Advertisement

ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಕಷ್ಟವನ್ನುಇನ್ನು ದೇವರೇ ಕಾಪಾಡಬೇಕು: ಎಚ್ ಡಿಕೆ

08:59 AM May 01, 2021 | Team Udayavani |

ಬೆಂಗಳೂರು: ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಸರ್ಕಾರ ಬೀಗ ಜಡಿಯಲ್ಲ ಎಂದಿದ್ದ ಮುಖ್ಯಮಂತ್ರಿಗಳು ಸದ್ದಿಲ್ಲದಂತೆ ಎಲ್ಲಾ ಜಿಲ್ಲಾ ಮತ್ತು ಕೆಲವು ತಾಲ್ಲೂಕು ಮಟ್ಟದ 71 ಕೇಂದ್ರಗಳ ಸಾಂತ್ವನ‌ ಕೇಂದ್ರಗಳಿಗೆ ಬೀಗ ಜಡಿಸಿ ಮಾತು ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್ 19 ಸಂಕಷ್ಟದಲ್ಲಿ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ ಎಂದಿದ್ದಾರೆ.

ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ, ಆತ್ಮವಿಶ್ವಾಸ ಮೂಡಿಸುತ್ತಿವೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿ ಅದೇಶ ಹೊರಡಿಸಿರುವುದು ದೂರು ದುಮ್ಮಾನ ಪರಿಹರಿಸುವವರು ಯಾರು ಎಂಬ ಪ್ರಶ್ನೆ‌ ಎದುರಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಭಾರತ ಕೋವಿಡ್ ಸಂಕಷ್ಟದಲ್ಲಿದ್ದರೆ, ಲಡಾಖ್ ನಲ್ಲಿ ಕುತಂತ್ರವಾಡುತ್ತಿದೆ ಕಪಟಿ ಚೀನಾ!

ಸರ್ಕಾರದ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆ ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಸಲಹೆ ನೀಡುವ ಉದ್ದೇಶವನ್ನು ಹೊಂದಿದ್ದರೂ ಕರ್ನಾಟಕದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ. ಜಿಲ್ಲೆಗೆ ಕೇವಲ ಒಂದೇ ಒಂದು ಕೇಂದ್ರ ಇರುವ ಕಾರಣ ಎಲ್ಲರಿಗೂ ಸುಲಭವಾಗಿ ನೆರವು ಸಿಗಲು ಸಾಧ್ಯವಾಗುತ್ತಿಲ್ಲ ಎಂದು ಎಚ್ ಡಿಕೆ ಹೇಳಿದ್ದಾರೆ.

Advertisement

ಕೌಟುಂಬಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಕಷ್ಟವನ್ನು ದೇವರೇ ಕಾಪಾಡಬೇಕಿದೆ. ಈ ಸಮಯದಲ್ಲಿ ಸಾಂತ್ವನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದು ಸೂಕ್ತವಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಕೂಡಲೇ ಅದೇಶ ಹಿಂಪಡೆದು ಸಾಂತ್ವನ ಕೇಂದ್ರಗಳನ್ನು ಮುಂದುವರೆಸಿ, ಶೋಷಿತ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳು ಆಸರೆಯಾಗಲಿ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next