ಬೆಂಗಳೂರು : ಸಿಎಂ ಬದಲಾವಣೆ ಸುಳಿವು ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಹಿಂದುಳಿದ ಜಾತಿಯವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯ ಕೇಳಿ ಬಂದಿದೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಹಿಂದುಳಿದ ಜಾತಿಗಳ ಮುಖಂಡ ಹಾಗೂ ಹಿರಿಯ ಹೋರಾಟಗಾರ ಹೆಚ್.ನರಸಿಂಹಪ್ಪ, ಹಿಂದುಳಿದ ವರ್ಗದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಇಂದು ರಾಜ್ಯದ 102 ಹಿಂದುಳಿದ ವರ್ಗಗಳ ಪೈಕಿ ಕೆಲವರು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೊಂದಷ್ಟು ಜನ ಬರ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ನಾವು ಏನು ಮಾಡ್ತೇವೆ ನಮ್ಮ ಕಾರ್ಯ ಏನು ಎಂಬ ಅಜೆಂಡಾದ ಮೇಲೆ ಪ್ರಧಾನಿಯವರ ಪಕ್ಷ ಮಹತ್ವ ನಿರ್ಣಯ ತೆಗೆದುಕೊಂಡಿತ್ತು. ಕೇಂದ್ರದಲ್ಲಿ ಸದ್ಯ 72 ಜನರಲ್ಲಿ 27 ಜನರಿಗೆ ಹಿಂದುಳಿದ ವರ್ಗದವರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಇದುವರೆಗೂ ಹಿಂದುಳಿದ ವರ್ಗ ಅಂದ್ರೆ ವೋಟ್ ಬ್ಯಾಂಕ್ ಆಗಿತ್ತು . ಆದ್ರೆ ಅದೀಗ ಬದಲಾಗಿದೆ. ಅತ್ಯಂತ ಸಾಮಾನ್ಯ ವರ್ಗಗಳ ಜನರು ಕೂಡಾ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ.ಆದರೆ ಇದು ನಮ್ಮ ರಾಜ್ಯದಲ್ಲಿ ಇದು ಇಲ್ಲ. ನಮ್ಮ ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಮೀಸಲಾಗಿದೆ. ಇದು ಎಲ್ಲಾ ವರ್ಗಗಳಿಗೆ ಸೇರಬೇಕು ಎಂದರು.
ಬಿಜೆಪಿ ಕೇವಲ ಒಂದೇ ಒಂದು ಜಾತಿಯನ್ನು ನಂಬಿಕೊಂಡು ಹೋದ್ರೆ 30-40 ಸೀಟ್ ಬರಬಹುದು . ಎಲ್ಲಾ ವರ್ಗಗಳು ಒಟ್ಟಿಗೆ ಇಲ್ಲ ಅಂದ್ರೆ ಸರ್ಕಾರ ರಚನೆ ಸಾಧ್ಯವಿಲ್ಲ. ಬಿಜೆಪಿ ಕರ್ನಾಟಕದಲ್ಲಿ ಎರಡು ವರ್ಷ ಸರ್ಕಾರ ಮಾಡಿದೆ. ಮುಂದೆ ಏನಾಗಲಿದೆ ಗೊತ್ತಿಲ್ಲ . ಪವರ್ ಶೇರಿಂಗ್ ತುಂಬಾನೆ ಮುಖ್ಯವಾದುದು. ಇದ್ರಲ್ಲಿ ಎಲ್ಲಾ ವರ್ಗಗಗಳಿಗೆ ಸಮಾನ ಸ್ಥಾನ ಬೇಕು. ಒಂದು ವರ್ಗದಿಂದ ಇಬ್ಬರು, ಇನ್ನೊಬ್ಬರಿಂದ ಇಬ್ಬರ ಹೆಸರು ಕೇಳಿ ಬರ್ತಿದೆ. ಆದ್ರೆ ಹಿಂದುಳಿದ ವರ್ಗದಿಂದ ಯಾವುದೇ ಹೆಸರು ಬರ್ತಿಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ನಾವು ಮನವಿ ಕೊಡ್ತೇವೆ. ರಾಜ್ಯಪಾಲರು ಕೂಡಾ ಹಿಂದುಳಿದ ವರ್ಗದವರು. ಅವರಿಗೂ ಕೂಡಾ ನಾವು ಕೇಳುತ್ತೇವೆ, ಅಡ್ವೈಸರಿ ಕೌನ್ಸಿಲ್ ಮಾಡಬೇಕು. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಕಮಿಟಿಯಲ್ಲಿ ಚರ್ಚೆಯಾಗಬೇಕು ಎಂದರು.
ಇನ್ನು ಸಿಎಂ ಮನೆಗೆ ಸ್ವಾಮೀಜಿಗಳ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿಗಳ ರೀತಿಯಲ್ಲಿ ಕೆಲಸ ಮಾಡುವುದು ಸರಿಯಿಲ್ಲ. ಸ್ವಾಮೀಜಿಗಳಂದ್ರೆ ಶೃಂಗೇರಿ ಸ್ವಾಮೀಜಿಗಳ ರೀತಿ ಇರಬೇಕು. ಸುತ್ತೂರು ಸ್ವಾಮೀಜಿಗಳು ಕೂಡ ಬಂದಿರಲಿಲ್ಲ. ಮಠ ಹಾಗೂ ಭಕ್ತರ ನಡುವೆ ಒಡನಾಟ ಇರಬೇಕು. ಅದನ್ನು ಬಿಟ್ಟು ಬಿಸಿನೆಸ್ ಮಾಡುವುದಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದರು.
ಇನ್ನು ಈಶ್ವರಪ್ಪ ಇದ್ದಾರೆ, ಪೂರ್ಣಿಮಾ ಅವರು ಇದ್ದಾರೆ, ಕೋಟಾ ಶ್ರೀನಿವಾಸ ಪೂಜಾರಿ ಇದ್ದಾರೆ, ಸುನೀಲ್ ರವರು ಇದ್ದಾರೆ. ಈ ನಾಲ್ಕು ಜನರಲ್ಲಿ ಯಾರನ್ನಾದರೂ ಸಿಎಂ ಮಾಡ್ಲಿ ಎಂದು ಕ್ಷತ್ರಿಯ ಸಮಾಜದ ಮುಂಖಡ ಲಕ್ಷೀಕಾಂತ ರಾಜು ಹೇಳಿದರು.