Advertisement

ಭತ್ತದ ಬೆಳೆಗೆ ಆಲಿಕಲ್ಲು; ಬೆಳೆಗಾರ ಕಂಗಾಲು

06:24 PM Apr 17, 2021 | Team Udayavani |

ಸಿಂಧನೂರು: ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯ ಶ್ರೀನಿವಾಸ ಕ್ಯಾಂಪ್‌ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಬಿರುಗಾಳಿ ಸಹಿತ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಭತ್ತ ನೆಲಕಚ್ಚಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರೀ ಒಂದೇ ಬೆಳೆಗೆ ಸೀಮಿತರಾಗಿದ್ದ ರೈತರು ಈ ಬಾರಿ ಕಾಲುವೆಗೆ ನೀರು ಹರಿಸಿದ್ದರಿಂದ 2ನೇ ಬೆಳೆ ಬೆಳೆದಿದ್ದರು.

Advertisement

ಆದರೆ, ಭತ್ತ ಕಟಾವು ಹಂತದಲ್ಲಿರುವಾಗಲೇ ಬಿದ್ದ ಮಳೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ತಾಲೂಕಿನಲ್ಲಿ ಅಂದಾಜು 5 ಸಾವಿರ ಎಕರೆ ಪ್ರದೇಶದಲ್ಲಿನ ಭತ್ತ ನೆಲಕ್ಕೊರಗಿದೆ. ರೈತರಾದ ಪರ್ವತರೆಡ್ಡಿ, ವೆಂಕಟ ಸುಬ್ಬರಾವ್‌, ಎನ್‌.ನಾರಾಯಣ, ಜಿ.ಸತ್ಯನಾರಾಯಣ, ನಾಗರಾಜ, ಸೋಮಶೇಖರ, ಟಿ.ನಾಗೇಶ್ವರರಾವ್‌ ಸೇರಿದಂತೆ ನೂರಾರು ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿ ಎಕರೆಗೆ 20ರಿಂದ 25 ಸಾವಿರ ರೂ. ಖರ್ಚು ಮಾಡಿರುವ ರೈತರು, ಆಲಿಕಲ್ಲು ಮಳೆ ನೀಡಿದ ಆಘಾತಕ್ಕೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಪರಿಹಾರ ನೀಡಲು ಆಗ್ರಹ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಅಪಾರ ಪ್ರಮಾಣದಲ್ಲಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಇಂತಹ ಸಂದರ್ಭ ಬಂದಾಗ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ಹಾಲಿ ಸರಕಾರ ಕೂಡ ತುರ್ತು ಕ್ರಮ ಕೈಗೊಳ್ಳಬೇಕು. ಪ್ರತಿ ಎಕರೆಗೆ 25 ಸಾವಿರ ರೂ.ನಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ತುರ್ವಿಹಾಳ, ಕಾಂಗ್ರೆಸ್‌ ಮುಖಂಡರಾದ ಮಲ್ಲನಗೌಡ ದೇವರಮನಿ, ರೈತ ಮುಖಂಡರಾದ ಎನ್‌. ನಾರಾಯಣ, ಜಿ.ಸತ್ಯನಾರಾಯಣ, ಬಾಪುಗೌಡ ದೇವರಮನಿ, ಸಿರಾಜ್‌ಪಾಷಾ ಸೇರಿದಂತೆ ಇತರರು ಇದ್ದರು.

ಮಾಜಿ ಸಂಸದ ಕೆವಿ ಭೇಟಿ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಕೂಡ ಶ್ರೀನಿವಾಸ ಕ್ಯಾಂಪಿನ ಭತ್ತದ ಬೆಳೆಹಾನಿಗೆ ಒಳಗಾದ ಪ್ರದೇಶಕ್ಕೆ ಭೇಟಿ ನೀಡಿದರು. ನಂತರ ಮಾತನಾಡಿ, ಸುಮಾರು 2,500 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಆಲಿಕಲ್ಲು ಮಳೆಗೆ ಹಾನಿಯಾಗಿದೆ. ಶೇ.50ರಷ್ಟು ನಷ್ಟವಾಗಿದೆ. ರಾಜ್ಯ ಸರಕಾರ ಕೂಡಲೇ ಅ ಧಿಕಾರಿಗಳನ್ನು ಕಳಿಸಿ, ಸಮೀಕ್ಷೆ ವರದಿ ಪಡೆದುಕೊಳ್ಳಬೇಕು. ನಂತರದಲ್ಲಿ ರೈತರಿಗೆ ಪರಿಹಾರ ನೀಡಲು ಸರಕಾರದ ಗಮನ ಸೆಳೆಯಲಾಗುವುದು ಎಂದರು. ಬಿಜೆಪಿ ಮುಖಂಡರಾದ ರುದ್ರಸ್ವಾಮಿ ಕೆಂಡದಮಠ, ಶರಣಪ್ಪ ಹೊಸಗೌಡರ್‌, ನಿಂಗಪ್ಪ ಕಟ್ಟಿಮನಿ, ಸಿದ್ದೇಶ್ವರ ಗುರಿಕಾರ್‌, ಎಂ.ಡಿ. ಇಸ್ಮಾಯಿಲ್‌, ನರಸಪ್ಪ ಕಟ್ಟಿಮನಿ, ಶರಣಬಸವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next