ದಾರೆ. 

Advertisement

ವೇಣೂರಿನ ಕೃಷ್ಣ ಭಟ್ ಅವರು ಮಾಹಿತಿ ನೀಡಿ, ಸುಮಾರು 100 ಚದರ ಅಡಿ ವಿಸ್ತೀರ್ಣದಲ್ಲಿ ಎರಡ ರಿಂದ ಮೂರು ಬಕೆಟುಗಳಷ್ಟು ಆಲಿಕಲ್ಲು ಬಿದ್ದಿವೆ ಎಂದಿದ್ದಾರೆ. ಬಾಳೆ ಎಲೆಗಳು ಚಿಂದಿಯಾಗಿವೆ, ಇತರ ಮರಗಳೂ ಹಾನಿಗೊಂಡಿವೆ ಎಂದು ವಿವರಿಸಿದ್ದಾರೆ.  
 

Advertisement

Udayavani is now on Telegram. Click here to join our channel and stay updated with the latest news.

Next