ರಾಯಚೂರು:ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದು ಕಳ್ಳರ ಕೈಗೆ ಕೀಲಿಕೊಟ್ಟಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಲೇವಡಿ ಮಾಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ ಸಿಂಗ್ ವಿರುದ್ಧ ನೈಸರ್ಗಿಕ ಸಂಪತ್ತು ದುರ್ಬಳಕೆ ಮಾಡಿದ ಆರೋಪಗಳಿದ್ದು, ಅರಣ್ಯ ಗಡಿಗಳ ಕುರಿತು ಹಗುರವಾದ ಅಭಿಪ್ರಾಯ ಹೊಂದಿದ್ದಾರೆ. ಅಂತವರಿಗೆ ಅದೇ ಇಲಾಖೆ ಹೊಣೆ ನೀಡಿರುವುದು ವಿಪರ್ಯಾಸ. ಇದರಿಂದ ಅಕ್ರಮ ಹೆಚ್ಚಾಗುವ ಸಾಧ್ಯತೆಗಳಿವೆ. ಬಿಜೆಪಿ ಬರೀ ನೈತಿಕತೆ ಕುರಿತು ಮಾತನಾಡುವುದನ್ನು ಬಿಟ್ಟು ಆಗಿರುವ ತಪ್ಪು ಸರಿಪಡಿಸಿಕೊಳ್ಳಲಿ ಎಂದರು.
ಸಿಎಂ ಯಡಿಯೂರಪ್ಪ ಅವರ ಪೆನ್‌ನಲ್ಲಿ ಇಂಕೇ ಇಲ್ಲ. ಅವರು ಏನೂ ಬರೆಯುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡಿಲ್ಲ. ಹಿಂದಿನ ಸರ್ಕಾರಗಳ ಜನಪರ ಯೋಜನೆಗಳಿಗೆ ಅನುದಾನ ಕಡಿತಗೊಳಿಸುತ್ತಿರುವುದು ಖಂಡನೀಯ. ಆರ್ಥಿಕವಾಗಿ ದಿವಾಳಿ ಎದ್ದಿರುವ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಹಾಗೂ ನಂತರ ಬಂದ ಮೈತ್ರಿ ಸರ್ಕಾರದಲ್ಲಿ ಬಡವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಸಿಎಂ ಯಡಿಯೂರಪ್ಪ ಆ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದ್ದು, ಆರ್ಥಿಕ ದಿವಾಳಿತನಕ್ಕೆ ಸಾಕ್ಷಿ ಎಂದರು.
ಎಂಎಲ್‌ಸಿ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚರ್ಚಿಸಿ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ವಿಪಕ್ಷ ನಾಯಕನ ಸ್ಥಾನಕ್ಕೆ ಬೇಗ ನೇಮಕವಾಗಬೇಕು. ಸಿದ್ದರಾಮಯ್ಯ ಅವರೇ ಆಗಬೇಕೇ ಅಥವಾ ಬೇರೆಯವರು ಆಗಬೇಕೇ ಎನ್ನುವುದು ಹೈಕಮಾಂಡ್ ನಿರ್ಧರಿಸಲಿದ್ದು, ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಮುಗಿಯುವ ಸಾಧ್ಯತೆಗಳಿವೆ. ಮಾಜಿ ಪ್ರಧಾನಿ ದೇವೇಗೌಡರು ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವಲ್ಲಿ ನಿಸ್ಸೀಮರು. ರಮೇಶ ಜಾರಕಿಹೊಳಿ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದಾಗ ಇಂಥ ಸ್ಥಿತಿ ಯಾರಿಗೂ ಬೇಡ ಎಂದು ಪೇಚಾಡಿದ್ದರು. ಎಚ್.ವಿಶ್ವನಾಥ ಸ್ಥಿತಿಯಂತೂ ಕೇಳುವುದೇ ಬೇಡ ಎಂದರು.
ಕುರುಬ ಮತ್ತು ನಾಯಕ ಸಮುದಾಯಗಳು ವಿಮುಖರಾಗುತ್ತಿರುವುದು ಸರಿಯಲ್ಲ. ನಾಯಕರಂತೆ ಕುರುಬ, ಮಾಲೇರ ಸಮಾಜಗಳನ್ನು ಎಸ್‌ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಶೇ.3ರಷ್ಟಿರುವ ಮೀಸಲಾತಿ ಹೆಚ್ಚಿಸುವ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದರು.