ಚಿಕ್ಕಬಳ್ಳಾಪುರ: ಹಾಸನ ಸಹಿತ ಕೆಲವೊಂದು ಕ್ಷೇತ್ರಗಳಲ್ಲಿರುವ ಟಿಕೆಟ್ ಗೊಂದಲಗಳು ಶೀಘ್ರ ಇತ್ಯರ್ಥವಾಗಲಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಿಸಲು ಜನ ತೀರ್ಮಾನ ಮಾಡಿದ್ದಾರೆ. ಅದು ನನ್ನ ಗುರಿ ಅದು ಹೊರತುಪಡಿಸಿ, ಯಾವ ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಅವರು ಹೇಳಿದ್ದಾರೆ. ನಾಚಿಕೆ ಆಗಬೇಕು ಅವರಿಗೆ, ಈ ರೀತಿಯ ಚಿಲ್ಲರೇ ರಾಜಕಾರಣ ಮಾಡುವುದು ಅವರಿಗೆ ಶೋಭೆ ತರುವುದಿಲ್ಲವೆಂದು ತಿರುಗೇಟು ನೀಡಿದರು. ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಸ್ಥಳೀಯ ನಾಯಕರು ಪ್ರಸ್ತಾವ ಮಾಡಿದ್ದು ನಿಜ. ಆದರೆ, ನಾನು ಅದನ್ನು ನಿರಾಕರಿಸಿದ್ದೇನೆ. ಡಿ.ಜೆ.ನಾಗರಾಜ್‌ರೆಡ್ಡಿ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಿದ್ದೇವೆ ಎಂದರು.
ಜನ ತಕ್ಕಪಾಠ ಕಲಿಸುತ್ತಾರೆ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರನ್ನು ಯಾರು ಏನು ಮಾಡಲಿಕ್ಕೆ ಆಗಲಿಲ್ಲ. ಆದರೆ, ದೇವೇಗೌಡ ಅವರ ಬೆನ್ನಿಗೆ ಚೂರಿ ಹಾಕಿದವರಿಗೆ ಈ ರಾಜ್ಯದ ಜನ ಸೂಕ್ತ ಪಾಠ ಕಲಿಸಿದ್ದಾರೆ. ದೇವೇಗೌಡ ಅವರೊಂದಿಗೆ ಇದ್ದು ಕೈಕೊಟ್ಟವರ ಸ್ಥಿತಿ ಏನಾಗಿದೆಯೆಂಬುದು ಇತಿಹಾಸ ಹೇಳುತ್ತದೆ. ಯಾರಿಂದಲೂ ಸರ್ಟಿಫಿಕೇಟ್ ಪಡೆಯಬೇಕಿಲ್ಲ ಎಂದು ಪರೋಕ್ಷವಾಗಿ ಕೃಷ್ಣಬೈರೇಗೌಡ ವಿರುದ್ಧ ವಾಗ್ಧಾಳಿ ನಡೆಸಿದರು.