Advertisement

ಹೈಕಮಾಂಡ್‌ಗೆ “ಕಪ್ಪ’: ಬಿಎಸ್‌ವೈ,ಅನಂತ್‌ ವಿರುದ್ಧ ಎಸಿಬಿಗೆ ದೂರು

03:45 AM Feb 16, 2017 | |

ಬೆಂಗಳೂರು:ಬಿಜೆಪಿ ಹೈಕಮಾಂಡ್‌ಗೆ “ಕಪ್ಪ’ ನೀಡಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ್‌ ವಿರುದ್ಧ ಕೆಪಿಸಿಸಿ ಕಾನೂನು ಘಟಕ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಬುಧವಾರ ದೂರು ಸಲ್ಲಿಸಿದೆ.

Advertisement

ಇತ್ತಿಚಿಗೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಭೆಯ ವೇದಿಕೆಯಲ್ಲಿ ಹೈಕಮಾಂಡ್‌ಗೆ ಹಣ ಕೊಟ್ಟಿರುವ ವಿಚಾರವಾಗಿ ಯಡಿಯೂರಪ್ಪ ಹಾಗೂ ಅನಂತಕುಮಾರ್‌ ಮಧ್ಯೆ ನಡೆದ ಸಂಭಾಷಣೆಯನ್ನು ಆಧರಿಸಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ.

ಫೆ.12ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತಿದ್ದ ಯಡಿಯೂರಪ್ಪ ಹಾಗೂ ಅನಂತಕುಮಾರ್‌ ಹೈಕಮಾಂಡ್‌ಗೆ ಹಣ ಕೊಟ್ಟಿರುವ ವಿಚಾರವಾಗಿ ಮಾತನಾಡಿದ್ದಾರೆ. ಅವರ ಈ ಸಂಭಾಷಣೆ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಅಲ್ಲದೇ ಈ ಸಂಬಂಧ ಒಂದು ಸಿ.ಡಿ ಸಹ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹೈಕಮಾಂಡ್‌ಗೆ “ಕಪ್ಪ’ ಸಲ್ಲಿಕೆಯಾಗಿದೆ ಎಂದು ಇಬ್ಬರು ನಾಯಕ ಸಂಭಾಷಣೆಯಿಂದ ಸಾಬೀತಾಗಿದೆ. 

ಇದೊಂದು ಲಂಚ ಹಾಗೂ ಭ್ರಷ್ಟಾಚಾರದ ಪ್ರಕರಣವಾಗಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಆ ದಿನದ ಬಿಜೆಪಿ ಸಭೆಯ ನಡಾವಳಿ, ಸಿಸಿಟಿವಿ ದೃಶ್ಯಾವಳಿ ವಶಕ್ಕೆ ತೆಗೆದುಕೊಳ್ಳಬೇಕು. ವಿಚಾರಣೆ ಮುಗಿಯುವವರೆಗೆ ಬಿಜೆಪಿ ಕಚೇರಿಯನ್ನು ಮುಟ್ಟುಗೋಲು ಹಾಕಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ, ಯಡಿಯೂರಪ್ಪ ಹಾಗೂ ಅನಂತಕುಮಾರ್‌ ನಡುವಿನ ಸಂಭಾಷಣೆ ಪ್ರಕಾರ ಲಂಚ ರೂಪದಲ್ಲಿ ಹೈಕಮಾಂಡ್‌ಗೆ ಹಣ ಕೊಟ್ಟಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಇಬ್ಬರ ವಿರುದ್ಧ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಿದ್ದೇನೆ. ಹಾಗಾಗಿ ತಕ್ಷಣ ಇಬ್ಬರು ರಾಜಿನಾಮೆ ನೀಡಬೇಕು. ಇಲ್ಲಿದಿದ್ದರೆ ಜನತಾ ನ್ಯಾಯಾಲಯದಲ್ಲಿ ಅವರಿಬ್ಬರ ಮುಖವಾಡವನ್ನು ಕಳಚಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next