ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮ್ ರಹಿಂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ನಿವೇಶನ ಹಕ್ಕುಪತ್ರ ಸೇರಿ ಮೂಲ ಸೌಕರ್ಯಗಳ ಸಮಸ್ಯೆಗಳು ನಿರಂತರವಾಗಿ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಎನ್ನದಂತಿದ್ದಾರೆ.
ಇಲ್ಲಿನ ಪ್ರಮುಖ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಆದ ಕಾರಣ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ರಾಮ್ ರಹಿಂ ನಗರದ ಜನತೆ ಪ್ರತಿಭಟಿಸಿದ್ದಾಗ, ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆಗಳಿಗೆ ಮಣಿದ ಜನತೆ ಮತದಾನ ಮಾಡಲು ಮುಂದಾಗಿ ಮತ ಚಲಾಯಿಸಿದರು. ಚುನಾವಣೆ ನಂತರ ಅಧಿಕಾರಿಗಳು ಇತ್ತ ಒಂದು ಬಾರಿಯೂ ಸುಳಿಯದೆ ಸಮಸ್ಯೆಗಳನ್ನು ಜೀವಂತವಾಗಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಸಾಕಷ್ಟು ಭಾರೀ ಗಮನ ಸೆಳೆದರು ಪ್ರಯೋಜವಿಲ್ಲದಂತಾಗಿದೆ ಎಂದು ವಾರ್ಡ್‌ನ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನೀರಿಗಾಗಿ ಪಡಿಪಾಟಲು: ರಾಮ್‌ರಹಿಂ ನಗರದ ವಾರ್ಡ್‌ಗೆ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿದ್ದು, ನೀರಿಗಾಗಿ ಜನರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ನೀರಿನ ಸಮಸ್ಯೆ ಇದ್ದರೂ ಪುರಸಭೆಯವರು ಇತ್ತ ಭೇಟಿ ನೀಡದೆ ಸಮಸ್ಯೆ ಜೀವಂತವಾಗಿರಿಸಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಪುರಸಭೆ ಕರ್ತವ್ಯವಾಗಿದೆ. ಇದರಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಯತ್ತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆದ್ಯತೆ ನೀಡಬೇಕು. ಆದರೆ, ಪಟ್ಟಣದ ಇತರೆ ವಾರ್ಡ್‌ಗಳಲ್ಲಿ ಕಾಣದ ಕುಡಿಯುವ ನೀರಿನ ಸಮಸ್ಯೆ ರಾಮ ರಹಿಂ ನಗರದ ಜನರನ್ನು ಬಾಧಿಸುತ್ತಿದೆ. ಕುಡಿಯುವ ನೀರಿನ ತೆರಿಗೆ ಪಾವತಿಸಿದರು ವಾರ್ಡ್‌ನ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯವಿಲ್ಲದಂತಾಗಿದೆ. ಸುಡು ಬಿಸಿಲನ್ನು ಲೆಕ್ಕಿಸದೆ ಇಲ್ಲಿನ ಮಹಿಳೆಯರು ನೀರಿಗಾಗಿ ಮೂರು ಗಂಟೆಯಷ್ಟು ಸಾಲುಗಟ್ಟಿ ನಿಲ್ಲಬೇಕಿದೆ. ಈ ಕುರಿತಂತೆ ವಾರ್ಡ್‌ನವರು ಹಲವು ಬಾರಿ ಪುರಸಬೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್‌ನ ಮಹಿಳೆಯರು ಒತ್ತಾಯಿಸಿದ್ದಾರೆ.
ರಾಮ್ ರಹಿಂ ನಗರದ ಜನತೆ ಸಮಸ್ಯೆಗಳು ನಿರಂತರವಾಗಿದ್ದರೂ ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ಣಿಗೆ ಬಿದ್ದಂತಿಲ್ಲ. ಮೂಲ ಸೌಕರ್ಯ ಪಡೆಯಲು ಇಲ್ಲಿನ ಜನರು ಹರಸಾಹಸ ಪಡುವಂತಾಗಿದೆ. ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾಗ ಅಧಿಕಾರಿಗಳು ಬಂದು ಮನವೊಲಿಸಿ ಸಮಸ್ಯೆ ಪರಿಹರಿಸುತ್ತೇವೆ ಎಂದವರು ಇಂದಿಗೂ ಇತ್ತ ಧಾವಿಸಿಲ್ಲ. ವಾರ್ಡ್‌ನಲ್ಲಿ ಕುಡಿಯುವ ನೀರಿಗಾಗಿ ವಾರಗಟ್ಟಲೆ ಕಾಯಬೇಕು. ರಸ್ತೆ, ಚರಂಡಿ ಸ್ವಚ್ಛತೆ ಸಮಸ್ಯೆಗಳು ಇಲ್ಲಿ ನಿರಂತರ.
• ರಾಮಣ್ಣ, ಸ್ಥಳೀಯ ನಿವಾಸಿ
ಸುರೇಶ ಯಳಕಪ್ಪನವರ