ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿಚಾರಕ್ಕೆ ಮಾಜಿ ಸಚಿವ ಎಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಎಳಸು ಮುಂಡೆದೇ ಸರಿಯಾಗಿ ಮಾತನಾಡು ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದು ರಾಹುಲ್ ಗಾಂಧಿಗೆ ಬುದ್ದಿ ಹೇಳಿದ್ದಾರೆ ಇಷ್ಟಾದರು ಅವರು ತಮ್ಮ ತಪ್ಪುಗಳನ್ನು ತಿದ್ದುಕೊಂಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಮಗ್ರತೆಯ ವಿಚಾರ ಬಂದಾಗ ಸರಿಯಾಗಿ ಮಾತನಾಡಬೇಕು. ನೀವು ನಿಮ್ಮ ಪಕ್ಷದ ಪ್ರಧಾನಿಗಳಿಗೆ ಸರಿಯಾದ ಗೌರವ ಕೊಟ್ಟಿಲ್ಲ. ಮನಮೋಹನ್ ಸಿಂಗ್, ನರಸಿಂಹರಾವ್ ಅವರನ್ನು ನೀವು ಹೇಗೆ ನಡೆಸಿಕೊಂಡಿರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ವಿರುದ್ಧ ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರು ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಕೇವಲ ಹಿಟ್ ಅಂಡ್ ರನ್ ನಂತೆ ಆರೋಪ ಮಾಡಬೇಡಿ. ಕಾಂಗ್ರೆಸ್ ನಾಯಕರೇ ಅಪ್ರಬುದ್ದರಂತೆ ಮಾತನಾಡಬೇಡಿ ಎಂದರು.
ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆ ತಂದಿದ್ದೇ ನಾನು. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಆಗಿಲ್ಲ, ಸಂತೋಷವಾಗಿದೆ ಎಂದರು.
ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿಯುವ ಕೆಲಸ ಮಾಡಿದರು. ಎಲ್ಲರನ್ನೂ ತುಳಿಯುವುದೇ ಸಿದ್ದರಾಮಯ್ಯ ಕೆಲಸವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಎರಡು ಪ್ರತಿರೋಧದ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್ ಎನ್ನುವ ಮೂಲಕ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆ ಮಾಡಿದ ಕ್ರಮವನ್ನು ಬ್ಲಂಡರ್ ಎಂದು ಟೀಕಿಸಿದರು. ನನಗೆ ಎಂಎಲ್‌ಸಿ ಸ್ಥಾನ ಸಿಗದಿದ್ದರೆ ಆಕಾಶಕ್ಕೂ ಹೋಗುವುದಿಲ್ಲ, ಪಾತಾಳಕ್ಕೂ ಹೋಗುವುದಿಲ್ಲ, ವಿಶ್ವನಾಥ್ ವಿಶ್ವನಾಥನೇ. ನನಗೆ ಎಂಎಲ್‌ಸಿ ಸ್ಥಾನ ನೀಡಲು ಯಾವುದೇ ರೀತಿಯ ಕಾನೂನು ತೊಡಕಿಲ್ಲ ಎಂದು ಹೇಳಿದರು.