Advertisement

ಕುಮಾರ ಕುಮ್ಮಕ್ಕೇ ಕಾರಣ: ನೇರಾನೇರದಲ್ಲಿ ಎಚ್‌.ಡಿ. ರೇವಣ್ಣ ಅಸಮಾಧಾನ

01:10 AM Mar 31, 2023 | Team Udayavani |

ಹಾಸನ: ಜೆಡಿಎಸ್‌ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಈಗ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಗೊಂದಲ ನಿತ್ಯವೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಅದೀಗ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ನಡುವಿನ ಪ್ರತಿಷ್ಠೆಯಾಗಿ, ಸಹೋದರರ ಸವಾಲ್‌ ಆಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ “ಉದಯವಾಣಿ’ಗೆ ನೇರಾನೇರ ಮಾತುಕತೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

Advertisement

 ಹಾಸನ ಕ್ಷೇತ್ರದಲ್ಲಿ  ಟಿಕೆಟ್‌ ಹಂಚಿಕೆಗೆ ಇಷ್ಟೊಂದು ಗೊಂದಲವೇಕೆ?

ಹಾಸನದಲ್ಲಿ ಈ ಹಿಂದೆ ಟಿಕೆಟ್‌ ನೀಡುವಲ್ಲಿ ಗೊಂದಲವೇ ಇರುತ್ತಿರಲಿಲ್ಲ. ಎಚ್‌.ಡಿ. ದೇವೇಗೌಡರು ಮತ್ತು ನಾನು ನಿರ್ಧಾರ ಕೈಗೊಳ್ಳುತ್ತಿದ್ದೆವು. ಈ ಬಾರಿ ಟಿಕೆಟ್‌ ವಿಚಾರ ಪ್ರಸ್ತಾವವಾಗುವ ಮೊದಲೇ ಎಚ್‌.ಪಿ. ಸ್ವರೂಪ್‌ ಪೈಪೋಟಿಗಿಳಿದರು. 6 ತಿಂಗಳ ಹಿಂದೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಬೆಂಬಲಿಗರನ್ನು ಕರೆತಂದು ಗದ್ದಲ ಮಾಡಿದರು. ಅನಂತರ  ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನವನ್ನು ನಾನು ಮಾಡುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ವರೂಪ್‌ಗೆ ಕುಮ್ಮಕ್ಕು ನೀಡುತ್ತಾ ಬಂದರು.  ಕುಮಾರಸ್ವಾಮಿ ಅವರು  ಕುಮ್ಕಕ್ಕು ನೀಡಿದ್ದೇ ಈ ಗೊಂದಲಕ್ಕೆ ಕಾರಣ.

 ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಿರುವ ಕುಮಾರಸ್ವಾಮಿ ಏಕೆ ಸ್ವರೂಪ್‌ಗೆ ಕುಮ್ಮಕ್ಕು ನೀಡಿ ಗೊಂದಲ ಮೂಡಿಸುತ್ತಾರೆ?

ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು. ಭವಾನಿ ರೇವಣ್ಣಗೆ ಟಿಕೆಟ್‌ ಕೊಡಬಾರದೆಂದು ಸ್ವರೂಪ್‌ಗೆ ಕುಮ್ಮಕ್ಕು ನೀಡುತ್ತಿರಬಹುದು. ನಾನು ಎನ್‌ಡಿಡಿಬಿ ಕಾರ್ಯಕ್ರಮಕ್ಕೆ ದಿಲ್ಲಿಗೆ ಹೋಗಿದ್ದಾಗ ಹಾಸನದಲ್ಲಿ ಸ್ವರೂಪ್‌ ನಡೆಸುವ ಸಮಾವೇಶಕ್ಕೆ ಕುಮಾರಸ್ವಾಮಿಯವರು ಇಬ್ರಾಹಿಂ ಅವರನ್ನು ಕರೆದುಕೊಂಡು ಬಂದು ಪಾಲ್ಗೊಳ್ಳುವುದಾದರೆ ಏನರ್ಥ? ಇದು ಕುಮ್ಮಕ್ಕು ಅಲ್ಲವೇ?

Advertisement

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡಬೇಕೆಂಬ ನಿಟ್ಟಲ್ಲಿ ಸ್ವರೂಪ್‌ ಬೆಂಬಲಿಸಿದರೆ ತಪ್ಪೇನು?

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸುವ ಚಿಂತನೆ ಸ್ವಾಗತಾರ್ಹ. ಆದರೆ ಸ್ವರೂಪ್‌ ಸಾಮಾನ್ಯ ಕಾರ್ಯಕರ್ತನಲ್ಲ. ಅವರ ತಂದೆ  ಎಚ್‌.ಎಸ್‌. ಪ್ರಕಾಶ್‌ 4 ಬಾರಿ ಶಾಸಕರಾಗಿದ್ದರು. ಅವರ ಚಿಕ್ಕಪ್ಪ ಅನಿಲ್‌ಕುಮಾರ್‌ ಹಾಸನ ನಗರಸಭೆ ಅಧ್ಯಕ್ಷರಾಗಿದ್ದರು. ಸ್ವರೂಪ್‌ ಹಾಸನ ಜಿ.ಪಂ. ಉಪಾಧ್ಯಕ್ಷರಾಗಿದ್ದರು. ಅವರು ಹೇಗೆ ಸಾಮಾನ್ಯ ಕಾರ್ಯ ಕರ್ತರಾಗುತ್ತಾರೆ? ಹಾಸನ ಕ್ಷೇತ್ರದಲ್ಲಿ ಸಾವಿರಾರು ಸಾಮಾನ್ಯ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್‌ ತೊರೆದು ಬಂದ ಕೆ.ಎಂ. ರಾಜೇಗೌಡರಿಗೆ ನಾವು ಯಾವುದೇ ಸ್ಥಾನ ನೀಡಲಾಗಿಲ್ಲ. ರಾಜೇಗೌಡರು  ಮತ್ತು ಅವರಂಥವರು ಸಾಮಾನ್ಯ ಕಾರ್ಯಕರ್ತರು. ಸ್ವರೂಪ್‌ ಸಾಮಾನ್ಯ ಕಾರ್ಯಕರ್ತನಲ್ಲ.

 ಸ್ವರೂಪ್‌ ಮೇಲೆ ನಿಮಗೇಕೆ ಸಿಟ್ಟು , ವಿರೋಧ ?

ಸ್ವರೂಪ್‌ ಮೇಲೆ ನನಗೆ ವೈಯಕ್ತಿಕ ವಿರೋಧ, ಸಿಟ್ಟು ಇಲ್ಲ. ಆದರೆ ಅವರ ಕೆಲವು ನಡವಳಿಕೆಗಳಿಂದ ಬೇಸರವಾಗಿದೆ. ಕಾರ್ಯಕರ್ತರ ಸಭೆಯಲ್ಲಿ ಗಲಾಟೆ ಮಾಡಿಸುವುದು, ದೇವೇಗೌಡರು, ನನ್ನ ಫೋಟೋ ಇರುವ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹರಿದು ಹಾಕಿಸುವು ದನ್ನು ಸಹಿಸಲು ಸಾಧ್ಯವೇ? ಅಷ್ಟಕ್ಕೂ ಸ್ವರೂಪ್‌ ಮತ್ತು ಕುಟುಂಬದವರಿಗೆ ಕಳೆದ 35 ವರ್ಷಗಳಿಂದ ಜನತಾದಳ, ಜೆಡಿಎಸ್‌ನಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ಅವರ ತಂದೆ 20 ವರ್ಷ ಶಾಸಕರಾಗಿದ್ದರು. ಬೇರೆಯವರಿಗೂ ಅವಕಾಶ ಸಿಗಲಿ ಎಂಬುದು ನನ್ನ ಅಭಿಪ್ರಾಯ. 2013ರಲ್ಲಿ  ಪಟೇಲ್‌ ಶಿವರಾಂಗೆ ಟಿಕೆಟ್‌ ನೀಡಬೇಕೆಂದು ದೇವೇಗೌಡರು ನಿರ್ಧರಿಸಿದ್ದರು. ಆದರೆ ನಾನೇ ಮಧ್ಯ ಪ್ರವೇಶಿಸಿ ಪ್ರಕಾಶ್‌ಗೆ ಟಿಕೆಟ್‌ ಕೊಡಿಸಿದ್ದೆ. 2018ರಲ್ಲಿ ಕೆ.ಎಂ. ರಾಜೇಗೌಡರಿಗೆ ಟಿಕೆಟ್‌ ಕೊಡಲೇಬೇಕಾಗಿತ್ತು. ಆದರೆ ಪ್ರಕಾಶ್‌ಗೆ ಅನಾರೋಗ್ಯವಿದ್ದುದರಿಂದ ಇಂತಹ ಸಂದರ್ಭ ದಲ್ಲಿ ಟಿಕೆಟ್‌ ಕೊಡದಿದ್ದರೆ ಕೆಟ್ಟ ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಟಿಕೆಟ್‌ ಕೊಡಲಾಯಿತು. ಈಗ ಸ್ವರೂಪ್‌ ಅವರಿಗೆ ಟಿಕೆಟ್‌ ಕೊಡಬೇಕು ಎಂದರೆ ರಾಜೇಗೌಡರಿಗೆ ಏನು ಉತ್ತರ ಹೇಳುವುದು?

 ಭವಾನಿ ರೇವಣ್ಣ ಹಾಸನದಲ್ಲಿ ನಿಲ್ಲಬೇಕು ಎಂಬ ಹಠ ಏಕೆ?

ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡಬೇಕು ಎಂಬ ಹಠವಲ್ಲ. ಜಿಲ್ಲಾ ಕೇಂದ್ರದಲ್ಲಿ ಗಟ್ಟಿ ನಾಯಕತ್ವ ಬೇಕು. ಹಾಸನ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರಿಗೆ ಏನೇ ತೊಂದರೆ ಯಾದರೂ ನಾನು ಅಥವಾ ಪ್ರಜ್ವಲ್‌ ರೇವಣ್ಣ, ಭವಾನಿ ರೇವಣ್ಣ ಅವರೇ ಬರಬೇಕು. ಎಚ್‌.ಎಸ್‌. ಪ್ರಕಾಶ್‌ ಇರುವ ತನಕ ಕಾರ್ಯಕರ್ತರ ಪರವಾಗಿ ನಿಲ್ಲುತ್ತಿದ್ದರು. ಪಕ್ಷಕ್ಕೆ ನಿಷ್ಠರಾಗಿದ್ದರು. ಆದರೆ ಅವರ ನಿಧನಾ ಅನಂತರ ಸ್ವರೂಪ್‌ ಯಾವಾಗ ಎದೆಕೊಟ್ಟು ಕಾರ್ಯಕರ್ತರ ರಕ್ಷಣೆಗೆ ನಿಂತಿದ್ದಾರೆ ಹೇಳಲಿ ನೋಡೋಣ. ಭವಾನಿ ಅವರು ವಿಧಾನಪರಿಷತ್‌ ಸದಸ್ಯರಾಗಬೇಕಾಗಿತ್ತು. ಆದರೆ 2012ರಲ್ಲಿ ಪಟೇಲ್‌ ಶಿವರಾಂಗೆ 2ನೇ ಬಾರಿ ವಿಧಾನಪರಿಷತ್‌ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿ ಆಗ ತ್ಯಾಗ ಮಾಡಿದರು. ಬೇಲೂರು ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂದು ಸುದ್ದಿ ಹರಡಿದರು. ಆದರೆ ಬೇಲೂರಿನಲ್ಲಿ ವೀರಶೈವ ಸಮಾಜದವರಿಗೆ ಅವಕಾಶ ನೀಡಬೇಕೆಂದು ಆಗಲೂ ಸಹಕರಿಸಿದರು. ಈಗ ಹಾಸನ ಕ್ಷೇತ್ರಕ್ಕೆ ಟಿಕೆಟ್‌ ಕೇಳಿದ್ದಾರೆ. ಕೊಡುವುದು,ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು.

 ಸ್ವರೂಪ್‌ ಯಾರು ಅಂತ ಗೊತ್ತಿಲ್ಲಾ ಅಂತೀರಿ, ಅಷ್ಟೊಂದು ಅವಗಣನೆ ಸರಿಯೇ? 

ಯಾರನ್ನೂ ಅವಗಣಿಸುವ ಪ್ರಶ್ನೆ ಇಲ್ಲ. ಸ್ವರೂಪ್‌ ನಡೆಯ ಬಗ್ಗೆ ಬೇಸರವಿದೆ. ನಾವು ಕರೆದು ಮಾತನಾಡಲೂ ಪ್ರಯತ್ನಿಸಿದರೂ ಆತ ಸ್ಪಂದಿಸುತ್ತಿಲ್ಲ. ನಾನು ಹಾಸನದಲ್ಲಿಲ್ಲವೇ? ನನ್ನ ಬಳಿ ಮಾತನಾಡುವುದಿಲ್ಲ, ಬೆಂಗಳೂರಿಗೆ ಹೋಗುವುದಾದರೆ ನಾನೇನು ಹಾಸನ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಲ್ಲವೇ? ಸ್ವರೂಪ್‌ ಅವರು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಕೊಂಡು ಬಂದಿದ್ದಾರೆ ಎಂಬ ಪ್ರಶ್ನೆಗೆ, ಯಾರು ಹೋಗಿದ್ದರೋ ಗೊತ್ತಿಲ್ಲ. ಯಾರೂ ಮಾತನಾಡಿದ್ದಾರೋ ಗೊತ್ತಿಲ್ಲ ಎಂದು ಸಿಟ್ಟಿನಿಂದ ಹೇಳಿದೆನೇ ಹೊರತು. ಉದ್ದೇಶಪೂರ್ವಕವಾಗಿ ಸ್ವರೂಪ್‌ ಗೊತ್ತಿಲ್ಲ ಎಂದು ಹೇಳಿಲ್ಲ.

 ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ರಾಜ್ಯ ಅಧ್ಯಕ್ಷ ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಇದ್ದಾರೆ. ಅವರನ್ನೊಳಗೊಂಡ ಸಭೆಯಲ್ಲಿ ಅಲ್ಲಿ ಚರ್ಚೆ ಆಗದೆ ಎಚ್‌ಡಿಕೆ ಮತ್ತು ನೀವೇ ಟಿಕೆಟ್‌ ಫೈನಲ್‌ ಮಾಡುವಂತೆ ನಡೆದುಕೊಳ್ಳುತ್ತಿದ್ದೀರಲ್ಲಾ?

ಟಿಕೆಟ್‌ ಘೋಷಣೆ ಆಗಬೇಕಾದರೆ ಪಕ್ಷದ ವರಿಷ್ಠರೆಲ್ಲ ತೀರ್ಮಾನ  ಕೈಗೊಳ್ಳುತ್ತಾರೆ, ಅಣ್ಣ – ತಮ್ಮ ಮಾತ್ರ ಮಾಡುವುದ‌ಲ್ಲ. ನಾನು ಹಲವು ಬಾರಿ ದೇವೇಗೌಡರು, ಇಬ್ರಾಹಿಂ, ಕುಮಾರಸ್ವಾಮಿಯವರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದೇನೆಯೇ  ಹೊರತು ನಾನು ಹೇಳಿದಂತೆ ಆಗಬೇಕು ಎಂದಿಲ್ಲ. ಸ್ಪರ್ಧಾ ಕಾಂಕ್ಷಿಗಳು ಟಿಕೆಟ್‌ ಕೇಳುತ್ತಿರಬಹುದು. ಆದರೆ ಈಗಲೂ ವರಿಷ್ಠರು ತೀರ್ಮಾನ ಮಾಡಿದ ಅನಂತರವೇ ಟಿಕೆಟ್‌ ಘೋಷಣೆ ಆಗುತ್ತದೆ.  ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಹಾಸನ ಕ್ಷೇತ್ರದಲ್ಲಿ ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ನಮ್ಮ ಎದುರಾಳಿ ಎಷ್ಟೇ ಕುತಂತ್ರ ನಡೆಸಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ.

ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next