Advertisement

ಯುಎಸ್‌ ಶಿಕ್ಷಣ ಪಡೆದ ವಿದೇಶಿಗರಿಗೆ ಮಾತ್ರ ಎಚ್‌1ಬಿ

01:02 AM May 24, 2020 | Sriram |

ವಾಷಿಂಗ್ಟನ್‌: ಎಚ್‌-1ಬಿ ಕೆಲಸದ ವೀಸಾ ನೀಡುವಾಗ ಅಮೆರಿಕದ ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ವಿದೇಶಿ ತಂತ್ರಜ್ಞಾನ ವೃತ್ತಿಪರರಿಗೆ ಆದ್ಯತೆ ನೀಡಬೇಕೆಂಬ ಅಂಶವಿರುವ ಹೊಸ ವಿಧೇಯಕವನ್ನು ಅಮೆರಿಕ ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಲಾಗಿದೆ.

Advertisement

“ಎಚ್‌-1ಬಿ ಮತ್ತು ಎಲ್‌-1 ವೀಸಾ ಸುಧಾರಣಾ ಕಾಯ್ದೆ’ಯ ತಿದ್ದುಪಡಿಗಾಗಿ ಮಂಡಿಸಲಾಗಿರುವ ಈ ವಿಧೇಯಕದಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವ ಬುದ್ಧಿವಂತ ವಿದೇಶಿ ವಿದ್ಯಾರ್ಥಿಗಳಿಗೆ ಎಚ್‌-1ಬಿ ವೀಸಾ ನೀಡುವಿಕೆಯಲ್ಲಿ ಮೊದಲ ಆದ್ಯತೆ ನೀಡಬೇಕು. ಅದರ ಜೊತೆಗೆ, ಅಮೆರಿಕದಲ್ಲಿ ಹೆಚ್ಚಿನ ವೇತನ ಪಡೆಯುವವರು ಮತ್ತು ಅತ್ಯುತ್ತಮ ಕೌಶಲ್ಯ ಹೊಂದಿರುವ ವಿದೇಶಿಯರಿಗೆ ಮಾತ್ರ ಇದರ ಪ್ರಯೋಜನ ಸಿಗಬೇಕೆಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅಮೆರಿಕನ್ನರಿಂದ ಉದ್ಯೋಗಗಳನ್ನು ಕಸಿದುಕೊಂಡು ಅವುಗಳನ್ನು ವಿದೇಶಿಗರಿಗೆ ನೀಡುವಂಥ ವ್ಯವಸ್ಥೆಗೆ ಇತಿಶ್ರೀ ಹಾಡಬೇಕೆಂದು ಈ ವಿಧೇಯಕದಲ್ಲಿ ಬಲವಾಗಿ ಹೇಳಲಾಗಿದೆ.

ಹಾಗಾಗಿ, 50ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಂಪನಿಯಲ್ಲಿ ಕನಿಷ್ಠ ಅರ್ಧದಷ್ಟು ಕಾರ್ಮಿಕರು ಎಚ್‌-1ಬಿ ಅಥವಾ ಎಲ್‌-1 ವೀಸಾದಾರರಾಗಿದ್ದರೆ, ಹೆಚ್ಚುವರಿಯಾಗಿ ಎಚ್‌-1ಬಿ ವೀಸಾ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದೆಂದು ಉಲ್ಲೇಖೀಸಲಾಗಿದೆ.

ಜುಲೈವರೆಗೆ ವೀಸಾ ಅವಧಿ ವಿಸ್ತರಣೆ: ಕೋವಿಡ್-19 ಹಿನ್ನೆಲೆಯಲ್ಲಿ ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗದ ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳ ಅವಧಿ ಮೀರಿದ ವೀಸಾಗಳ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸುವುದಾಗಿ ಬ್ರಿಟನ್‌ ಸರ್ಕಾರ ಶುಕ್ರವಾರ ಪ್ರಕಟಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next