Advertisement

ಹ್ಯಾಕರ್‌ಗಳ ಕಳ್ಳಾಟ

03:00 AM Jul 05, 2017 | Team Udayavani |

ಬೆಂಗಳೂರು: ಇವರೊಂದು ರೀತಿ ದೊಡ್ಡ ಮಟ್ಟದ ಕಳ್ಳರು. ಇವರಿಗೆ ಲಾಂಗೂ ಬೇಕಿಲ್ಲ, ಬಂದೂಕಿನ ಅವಶ್ಯಕತೆಯೂ ಇಲ್ಲ. ಆದರೂ ಕುಳಿತಿದ್ದ ಜಾಗದಿಂದಲೇ ದರೋಡೆ ಮಾಡುತ್ತಾರೆ. ಅದೂ ಒಂದು-ಎರಡು ರೂಪಾಯಿಯಲ್ಲ, ಲಕ್ಷಗಳ ಲೆಕ್ಕಾಚಾರದಲ್ಲಿ! ಹೌದು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಆನ್‌ಲೈನ್‌ ದರೋಡೆಕೋರರು ಅರ್ಥಾತ್‌ ಹ್ಯಾಕರ್ಸ್‌ನ ಹಾವಳಿ ಹೆಚ್ಚಾಗಿದೆ. ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ 25 ಪ್ರಕರಣಗಳಲ್ಲಿ ಇವರು ಸುಮಾರು 10 ಲಕ್ಷ ರೂ.ಗಳನ್ನು ಎಗರಿಸಿದ್ದಾರೆ. ಈ ಸಂಬಂಧ ಕಳೆದ ಮೂರು ದಿನಗಳಲ್ಲಿ ನಗರ ಸೈಬರ್‌ ಠಾಣೆಗೆ ನೂರಕ್ಕೂ ಅಧಿಕ ದೂರುಗಳು ಬಂದಿದ್ದು. ಸುಮಾರು 25 ಪ್ರಕರಣಗಳಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ವಿಚಿತ್ರವೆಂದರೆ, ಐಟಿ ಜಗತ್ತೇ ಹೆಚ್ಚಿರುವ ಬೆಂಗಳೂರಿನ ಮಡಿವಾಳ, ಹೆಣ್ಣೂರು, ಕಮ್ಮನಹಳ್ಳಿ, ಆರ್‌.ಟಿ.ನಗರ ವ್ಯಾಪ್ತಿಗಳಲ್ಲೇ ಹೆಚ್ಚಾಗಿದೆ. ಕೆಲ ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಕಾರ್ಡ್‌ಗಳನ್ನು ಬಳಸಿದ ಒಂದೆರಡು ದಿನಗಳಲ್ಲಿ ಈ ರೀತಿ ಆಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಖಾಸಗಿ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್‌. ಟಿ.ನಗರ ಸುಲ್ತಾನ್‌ ಪಾಳ್ಯ ನಿವಾಸಿ ಮೋಹನ್‌ ದಾಸ್‌ ಹಾಗೂ ಖಾಸಗಿ ಕಂಪೆನಿಯ ಉದ್ಯೋಗಿ ಬಾಲಾಜಿ ಎಂಬುವರ ಎಟಿಎಂ ಕಾರ್ಡ್‌ಗಳ ರಹಸ್ಯ ಸಂಖ್ಯೆಗಳನ್ನು ಕಳವು ಮಾಡಿರುವ ಹ್ಯಾಕರ್ಸ್‌ಗಳು 43 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ. ಆದರೆ, ಹಣ ಡ್ರಾ ಆಗುವ ಸಂದರ್ಭದಲ್ಲಿ ಎಟಿಎಂ ಕಾರ್ಡ್‌ ಇವರ ಬಳಿಯೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಮೋಹನ್‌ದಾಸ್‌ ಅವರ ಖಾತೆಯಿಂದ ಬನ್ನೇರುಘಟ್ಟದಲ್ಲಿರುವ ವೈಶ್ಯಾಬ್ಯಾಂಕ್‌ ಎಟಿಎಂನಲ್ಲಿ 28 ಸಾವಿರ ಹಣ ಡ್ರಾ ಮಾಡಿದ್ದಾರೆ. ಈ ಬಗ್ಗೆ ಮೋಹನ್‌ ದಾಸ್‌ಗೆ ಸಂದೇಶ ಬಂದಿದೆ. ಕೂಡಲೇ ಖಾತೆ ಹೊಂದಿರುವ ಕೋಟೆಕ್‌ ಬ್ಯಾಂಕ್‌ನ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, “ನೀವೇ ಎಟಿಎಂ ಕಾರ್ಡ್‌ ಬಳಕೆ ಮಾಡುತ್ತಿದ್ದೀರಲ್ಲ,” ಎಂದು ಅವರು ಉತ್ತರಿಸಿದ್ದಾರೆ. ತಾವು ಬಳಕೆ ಮಾಡುತ್ತಿಲ್ಲ, ಕಾರ್ಡ್‌ ನನ್ನ ಬಳಿಯೇ ಇದೆ ಎಂದ ಅವರು, ತಕ್ಷಣ ಕಾರ್ಡ್‌ ಬ್ಲಾಕ್‌ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಬಾಲಾಜಿ ಅವರ ಖಾತೆಯಿಂದ ಮಡಿವಾಳದ ಬ್ಯಾಂಕ್‌ವೊಂದರ ಎಟಿಎಂ ಕೇಂದ್ರದಿಂದ 15 ಸಾವಿರ ಹಣ ಡ್ರಾ ಮಾಡಿದ್ದು, ಬ್ಯಾಂಕ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸೈಬರ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್‌ ಸಿಬ್ಬಂದಿ ಕೈವಾಡ?
ಸದ್ಯ ಬಂದಿರುವ ದೂರುಗಳನ್ನು ಪರಿಶೀಲಿಸಿದಾಗ ಗ್ರಾಹಕರು ಕೆಲ ದಿನಗಳ ಹಿಂದೆ ಕೆಲ ಖಾಸಗಿ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಲ್ಲಿ ಕಾರ್ಡ್‌ಗಳನ್ನು ಬಳಸಿದ್ದು, ನಂತರದ ಒಂದೆರಡು ದಿನಗಳಲ್ಲೇ ದುಷ್ಕರ್ಮಿಗಳು ಗ್ರಾಹಕರ ಕಾರ್ಡ್‌ಗಳ ಸಂಪೂರ್ಣ ಮಾಹಿತಿಯನ್ನು ಕಳವು ಮಾಡಿಕೊಂಡು ಹಣ ಡ್ರಾ ಮಾಡುತ್ತಿದ್ದಾರೆ. ಇಲ್ಲವಾದರೆ ಮಾಲ್‌ಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿ ಮೇಲೆ ಶಂಕೆಯಿದ್ದು ನಿಗಾವಹಿಸಲಾಗಿದೆ. ಅಲ್ಲದೇ ಅಂತಹ ಎಟಿಎಂ ಕೇಂದ್ರಗಳ ಯಂತ್ರಗಳನ್ನು ರಹಸ್ಯವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ಕಳವು?
ಕೆಲ ಖಾಸಗಿ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಲ್ಲಿ ಕಾರ್ಡ್‌ಗಳನ್ನು ಹಾಕುವ ಸ್ಥಳದಲ್ಲಿ ಹೆಚ್ಚುವರಿ ಹಾರ್ಡ್‌ವೇರ್‌ ಅಳವಡಿಸಿರುತ್ತಾರೆ. ಈ ವೇಳೆ ಹಣ ಡ್ರಾ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾರ್ಡ್‌ಗಳನ್ನು ಹಾಕಿದ ಕೂಡಲೇ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಸಂಪೂರ್ಣ ಮಾಹಿತಿ ಆ ಬ್ಯಾಂಕ್‌ನ ಸರ್ವರ್‌ಗಳಲ್ಲಿ ದಾಖಲಾಗುತ್ತದೆ. ಇದೇ ವೇಳೆ ಕಾಯ್ದು ಕುಳಿತುಕೊಳ್ಳುವ ಕೆಲ ಹ್ಯಾಕರ್ಸ್‌ಗಳು ಈ ಸರ್ವರ್‌ಗಳಿಂದ ಕಾರ್ಡ್‌ಗಳ ಸಂಪೂರ್ಣ ಮಾಹಿತಿಯನ್ನು ಕದ್ದು, ಮುಂದಿನ ಒಂದೆರಡು ದಿನಗಳಲ್ಲಿ ನಿಗದಿತ ಬ್ಯಾಂಕ್‌ನ ಎಟಿಎಂ ಕೇಂದ್ರ ಹೊರತು ಪಡಿಸಿ ಬೇರೆ ಬ್ಯಾಂಕ್‌ನ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಹ್ಯಾಕರ್ಸ್‌ಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ
1. ಯಾವಾಗಲೂ ಕೊಠಡಿಯೊಂದರ ಒಳಗೆ ಇರುವ ಎಟಿಎಂ ಬಳಕೆ ಮಾಡಿ, ಹಾಗೆಯೇ ಬಯಲಲ್ಲಿ ಇರುವ ಎಟಿಎಂಗಳ ಬಳಕೆ ಸುರಕ್ಷಿತವಲ್ಲ.

Advertisement

2. ಹಣ ತೆಗೆಯುವ ಮುನ್ನ ಎಟಿಎಂ ಅನ್ನು ಒಮ್ಮೆ ಪರಿಶೀಲಿಸಿ, ಆ ಯಂತ್ರದಲ್ಲಿ ಏನಾದರೂ ಬದಲಾಗಿದೆಯೇ ಎಂದು ನೋಡಿಕೊಳ್ಳಿ.

3. ನಿಮ್ಮ ಸುತ್ತ ಯಾರಿದ್ದಾರೆ ಎಂಬುದರ ಮೇಲೆ ಗಮನ ಇರಲಿ. ಅವರು ನೀವು ಬಳಕೆ ಮಾಡಿದ ಪಿನ್‌ ಕದಿಯುತ್ತಿರಬಹುದು.

4. ಎಟಿಎಂನ ಕೀ ಪ್ಯಾಡ್‌ ಹಿಂದಿನವರಿಗೆ ಕಾಣಿಸದಂತೆ ಮುಚ್ಚಿಕೊಂಡಿರಿ, ನಿಮ್ಮ ಪಿನ್‌ ಕದಿಯುವುದು ಸಾಧ್ಯವಾಗದಂತೆ ಇರಲಿ.

5. ಸರಿಯಾದ ಪಿನ್‌ ಹಾಕಿದಾಗಲೂ ವಹಿವಾಟು ಫೈಲ್‌ ಆದರೆ ಕೂಡಲೇ ಬ್ಯಾಂಕಿಗೆ ಕರೆ ಮಾಡಿ ತಿಳಿಸಿ.

ಕೆಲ ಎಟಿಎಂ ಕೇಂದ್ರಗಳ ಯಂತ್ರಗಳಲ್ಲಿ ಅಳವಡಿಸಿರುವ ಹೆಚ್ಚುವರಿ ಹಾರ್ಡ್‌ವೇರ್‌ಗಳ ಮೂಲಕ ಖಾತೆದಾರರ ಸಂಪೂರ್ಣ ಮಾಹಿತಿ ಸೋರಿಕೆಯಾಗುತ್ತಿದೆ. ಈ ಮೂಲಕವೇ ಕೆಲ ದುಷ್ಕರ್ಮಿಗಳು ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮಾಹಿತಿಯನ್ನು ಕಳವು ಮಾಡುತ್ತಿದ್ದಾರೆ.
– ಎಸ್‌.ರವಿ, ಹೆಚ್ಚುವರಿ ಪೊಲೀಸ್‌ ಆಯುಕ್ತರು, ಅಪರಾಧ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next