ಬೆಂಗಳೂರು: ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರೊಬ್ಬರಿಗೆ ಎಚ್1ಎನ್1 ಸೋಂಕು ತಗುಲಿದೆ. ಬನಶಂಕರಿ 1ನೇ ಹಂತದ ಮೈಸೂರ್ ಬ್ಯಾಂಕ್ ಕಾಲೋನಿ ಪ್ರಶಾಂತ್ ಆಸ್ಪತ್ರೆಯಲ್ಲಿ ಇತ್ತೀಚೆಗೆ 8ಕ್ಕೂ ಹೆಚ್ಚು ಎಚ್1ಎನ್1 ಪ್ರಕರಣ ವರದಿಯಾಗಿವೆ. ಅದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಸೋಂಕು ತಗುಲಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಮುಖ್ಯಸ್ಥ ಡಾ.ಮೋಹನ್, ಆಸ್ಪತ್ರೆಯಲ್ಲಿ ಇತ್ತೀಚೆಗೆ ಎಚ್1ಎನ್1 ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿ ವರ್ಷ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗುತ್ತದೆ. ಸೋಂಕು ತಗುಲಿರುವ ವೈದ್ಯರು ಆಸ್ಪತ್ರೆಗೆ ಕನ್ಸಲ್ಟೆಂಟ್ ಆಗಿ ಸೇವೆ ನೀಡುತ್ತಿದ್ದರಿಂದ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಇದೀಗ ಅವರಿಗೆ ಸೋಂಕು ತಗುಲಿದೆ.
ಆಸ್ಪತ್ರೆಯಲ್ಲಿ ಈವರೆಗೂ ಎಚ್1ಎನ್1ಗೆ ಚಿಕಿತ್ಸೆ ಪಡೆದವರು ಗುಣಮುಖ ರಾಗಿ ಮನೆಗೆ ತೆರಳಿದ್ದಾರೆ. ಸೋಂಕಿತ ವೈದ್ಯರಿಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಕುರಿತು ರೋಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯಲು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕು ಹೆಚ್ಚಳ: ರಾಜ್ಯದಲ್ಲಿ ಎಚ್1ಎನ್1 ಸೋಂಕು ಪ್ರಕರಣ ಹೆಚ್ಚುತ್ತಿದ್ದು, ವರ್ಷಾರಂಭದಿಂದ 220 ಮಂದಿಗೆ ಸೋಂಕು ತಗುಲಿ ಆ ಪೈಕಿ ಮೂವರು ಮೃತಪಟ್ಟಿದ್ದಾರೆ. ಈವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 87, ಉಡುಪಿಯಲ್ಲಿ 50, ದಕ್ಷಿಣ ಕನ್ನಡದಲ್ಲಿ 15, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 28, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 7, ಶಿವಮೊಗ್ಗದಲ್ಲಿ 10, ದಾವಣಗೆರೆಯಲ್ಲಿ 7 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.