Advertisement

ಮನಗೂಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ: ಡಿಕೆಶಿಗೆ ಕುಮಾರಸ್ವಾಮಿ ತರಾಟೆ

12:39 PM Oct 09, 2021 | Team Udayavani |

ಬೆಂಗಳೂರು: ತಾವು ನಿಧನರಾಗುವುದಕ್ಕೆ ಹದಿನೈದು ದಿನ ಮೊದಲು ಎಂ.ಸಿ.ಮನಗೂಳಿ ಅವರು ತಮ್ಮ ಮನೆಗೆ ಬಂದು ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಕೇಳಿದ್ದರು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಅವರು, ಡಿಕೆ ಶಿವಕುಮಾರ್ ಅಪ್ಪಟ ಸುಳ್ಳು ಹೇಳುತ್ತಿದ್ದಾರೆಂದು ಟೀಕಿಸಿದ್ದಾರೆ.

ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ವ್ಯಕ್ತಿ ಇಲ್ಲವಾದ ಮೇಲೆ ಅವರ ವಿಚಾರದಲ್ಲಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ, ವೈಯಕ್ತಿಕವಾಗಿ ʼಅನೈತಿಕʼ ಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ʼಅಪ್ಪಟ ಸುಳ್ಳುʼ ಹೇಳುವ ಮೂಲಕ ದಿವಂಗತ ನಾಯಕ ಎಂಸಿ ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಾವು ನಿಧನರಾಗುವುದಕ್ಕೆ 15 ದಿನ ಮೊದಲು ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬೇರೆ ಇಲ್ಲ. ಸತ್ಯ ಏನೆಂದರೆ; ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. 19 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು. ಜನವರಿ 9ರಂದು ಮನಗೂಳಿ ಅವರು ಅಪೊಲೋ ಆಸ್ಪತ್ರೆಗೆ ದಾಖಲಾಗಿ, ಜನವರಿ 28ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳು ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದಿದ್ದಾರೆ.

ಇದನ್ನೂ ಓದಿ:ಯಾವ ಹೊಟೆಲ್ ನಲ್ಲಿ ಏನು ನಡಿದಿದೆ ಎಂದು ಗೊತ್ತಿದೆ: ಜಾರಕಿಹೊಳಿ ವಿರುದ್ಧ ಡಿಕೆಶಿ ಗುಡುಗು

Advertisement

ಹಾಗಾದರೆ, ಮನಗೂಳಿ ಅವರು ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ʼಹಸಿಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆʼ. ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಂಧಗಿ ಜನತೆಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ಪಕ್ಷದ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಮಾನ್ಯ ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ದಿವಂಗತ ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next