Advertisement

ವಿಶ್ವನಾಥ್‌ ಜೆಡಿಎಸ್‌ ರಾಜ್ಯಾಧ್ಯಕ್ಷ 

06:00 AM Aug 06, 2018 | |

ಬೆಂಗಳೂರು: ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷರಾಗಿ ಅಡಗೂರು ಎಚ್‌.ವಿಶ್ವನಾಥ್‌ ಆಯ್ಕೆಯಾಗಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭಾನುವಾರ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

Advertisement

ಜೆಡಿಎಸ್‌ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಭಾನುವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಪಕ್ಷದ ಸಚಿವರು, ಶಾಸಕರು ಮತ್ತು ಪ್ರಮುಖರ ಸಭೆಯಲ್ಲಿ ವಿಶ್ವನಾಥ್‌ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೇ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ಧ್ವಜವನ್ನು ವಿಶ್ವನಾಥ್‌ ಅವರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿಯಾಗಿರುವುದರಿಂದ ತಮ್ಮ ಮೇಲೆ ಹೊರೆ ತಗ್ಗಿಸಲು ಬೇರೆ ರಾಜ್ಯಾಧ್ಯಕ್ಷರನ್ನು ನೇಮಿಸಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದರು. ಅದರಂತೆ ಸಭೆಯಲ್ಲಿ ಸರ್ವಾನುಮತದಿಂದ ವಿಶ್ವನಾಥ್‌ ಅವರಿಗೆ ಈ ಹುದ್ದೆ ವಹಿಸಲು ತೀರ್ಮಾನಿಸಲಾಗಿದೆ. ರಾಜ್ಯ ಘಟಕದ ಅಧ್ಯಕ್ಷರು ಬದಲಾಗಿದ್ದರಿಂದ ಸಹಜವಾಗಿಯೇ ಇತರೆ ಹುದ್ದೆಗಳಲ್ಲೂ ಬದಲಾವಣೆಯಾಗಲಿದೆ. ಯುವಕರು, ಹಿಂದುಳಿದವರು, ಮುಸ್ಲಿಮರು ಸೇರಿದಂತೆ ಎಲ್ಲಾ ವರ್ಗದವರನ್ನೂ ಸೇರಿಸಿಕೊಂಡು ರಾಜ್ಯ ಘಟಕವನ್ನು ಪುನಾರಚನೆ ಮಾಡಲಾಗುವುದು ಎಂದು ಹೇಳಿದರು.

ಎಚ್‌.ವಿಶ್ವನಾಥ್‌ ಮಾತನಾಡಿ, ನನ್ನನ್ನು ಪಕ್ಷಕ್ಕೆ ಕರೆತಂದಿದ್ದಲ್ಲದೆ, ವಿಶ್ವಾಸ ಇಟ್ಟು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ನನ್ನ ಕೊನೆಯುಸಿರು ಇರುವವರೆಗೆ ಜೆಡಿಎಸ್‌ ಕಟ್ಟುವಲ್ಲಿ ದೇವೇಗೌಡರ ಜತೆ ಜತೆಗೆ ಹೆಜ್ಜೆ ಹಾಕುತ್ತೇನೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಮುಂಬರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತಿರುವುದರಿಂದ ಸದ್ಯಕ್ಕೆ ರಾಜ್ಯ ಘಟಕ ಪುನಾರಚನೆ ಮಾಡುವುದಿಲ್ಲ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಗಮನಹರಿಸಲಾಗುವುದು. ಹಿರಿಯರು-ಯುವಕರನ್ನೊಳಗೊಂಡ ಸಂಘಟನೆ ಸಿದ್ಧಪಡಿಸಲಾಗುವುದು. ಅದರಲ್ಲೂ ವಿದ್ಯಾವಂತ ಮಹಿಳೆಯರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುವುದು.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next