Advertisement

ಶುದ್ಧ ಕುಡಿಯುವ ನೀರಿನ ದರ ಹೆಚ್ಚಳಕ್ಕೆ ಆಕ್ರೋಶ

03:26 PM Feb 14, 2020 | Naveen |

ಹಗರಿಬೊಮ್ಮನಹಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 2ರೂ ನೀಡಿ 20ಲೀಟರ್‌ ನೀರು ಪಡೆಯುತ್ತಿದ್ದ ಜನರಿಗೆ ಇದೀಗ ಸರಕಾರ ನೀರಿನ ದರವನ್ನು 5 ರೂಗೆ ಏರಿಸುವ ಮೂಲಕ ಗದಾಪ್ರಹಾರ ಮಾಡಿದ್ದು ಇದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ತಾಲೂಕಿನ 23 ಗ್ರಾಪಂಗಳ 120 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಈಗಾಗಲೇ 82 ಘಟಕಗಳು ಟೆಂಡರ್‌ದಾರರ ಪಾಲಾಗಿದ್ದು, ಗ್ರಾಮೀಣ ಪ್ರದೇಶಗಳ ಬಡ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸರಕಾರ ಕುಡಿಯುವ ನೀರಿನ ದರ ಹೆಚ್ಚಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಹಿಂದೆ ಸರಕಾರ ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆಂದು ನೀರಿನಲ್ಲಿರುವ ಫ್ಲೋರೈಡ್‌ ಹೋಗಲಾಡಿಸಲು ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. ಘಟಕಗಳ ಹೊಣೆಯನ್ನು ಸ್ಥಳೀಯ ಗ್ರಾಪಂಗಳಿಗೆ ನಿರ್ವಹಣೆ ಹೊಣೆ ವಹಿಸಿ ಕೇವಲ 2 ರೂಗೆ 20 ಲೀಟರ್‌ ನೀಡಲಾಗುತ್ತಿತ್ತು.

ಬಿಜೆಪಿ ಸರಕಾರ ದಿಢೀರ್‌ನೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಟೆಂಡರ್‌ದಾರರ ಮೂಲಕ ನಡೆಸಲು ಅನುವು ಮಾಡಿದ್ದರಿಂದ ಸಾರ್ವಜನಿಕರಿಗೆ ರ್ಥಿಕ ಹೊಡೆತ ಬಿದ್ದಿದೆ.

ಈಗಾಗಲೇ ಕೆಲ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾದರೂ ಇಲಾಖೆ ಸರಿಪಡಿಸುವ ಗೋಜಿಗೆ ಹೋಗದೆ ನನೆಗುದಿಗೆ ಬಿದ್ದಿವೆ. ಸರಕಾರಗಳ ಆಡಳಿತದ ತಕಧಿಮಿತಕ್ಕೆ ಅಧಿಕಾರಿಗಳು ರೋಸಿ ಹೋಗಿದ್ದು ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರುವುದು ದಿನೆದಿನೇ ಹೆಚ್ಚುತ್ತಿದೆ. ನೀರಿನ ದರ ದಿಢೀರ್‌ ಹೆಚ್ಚಳಕ್ಕೆ ಎಲ್ಲೆಡೆ ವ್ಯಾಪಕ ವಿರೋಧವಾಗುತ್ತಿರುವುದನ್ನು ಸರಕಾರ ಗಮನಿಸಿ ಮೊದಲಿನಂತೆ 2ರೂ. ದರದಲ್ಲಿ ಶುದ್ಧ ನೀರು ಕೊಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಹಿಂದಿನ ಸರಕಾರದವರು ನಮ್ಮ ನೀರಿನಲ್ಲಿ ಫ್ಲೋರೈಡ್‌ ಇದೆ ಎಂದು ಶುದ್ಧ ಕುಡಿಯುವ ನೀರನ್ನು ಕೇವಲ 2ರೂಗೆ ಕೊಟ್ಟಿದ್ರು. ಈಗ ಬಿಜೆಪಿಯವರು ಬಂದು ನಮ್ಮ ಕುಡಿಯುವ ನೀರು ಕಿತ್ತುಕೊಳ್ಳಾಕತ್ಯಾರ. 5ರೂ. ಕೊಟ್ಟು ನೀರು ಕುಡಿಯೋದು ಕಷ್ಟ ಆಗತೈತಿ.
ಪ್ರಭು ಅಡವಿ ಆನಂದೇನವಹಳ್ಳಿ

Advertisement

ಕಾಂಗ್ರೆಸ್‌ ಸರಕಾರ ಹಿಂದೆ ಶುದ್ಧ ಕುಡಿಯುವ ನೀರನ್ನು ಕೇವಲ 2 ರೂಗೆ ಕೊಡುತ್ತಿದ್ದರು. ಇನ್ನೊಂದೆಡೆ ಶುದ್ಧ ನೀರನ್ನು ದುಬಾರಿ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದೆ. ಶುದ್ಧ ನೀರಿನ ಘಟಕದ ಜವಾಬ್ದಾರಿಯನ್ನು ಗ್ರಾಪಂನಿಂದ ಕಿತ್ತುಕೊಂಡು ಟೆಂಡರ್‌ದಾರರಿಗೆ ವಹಿಸಿರುವುದು ದುರಂತದ ಸಂಗತಿ. ಪ್ರಾದೇಶಿಕ ಪಕ್ಷದ ನೇತೃತ್ವ ವಹಿಸಿಕೊಂಡಿರುವ ದೆಹಲಿ ಸರಕಾರ ಪ್ರತಿಯೊಬ್ಬರಿಗೂ ಉಚಿತ ನೀರು ಕೊಡುತ್ತಿರುವುದನ್ನು ಬಿಜೆಪಿಯವರು ಅರಿಯಬೇಕಿದೆ. ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಜನಪರ ಆಡಳಿತ ನೀಡುವಲ್ಲಿ ಎಡವುತ್ತಿವೆ.
ಗೌರಜ್ಜನವರ ಗಿರೀಶ್‌,
ಗ್ರಾಪಂ ಸದಸ್ಯ ತಂಬ್ರಹ

ಸಾಕಷ್ಟು ಶ್ರಮಪಟ್ಟು ಕ್ಷೇತ್ರದಲ್ಲಿ 140 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಸರಕಾರ ಟೆಂಡರ್‌ದಾರರ ಮೂಲಕ ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ ಮಾಡಿದರೆ ಜನಸಾಮಾನ್ಯರಿಗೆ ನಿಲುಕದಂತಾಗಿ ಘಟಕಗಳು ನನೆಗುದಿಗೆ ಬೀಳುತ್ತವೆ. ಜಿಲ್ಲಾ ಧಿಕಾರಿ, ಸಿಇಒ ಜತೆ ಚರ್ಚಿಸಿ ಕ್ಷೇತ್ರದಲ್ಲಿ ಮೊದಲಿನಂತೆ 2ರೂ.ಗೆ 20 ಲೀಟರ್‌ ನೀರು ಕೊಡುವಂತೆ ಕ್ರಮ ವಹಿಸಲಾಗುವುದು.
ಎಸ್‌.ಭೀಮಾನಾಯ್ಕ,
ಶಾಸಕರು, ಹಗರಿಬೊಮ್ಮನಹಳ್ಳಿ.

„ಸುರೇಶ ಯಳಕಪ್ಪನವರ

Advertisement

Udayavani is now on Telegram. Click here to join our channel and stay updated with the latest news.

Next