ಲಾಹೋರ್ : ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನಿಂದ ಪಾಕಿಸ್ಥಾನದ ಭದ್ರತೆಗೆ ಭಾರೀ ಅಪಾಯವಿದೆ ಎಂದು ಪಾಕ್ ಸರಕಾರ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಉಗ್ರ ನಿಗ್ರಹ ಕಾನೂನಿನಡಿ ನಿಷೇಧಿತರ ಪಟ್ಟಿಗೆ ಸೇರಿಸಲಾಗಿರುವ ಆತನು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾನೆ; ಆದುದರಿಂದಲೇ ಆತನನ್ನು ದೇಶದ ಹಿತಾಸಕ್ತಿಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಾಕ್ ಸರಕಾರ ಹೇಳಿದೆ.
ಹಾಫೀಜ್ ಸಯೀದ್ ಪಾಕಿಸ್ಥಾನದ ಭದ್ರತೆಗೆ ಅತ್ಯಂತ ಅಪಾಯಕಾರಿ ಮನುಷ್ಯ ಎಂದು ಹೇಳಿರುವವರು ಸ್ವತಃ ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್. ಜರ್ಮನಿಯ ಮ್ಯೂನಿಕ್‌ನಲ್ಲಿ ಏರ್ಪಟ್ಟ ಅಂತಾರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಅವರು ಪಾಕ್ ಸರಕಾರದ ಪರವಾಗಿ ಇದೇ ಮೊದಲ ಬಾರಿಗೆ ಈ ಸತ್ಯವನ್ನು ಒಪ್ಪಿಕೊಂಡು ಹೇಳಿದರು.
ಹಾಫೀಜ್ ಸಯೀದ್‌ನನ್ನು ಕಳೆದ ಜನವರಿ 30ರಂದು ಉಗ್ರ ನಿಗ್ರಹ ಕಾಯಿದೆಯ ನಾಲ್ಕನೇ ಪರಿಚ್ಛೇದದಡಿ ಬಂಧಿಸಿ ದೇಶದ ಬೃಹತ್ ಹಿತಾಸಕ್ತಿಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಾಕ್ ಸರಕಾರದ ಈ ಕ್ರಮವನ್ನು ಸಯೀದ್ ನ ಪಕ್ಷ ಹಾಗೂ ಮಿತ್ರ ಕೂಟದವರು ತೀವ್ರವಾಗಿ ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಈ ತಿಂಗಳ ಆದಿಯಲ್ಲಿ ಹಾಫೀಜ್ ಸಯೀದ್‌ನನ್ನು ಪಾಕ್ ಸರಕಾರ ದೇಶ ನಿರ್ಗಮನ ನಿಷೇಧಿತರ ಪಟ್ಟಿಗೆ ಸೇರಿಸಿತ್ತು. ಇದರಿಂದಾಗಿ ಆತ ದೇಶದಿಂದ ಹೊರಗೆ ಹೋಗುವಂತಿಲ್ಲ; ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ.
ಪಾಕಿಸ್ಥಾನದ ಆದ್ಯಂತ ಈಚೆಗೆ ಎಂಟು ಭಯೋತ್ಪಾದಕ ಕೃತ್ಯಗಳು ನಡೆದು ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದುದನ್ನು ಅನುಸರಿಸಿ ಹಾಫೀಜ್ ಸಯೀದ್‌ನನ್ನು ಪಾಕ್ ಸರಕಾರ ಬಂಧಿಸಿತ್ತು. ಸಿಂಧ್ ಪ್ರಾಂತ್ಯದ ಸೂಫಿ ದರ್ಗಾದ ಮೇಲೆ ನಡೆದಿದ್ದ ಐಸಿಸ್ ಬಾಂಬ್ ದಾಳಿಗೆ 88 ಜನರು ಬಲಿಯಾಗಿದ್ದರು.