ಹಗರಿಬೊಮ್ಮನಹಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ದೈಹಿಕ ನಿರ್ದೇಶಕರಿಲ್ಲ ದಿರುವುದರಿಂದ ಕ್ರೀಡಾಕೂಟಗಳನ್ನು ಕಾಟಾಚಾರಕ್ಕೆ ಆಯೋಜಿಸಲಾಗುತ್ತಿದೆ. ಆದ್ದರಿಂದ ಕಾಲೇಜು ಕ್ರೀಡಾಕೂಟಗಳನ್ನು ಬಹಿಷ್ಕರಿಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಸಲವಾಡ ನಾಗಪ್ಪ ಹರಿಹಾಯ್ದರು.
ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಯನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒ ಕಚೇರಿ ಮುಂಭಾಗ ಶನಿವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿ ವರ್ಷವೂ ಕೂಡ ಶುಲ್ಕವನ್ನು ತಪ್ಪದೇ ಪಡೆಯಲಾಗುತ್ತಿದೆ. ಆದರೆ ದೈಹಿಕ ನಿರ್ದೇಶಕರ ಹುದ್ದೆ ಭರ್ತಿಗೆ ಇಲಾಖೆ ಹಲವು ವರ್ಷಗಳಿಂದ ಜಾಣಕುರುಡು ಪ್ರದರ್ಶಿಸುತ್ತಿದೆ. ಇದೀಗ ಯೋಗ ಮತ್ತು ಆರೋಗ್ಯ ಶಿಕ್ಷಣಕ್ಕೆ ದೇಶಾದ್ಯಂತ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯ ಶಿಕ್ಷಣ ಕುರಿತಂತೆ ಇಲಾಖೆ ನಿರ್ಲಕ್ಷ್ಯವಹಿಸಿದೆ. ಈವರೆಗೂ ಪ್ರಾಂಶುಪಾಲರು ಕೇವಲ ಹುದ್ದೆ ಭರ್ತಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಬೂಬು ಹೇಳುತ್ತಿದ್ದಾರೆ. ಆದರೆ ಕಳೆದ 20 ವರ್ಷಗಳಿಂದಲೂ ಹುದ್ದೆ ಭರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಆಗ್ರಹಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಕ್ರೀಡಾಕೂಟ ಬಹಿಷ್ಕರಿಸಲು ಸಂಘ ನಿರ್ಧರಿಸಿದೆ. ಎಂ.ಪಿ. ಇಡಿ ಪಡೆದ ದೈಹಿಕ ಶಿಕ್ಷಣ ನಿರ್ದೇಶಕನ್ನು ಪ್ರತಿ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಬೇಕು. ತಾತ್ಕಾಲಿಕವಾಗಿ ಸ್ನಾತಕೋತ್ತರ ದೈಹಿಕ ಶಿಕ್ಷಣ ಪಡೆದ ಶಿಕ್ಷಕರನ್ನು ಅತಿಥಿ ಉಪನ್ಯಾಸಕರಾಗಿ ನೇಮಕಗೊಳಿಸಬೇಕು.
ಸ್ನಾತಕೋತ್ತರ ಪದವಿ ಪಡೆದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕಾಲೇಜು ಇಲಾಖೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಸದಸ್ಯ ಎಂ.ಪಿ.ಎಂ. ಮಂಜುನಾಥ ಮಾತನಾಡಿದರು. ಬಿಇಒ ಶೇಖರಪ್ಪ ಹೊರಪೇಟಿ ಅವರಿಗೆ ಮನವಿ ಸಲ್ಲಿಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ಶಾಂತಮೂರ್ತಿ, ಸದಸ್ಯರಾದ ಎಚ್. ಹೇಮಗಿರಿ, ಎಚ್.ಬಿ.ಬಸವನಗೌಡ, ಸಿ.ಕೊಟ್ರೇಶ್, ರಾಜುಸೋಗಿ, ನಾಣ್ಯಾನಾಯ್ಕ, ಜೀತೇಂದ್ರ, ಉಜ್ಜಿನಿಗೌಡ ಇತರರಿದ್ದರು.