Advertisement

ಕೃಷಿ, ಹೈನುಗಾರಿಕೆಯಲ್ಲಿ ಯಶ ಕಂಡ ಹದ್ದೂರು ರಾಜೀವ ಶೆಟ್ಟಿ

10:05 AM Dec 29, 2019 | mahesh |

ಹೆಸರು: ರಾಜೀವ ಶೆಟ್ಟಿ ಹದ್ದೂರು
ಏನೇನು ಕೃಷಿ: ಅಡಿಕೆ, ತೆಂಗು, ಬಾಳೆ, ರಬ್ಬರ್‌, ತಾಳೆ, ಕಾಳುಮೆಣಸು
ಎಷ್ಟು ವರ್ಷ ಕೃಷಿ: 35
ಪ್ರದೇಶ :15 ಎಕ್ರೆಗೂ ಅಧಿಕ
ಸಂಪರ್ಕ: 9448625503

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸಿದ್ದಾಪುರ: ಕಠಿನ ಪರಿಶ್ರಮದಿಂದ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತೋರಿಸಿದ ಹೆಗ್ಗಳಿಕೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಬೈಲೂರು ಸಮೀಪದ ಹದ್ದೂರು ರಾಜೀವ ಶೆಟ್ಟಿ (59) ಅವರದ್ದಾಗಿದೆ. ರಾಜೀವ ಶೆಟ್ಟಿ ಅವರು ತಮ್ಮ 15 ಎಕರೆ ಭೂಮಿಯ 11 ಎಕರೆ ಗುಡ್ಡ ಪ್ರದೇಶವನ್ನು ಕೃಷಿಭೂಮಿಯಾಗಿ ಪರಿವರ್ತಿಸಿ, ಬರಡು ಭೂಮಿಗೆ ಜೀವಕಳೆ ತುಂಬಿದರು. ಮೂಲತ ಕೃಷಿ ಮನೆತನದ ಇವರು 35 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು 4 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಅವರು ಕ್ರಮೇಣ ಭತ್ತ ಬಿಟ್ಟು ವಾಣಿಜ್ಯ ಬೆಳೆಯತ್ತ ಸಾಗಿದರು. ಈಗ ಕೃಷಿಯೊಂದಿಗೆ ಅಂತರಬೆಳೆ ಮತ್ತು ಹೈನುಗಾರಿಕೆ ಮಾಡುವ ಮೂಲಕ ಸಾಧಕ ಕೃಷಿಕರಾಗಿದ್ದಾರೆ. ಆ ಕಾಲದಲ್ಲಿ ರಾಜೀವ ಶೆಟ್ಟಿ ಅವರು ಬಿ.ಕಾಂ. ಪದವೀಧರರಾಗಿದ್ದರೂ, ಉದ್ಯೋಗ ಅರಸಿ ಹೋಗದೆ ಊರಲ್ಲಿ ಇದ್ದುಕೊಂಡು ಸಾಧನೆ ಮಾಡಬೇಕೆಂಬ ಹಂಬಲದಲ್ಲಿ ಹಿರಿಯರು ಮಾಡುತ್ತಿದ್ದ ಕೃಷಿಯನ್ನು ಮುಂದುವರಿಸಿದರು.

ಅಂತರಬೆಳೆ, ಉಪಬೆಳೆ ಹದ್ದೂರು ರಾಜೀವ ಶೆಟ್ಟಿ ಅವರು ಮೊದಲು 4 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಕ್ರಮೇಣ ವಾಣಿಜ್ಯ ಬೆಳೆಯತ್ತ ಚಿತ್ತ ಹರಿಸಿ ಅಡಿಕೆ, ತೆಂಗು, ಬಾಳೆ, ರಬ್ಬರ್‌, ತಾಳೆ, ಅಂತರಬೆಳೆಯಾಗಿ ಕಾಳುಮೆಣಸು ಸಹಿತ ಅನೇಕ ಉಪಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯ ಬಗ್ಗೆ ಸ್ಪಷ್ಟ ಅರಿವಿದ್ದರೆ ರೈತನಿಗೆ ಯಾವತ್ತೂ ನಷ್ಟವಾಗುವುದಿಲ್ಲ ಎಂಬಂತೆ ಆದ್ಯತೆಯ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಹೆಗ್ಗಳಿಕೆ ಇವರದ್ದು.

ಹೈನುಗಾರಿಕೆ: ನಿತ್ಯ ಆದಾಯ
ಹೈನುಗಾರಿಕೆಯ ಬಗ್ಗೆ ಅನೇಕ ಯುವ ರೈತರಿಗೆ ಮಾರ್ಗದರ್ಶಕರಾವಿರುವ ಇವರು ಗುಣಮಟ್ಟದ ಹಟ್ಟಿಯನ್ನು ಹೊಂದಿದ್ದು, ಅವರಲ್ಲಿ ಉತ್ತಮ ತಳಿಯ 9 ಹಸುಗಳಿವೆ. ಸ್ವತಃ ಹಸುಗಳ ಹಾಲು ಕರೆದು, ಪ್ರತಿನಿತ್ಯ ಸುಮಾರು 60 ಲೀ. ಹಾಲನ್ನು ಡೈರಿಗೆ ನೀಡುತ್ತಿದ್ದಾರೆ. ಹಸುಗಳಿಗಾಗಿ ಹುಲ್ಲು ಬೆಳೆಸಿದ್ದು, ನಿರಂತರ ಆದಾಯಕ್ಕೆ ಹೈನುಗಾರಿಕೆಯು ಮೂಲವಾಗಿದೆ. ಹೈನುಗಾರಿಕೆಯಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಸಾವಯವ ಗೊಬ್ಬರ ಸಿಗುತ್ತಿದ್ದು, ಅದನ್ನೇ ತೋಟಕ್ಕೆ ಬಳಸಿ ಉತ್ತಮ ಇಳುವರಿ ಸಾಧ್ಯವಾಗಿದೆ ಎನ್ನುತ್ತಾರೆ ರಾಜೀವ ಶೆಟ್ರಾ.

Advertisement

ಯಂತ್ರೋಪಕರಣ ಬಳಕೆ
ರಾಜೀವ ಶೆಟ್ಟಿ ಅವರು ಕೃಷಿ ಹಾಗೂ ಹೈನುಗಾರಿಕೆ ಎರಡರಲ್ಲಿಯೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ. ಈ ಮೂಲಕ ಸಾಕಷ್ಟು ಆಳುಗಳ ಸಂಖ್ಯೆಯನ್ನು ಕಡಿಮೆ ಮಾಡಕೊಂಡಿದ್ದಾರೆ.
ಕೆ.ಎಂ.ಎಫ್‌. ನಿರ್ದೇಶಕ

ರಾಜೀವ ಶೆಟ್ಟಿ ಅವರು ಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕೆ.ಎಂ.ಎಫ್‌. ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಂಕರ ನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷರಾಗಿ, ಕುಂದಾಪುರ ತಾ. ಪಂ. ಸದಸ್ಯರಾಗಿ, ಪ್ರಸ್ತುತ ಶಂಕರನಾರಾಯಣ ಗ್ರಾ.ಪಂ. ಸದಸ್ಯರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಪ್ರಶಸ್ತಿಗಳು
ಆದರ್ಶ ಕೃಷಿಕ ಹದ್ದೂರು ರಾಜೀವ ಶೆಟ್ಟಿ ಅವರಿಗೆ ಅನೇಕ ಸಂಘ, ಸಂಸ್ಥೆಗಳಿಂದ ಸಮ್ಮಾನಗಳು ಸಂದಿವೆ. ಕುಂದಾಪುರ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ, ಸಬ್ಲಾಡಿ ಸೀನಪ್ಪ ಶೆಟ್ಟಿ ಕೃಷಿ ಸಾಧಕ ಪ್ರಶಸ್ತಿಗಳು ಲಭಿಸಿವೆ.

ಕೃಷಿಯಲ್ಲಿ ಸಂತೃಪ್ತಿ
ಬಿ.ಕಾಂ. ಪದವಿ ಪಡೆದರೂ ಉದ್ಯೋಗ ಅರಸಿ ಹೋಗದೆ, ಊರಲ್ಲಿಯೇ ಇದ್ದುಕೊಂಡು ಸಾಧನೆ ಮಾಡಬೇಕೆಂಬ ಹಂಬಲ ಇದ್ದಿದ್ದರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಿರಿಯರ ಮಾರ್ಗದರ್ಶನದಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಸಂತೃಪ್ತಿ ಕಾಣುತ್ತಿದ್ದೇನೆ. ಕೃಷಿಯಲ್ಲಿ ಅಂತರ ಬೆಳೆಯಿಂದ ಯಶಸ್ಸು ಕಾಣಲು ಸಾಧ್ಯವಿದೆ. ಯುವಕರು ಕೃಷಿ ಕ್ಷೇತ್ರದತ್ತ ಬರಬೇಕು. ಕೃಷಿ ಹಾಗೂ ಹೈನುಗಾರಿಕೆಯನ್ನು ಉದ್ಯಮವಾಗಿ ಬೆಳೆಸಿದಾಗ ಯಶಸ್ಸು ಸಿಗುತ್ತದೆ. ಹೈನುಗಾರಿಕೆ ಮಾಡುವ ಹಂಬಲ ಇದ್ದರೆ ಮೊದಲು ಎಷ್ಟು ಅಗತ್ಯವೋ ಅಷ್ಟು ಹಸಿ ಹುಲ್ಲು ಬೆಳೆಸಬೇಕು. ಹೈನುಗಾರಿಕೆಯಲ್ಲಿ ಸ್ವತಃ
ದುಡಿಮೆ ಮುಖ್ಯ. ಹೈನುಗಾರಿಕೆಯನ್ನು ಕೃಷಿಗೆ ಪೂರಕವಾಗಿ ಮಾಡಿದಾಗ ಯಶಸ್ಸು ಸಿಗುವುದರಲ್ಲಿ ಸಂಶಯವಿಲ್ಲ.
-ರಾಜೀವ ಶೆಟ್ಟಿ, ಹದ್ದೂರು

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next