ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ನಡುವಿನ ಭಿನ್ನಾಭಿಪ್ರಾಯ ಹಳೆ ಮೈಸೂರು ಭಾಗದಲ್ಲಿ ಮುಂದಿನ ಚುನಾವಣೆಯ ವರೆಗೂ ಮುಂದುವರಿಯುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಕಾಲದ ಹಗರಣಗಳನ್ನು ಮತ್ತೆ ಬಹಿರಂಗಗೊಳಿಸುವುದಕ್ಕೆ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಧ್ಯೆ ದಿನದಿಂದ ದಿನಕ್ಕೆ ವೈಮನಸು ಹೆಚ್ಚುತ್ತಲೇ ಇದೆ. ಜೆಡಿಎಸ್ ಮುಖಂಡರು ಹಾಗೂ ಶಾಸಕರನ್ನು ಸೆಳೆಯುವುದಕ್ಕೆ ಸಿದ್ದರಾಮಯ್ಯ ಹೆಚ್ಚು ಆದ್ಯತೆ ನೀಡಿರುವುದರಿಂದ ಕೆರಳಿರುವ ಕುಮಾರಸ್ವಾಮಿ ಈಗ ಸಿದ್ದರಾಮಯ್ಯ ವಿರುದ್ಧ ಈಗ ಬೇರೆ ಮಾರ್ಗದಲ್ಲಿ ಹೋರಾಟ ಆರಂಭಿಸಲು ನಿರ್ಧರಿಸಿದ್ದಾರೆ.
ಸಿದ್ದರಾಮಯ್ಯ ಕಾಲದಲ್ಲಿ ನಡೆದ ಅರ್ಕಾವತಿ ಡಿನೋಟಿಫಿಕೇಶನ್ ಹಗರಣ ಇನ್ನೂ ತಾರ್ಕಿಕ ಹಂತಕ್ಕೆ ತಲುಪಿಲ್ಲ. ಬಿಜೆಪಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರೂ ಮತ್ತೆ ಮುಂದುವರಿಸುವ ಗೊಡವೆಗೆ ಹೋಗಿಲ್ಲ. ಈ ಸಂಬಂಧ ರಚನೆ ಮಾಡಿದ್ದ ನ್ಯಾ.ಮೂ.ಕೆಂಪಣ್ಣ ಆಯೋಗದ ವರದಿ ಇನ್ನೂ ಬಹಿರಂಗವಾಗಿಲ್ಲ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಅಸ್ತ್ರ ಪ್ರಯೋಗಕ್ಕೆ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಭಾನುವಾರ ಕುಮಾರಸ್ವಾಮಿ ಮಾಡಿರುವ ಟ್ವೀಟ್ ನಲ್ಲಿ ಈ ವಿಚಾರ ಸೂಚ್ಯವಾಗಿದ್ದು, ನಾಲ್ಕು ವರ್ಷಗಳ ಬಳಿಕ ಅರ್ಕಾವತಿ ವಿವಾದ ಮತ್ತೆ ಸದ್ದು ಮಾಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರ್ಕಾವತಿ ಡಿನೋಟಿಫಿಕೇಶನ್ ವಿವಾದ ಸದ್ದು ಮಾಡಿತ್ತು. ಅಂದು ಪ್ರತಿಪಕ್ಷ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಹೋರಾಟವನ್ನು ತಾರ್ಕಿಕ ಅಂತ್ಯಕ್ಜೆ ಕೊಂಡೊಯ್ಯದೇ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.